ಈಶ್ವರಪ್ಪ ಯಾರೆಂದು ಗೊತ್ತಿಲ್ಲ ಎಂದ ಅಗರವಾಲ್‌:  ಬಿಜೆಪಿ ಓಬಿಸಿ ಘಟಕದ ಜಿಲ್ಲಾಧ್ಯಕ್ಷರ ಆಕ್ರೋಶ
x

ಈಶ್ವರಪ್ಪ ಯಾರೆಂದು ಗೊತ್ತಿಲ್ಲ ಎಂದ ಅಗರವಾಲ್‌: ಬಿಜೆಪಿ ಓಬಿಸಿ ಘಟಕದ ಜಿಲ್ಲಾಧ್ಯಕ್ಷರ ಆಕ್ರೋಶ

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್‌ ಅವರು, ʻʻಶಿವಮೊಗ್ಗ ಪಕ್ಷೇತರ ಅಭ್ಯರ್ಥಿ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿದರು.


ಬಾಗಲಕೋಟೆ: ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್‌ ಅವರು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಯಾರು ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಬಿಜೆಪಿ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ವೀರಣ್ಣ ಹಳೇಗೌಡರ ಅವರು ಪ್ರತಿಕ್ರಿಯಿಸಿ, ರಾಜ್ಯದ ಜನತೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಗರವಾಲ್ ಯಾರು ಎನ್ನುವುದು ಕೂಡ ಗೊತ್ತಿಲ್ಲ ಎಂದು ಭರ್ಜರಿ ತಿರುಗೇಟು ಕೊಟ್ಟಿದ್ದಾರೆ.

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್‌ ಅವರು, ʻʻಶಿವಮೊಗ್ಗ ಪಕ್ಷೇತರ ಅಭ್ಯರ್ಥಿ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿದರು.

ಈ ವೇಳೆ, "ಪಕ್ಷಕ್ಕೆ ದುಡಿದ ನಾಯಕನ ಬಗ್ಗೆ ಗೊತ್ತಿಲ್ಲ ಎಂದರೆ ಹೇಗೆ?" ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻವ್ಯಕ್ತಿಗೆ ಅಪಮಾನ ಅವರ ಹೆಸರಿನಿಂದ ಆಗುವುದಿಲ್ಲ. ಬದಲಾಗಿ ಅವರು ಮಾಡಿದ ಕಾರ್ಯದಿಂದ ಆಗುತ್ತದೆ. ಬಿಜೆಪಿಯ ಕಾರ್ಯಕರ್ತ ಎಂತಹ ಪರಿಸ್ಥಿತಿಯಲ್ಲೂ ಕೂಡ ಬಿಜೆಪಿ ಪಕ್ಷದೊಂದಿಗೆ ಇರ್ತಾರೆ. ಇಷ್ಟು ಬಿಟ್ಟು ಅವರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲʼʼ ಎಂದರು.

ಪ್ರಚಾರದಲ್ಲಿ ಈಶ್ವರಪ್ಪನವರು ಮೋದಿಯವರ ಫೋಟೊ ಬಳಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ʻʻಕ್ರಮ ತೆಗೆದುಕೊಳ್ಳುವುದು ಚುನಾವಣಾ ಆಯೋಗದ ಕೆಲಸ, ಚುನಾವಣೆಯಲ್ಲಿ ಅಕ್ರಮ ನಡೆಯುವುದಿಲ್ಲ. ಕರ್ನಾಟಕದಂತಹ ವಿದ್ಯಾವಂತರು ಬುದ್ದಿವಂತರು ಇರುವ ನಾಡಲ್ಲಿ ಜನರನ್ನು ವಂಚಿಸಿ ಜನರನ್ನು ಮೋಸ ಮಾಡಿ ಮತ ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಸುಶಿಕ್ಷಿತ, ವಿಕಸಿತವಾದ ಆಧುನಿಕ ಪ್ರದೇಶ ಇದೆ. ಇಲ್ಲಿ ಮೋಸ ನಡೆಯುವುದಿಲ್ಲ. ಮೋದಿ ಅವರ ಫೋಟೊ ಬಳಸಿ ಪ್ರಚಾರ ಮಾಡ್ತಾ ಇದ್ದಾರೆ. ಈ ವಿಚಾರದ ಬಗ್ಗೆ ನಗು ಬರುತ್ತೆ, ಪ್ರಧಾನಿ ಮೋದಿ ಯಾರಿಗೆ ಟಿಕೆಟ್ ನೀಡಿದ್ದಾರೋ ಅವರು ಮಾತ್ರ ಬಳಸಲಿ, ಚುನಾವಣೆ ಸಂದರ್ಭದಲ್ಲಿ ಚುನಾವಣೆ ನಿಯಮಗಳನ್ನು ಪಾಲಿಸಬೇಕು. ವಂಚನೆ ಮಾಡಿದ್ರೆ ಇಂಡಿಯನ್ ಪೀನಲ್ ಕೋಡ್‌ ಪ್ರಕಾರ 420 ಎನ್ನುವ ಸೆಕ್ಷನ್ ಇದೆ. ಇದು ಫೋರ್‌ ಟ್ವೆಂಟಿ(420) ರಾಜಕೀಯ, ಶಿವಮೊಗ್ಗದಲ್ಲಿ ಬಿಜೆಪಿ ಪರವಾಗಿಯೇ ದೊಡ್ಡ ಅಲೆ ಇದೆ" ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.

ಈಶ್ವರಪ್ಪ ಯಾರು ಎಂಬುದೇ ಗೊತ್ತಿಲ್ಲ ಎಂದು ರಾಧಾಮೋಹನ ದಾಸ್ ಅಗರವಾಲ್‌ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ವೀರಣ್ಣ ಹಳೇಗೌಡರ ಹಾಗೂ ಕುರುಬ ಸಮುದಾಯದ ನಾಯಕರು ಕೆಂಡಮಂಡಲರಾಗಿದ್ದಾರೆ.

ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೀರಣ್ಣ ಹಳೇಗೌಡರ ಅವರು, ʻʻಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಕೆ.ಎಸ್‌. ಈಶ್ವರಪ್ಪನವರ ಪಾತ್ರ ಬಹು ದೊಡ್ಡದಾಗಿದೆ. ಅಂತಹ ಹಿಂದುಳಿದ ವರ್ಗದ ನಾಯಕರಿಗೆ ಬಿ.ಎಸ್‌.ಯಡಿಯೂರಪ್ಪ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕಾದ ಹಿರಿಯ ನಾಯಕರು ಮೌನಕ್ಕೆ ಜಾರಿರುವುದು ಸರಿಯಲ್ಲʼʼ ಎಂದು ಹೇಳಿದ್ದಾರೆ.

ʻʻಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ಟಿಕೆಟ್ ತಪ್ಪಿಸಲಾಯಿತು. ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ, ದುಡಿದಿದ್ದಾರೆ. ನಂತರ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪುತ್ರ ಕಾಂತೇಶಗೆ ಟಿಕೆಟ್‌ ನೀಡುವ ಭರವಸೆ ನೀಡಲಾಗಿತ್ತು. ದುರದ್ದೇಶದಿಂದ ಟಿಕೆಟ್ ತಪ್ಪಿಸಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ. ಇನ್ನೂ ಕಾಲ ಮಿಂಚಿಲ್ಲ. ಯಡಿಯೂರಪ್ಪ ಅವರು ತಮ್ಮ ಪುತ್ರನನ್ನು ಕಣದಿಂದ ಹಿಂದಕ್ಕೆ ಸರಿಸಿ ಈಶ್ವರಪ್ಪನವರನ್ನು ಶಿವಮೊಗ್ಗ ಕ್ಷೇತ್ರಕ್ಕೆ ಅಂತಿಮಗೊಳಿಸಬೇಕು. ಆ ಮೂಲಕ ಬಿ.ಎಸ್ ಯಡಿಯೂರಪ್ಪ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆʼʼ ಎಂದು ಮನವಿ ಮಾಡಿದರು.

ಇದೇ ವೇಳೆ ಕೆ.ಎಸ್. ಈಶ್ವರಪ್ಪ ಕುರಿತು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ಅವರ ಹೇಳಿಕೆ ಕುರಿತು ಕೆಂಡಾಮಂಡಲರಾದ ಹಳೇ ಗೌಡರ, ʻʻರಾಜ್ಯದ ಜನತೆಗೆ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅಗರವಾಲ್ ಯಾರು ಎನ್ನುವುದೇ ಗೊತ್ತಿಲ್ಲ. ನಮಗೂ ಕೂಡ ಅಗರವಾಲ್‌ ಯಾರೆಂದು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

ʻʻಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಪಕ್ಷದ ಪರವಾಗಿ ಕೆಲಸ ಮಾಡಿದವರ ಬಗ್ಗೆ ಗೌರವದಿಂದ ಮಾತನಾಡಬೇಕು. ಕೆ.ಎಸ್.ಈಶ್ವರಪ್ಪ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಬಿಜೆಪಿ ಪಕ್ಷ ಬಿಟ್ಟು ಹೋಗಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಗಿಂತಲೂ ಈಶ್ವರಪ್ಪನವರ ಪಕ್ಷ ನಿಷ್ಠೆ ಮೇಲುಗೈ ಇದೆʼʼ ಎಂದು ಹೇಳಿದರು.

Read More
Next Story