Mysore MUDA Scam | ಸಿಎಂ ಭಂಡತನ ಬಯಲಾಗುತ್ತಿದೆ: ಕೇಂದ್ರ ಸಚಿವ ಎಚ್‌ಡಿಕೆ
x

Mysore MUDA Scam | ಸಿಎಂ ಭಂಡತನ ಬಯಲಾಗುತ್ತಿದೆ: ಕೇಂದ್ರ ಸಚಿವ ಎಚ್‌ಡಿಕೆ

ಮುಜಗರ ಇಲ್ಲದೆ ಆಡಳಿತ ನಡೆಸೋಕೆ ಕುಮಾರಸ್ವಾಮಿ ಬಿಡುತ್ತಿಲ್ಲ, ಇವನನ್ನು ಮಟ್ಟ ಹಾಕಿದರೆ ನನಗೆ ಯಾರ ಅಡ್ಡಿ ಇರುವುದಿಲ್ಲ ಎಂದು ಅವತ್ತೇ ನನ್ನ ವಿರುದ್ಧ ಸಿಎಂ ಕುತಂತ್ರ ಮಾಡಿದರು. ಜನರ ಪರವಾಗಿ ಹೋರಾಟ ಮಾಡಿದ್ದಕ್ಕೆ ಪ್ರತಿಯಾಗಿ ನಾನು ಇವತ್ತು ಆರೋಪಗಳನ್ನುಎದುರಿಸಬೇಕಿದೆ. ಧೈರ್ಯವಾಗಿ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ


ಕುಮಾರಸ್ವಾಮಿ ರಾಜೀನಾಮೆ ಕೊಟ್ಟರಾ? ಎಂದು ಕೇಳಿದ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ನನ್ನ ಮೇಲಿನ ಪ್ರಕರಣಗಳಿಗೂ ನಿಮ್ಮ ಹಗರಣಕ್ಕೂ ವ್ಯತ್ಯಾಸ ಇದೆ ಎಂದಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ನನ್ನ ಮೇಲಿನ ಆರೋಪಗಳ ಮಾತು ಆಮೇಲೆ. ನಿಮ್ಮ ವಿರುದ್ಧ ಹೈಕೋರ್ಟ್, ಜನಪ್ರತಿನಿಧಿಗಳ ನ್ಯಾಯಾಲಯಗಳಿಂದ ಆದೇಶಗಳು ಬಂದಿವೆ. ಅದಕ್ಕೇನು ಹೇಳುತ್ತೀರಿ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಹೈಕೋರ್ಟ್ ನಲ್ಲಿ ವಾದ ಮಾಡುವಾಗ ವಕೀಲರು ಮೂಡಾ ಹಗರಣದ ಅಕ್ರಮಗಳನ್ನು ಎಳೆ- ಎಳೆಯಾಗಿ ಕೋರ್ಟ್ ಕಲಾಪದಲ್ಲಿ ಬಿಚ್ಚಿಟ್ಟಿದ್ದಾರೆ. ನ್ಯಾಯಾಲಯಗಳ ಆದೇಶವೂ ಬಂದಿದೆ. ಹೇಳಿಕೊಳ್ಳುವುದಕ್ಕೆ ನಿಮಗೆ ಏನಿದೆ? ಎಂದು ಟಾಂಗ್ ನೀಡಿದ್ದಾರೆ.

ಕುಮಾರಸ್ವಾಮಿ ಸರ್ಕಾರಿ ಭೂಮಿ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಬಗ್ಗೆಯೂ ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನು ಹಿಂದೆಯೆ ಹೇಳಿದೇನೆ. ಅರ್ಜಿ ಹಾಕದಿರುವ ಕಂಪನಿಗೆ ಗಣಿ ಗುತ್ತಿಗೆ ಕೊಡಲಾಗಿದೆ ಎನ್ನುತ್ತಿದ್ದಾರೆ. ಅವರು ಅರ್ಜಿ ಹಾಕಿದ್ದಾರೆ, ಆದರೆ ಅವರಿಗೆ ಗಣಿ ಗುತ್ತಿಗೆ ನೀಡಲಾಗಿಲ್ಲ. ಅವರಿಗೆ ಒಂದು ಇಂಚು ಭೂಮಿಯನ್ನೂ ಕೊಡಲಾಗಿಲ್ಲ, ರಾಜ್ಯ ಬೊಕ್ಕಸಕ್ಕೆ ನಯಾಪೈಸೆ ನಷ್ಟ ಆಗಿಲ್ಲ. ಹೀಗಿದ್ದ ಮೇಲೆ ಅದು ಹಗರಣ ಹೇಗೆ ಆಗುತ್ತದೆ ಎಂದು ಕೇಂದ್ರ ಸಚಿವರು ಕೇಳಿದರು.

ರಾಜ್ಯ ಸರ್ಕಾರ 2009ರಲ್ಲೇ ಭೂಮಿ ಯಾರಿಗೂ ಕೊಡಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಯಾರೋ ಒಬ್ಬ ಅಧಿಕಾರಿ ಮಾಡಿದ ತಪ್ಪಿಗೆ ಕುಮಾರಸ್ವಾಮಿ ಮೇಲೆ ಆರೋಪ ಮಾಡುತ್ತಿದ್ದಾರೆ ಇವರು. ಜಂತಕಲ್ ಮೈನಿಂಗ್ ವಿಚಾರದಲ್ಲಿ ಆಗಿನ ಸಿಎಂ ಆದೇಶ ಮಿಸ್ ಕಂಡಕ್ಟ್ ಆಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ನ್ಯಾ.ಸಂತೋಷ ಹೆಗಡೆ ಅವರು ಹಾಗೆಂದು ಉಲ್ಲೇಖ ಮಾಡಿದ್ದಾರೆ. ಅದರ ಹೊರತಾಗಿ ಹಣ ಪಡೆದುಕೊಂಡೊ ಅಥವಾ ಭೂಮಿಗಾಗಿ, ಲಾಭಕ್ಕಾಗಿ ಮಾಡಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಸಾಯಿ ವೆಂಕಟೇಶ್ವರ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ 2012ರಿಂದ ಇದೆ ಎಂದು ಮಾಹಿತಿ ನೀಡಿದರು.

ಮೂಡಾ ಹಗರಣ ಬಗ್ಗೆ ಚರ್ಚೆ ನಡೆಯುತ್ತಿದೆ. ಹೈಕೋರ್ಟ್ ಪೀಠದಲ್ಲಿ ಸಿಎಂ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಕೋರ್ಟ್ ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಹಲವಾರು ಕಾನೂನು ತಜ್ಞರು ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಆದೇಶದ ಬಗ್ಗೆ ಮಾಧ್ಯಮಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸುದ್ದಿ ಪ್ರಸಾರವಾಗಿದೆ. ಆದರೆ, ಸಿಎಂ ಸಾಹೇಬರಿಗೆ ಕೋರ್ಟ್ ಆದೇಶದ ಪ್ರತಿಯೇ ಸಿಕ್ಕಿಲ್ಲವಂತೆ. ನಿಮ್ಮ ವಿರುದ್ಧ ಬಂದಿರುವ ಆದೇಶದ ಬಗ್ಗೆ ಮಾತನಾಡಿ ಎಂದರೆ, ಜೆಡಿಎಸ್ ಬಿಜೆಪಿ ಒಳಸಂಚು ಮಾಡಿವೆ, ಕುಮಾರಸ್ವಾಮಿ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಕೇಳುತ್ತಾರೆ ಸಿದ್ದರಾಮಯ್ಯ ಅವರು. ಇದು ನಮ್ಮ ಸಿಎಂ ವರಸೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ನನ್ನ ರಾಜಿನಾಮೆಯನ್ನು ಸಿಎಂ, ಡಿಸಿಎಂ ಆದಿಯಾಗಿ ಎಲ್ಲರು ಕೇಳಿದ್ದಾರೆ. ನನ್ನ ಮೇಲಿನ ಆರೋಪ ಮುಕ್ತವಾದ ಮೇಲೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದೇನೆ. ಮೂಡಾ‌ ವಿಚಾರದಲ್ಲಿ ನಿಮ್ಮ ಭಂಡತನ ಎಷ್ಟು ಎಂಬುದನ್ನು ಇವರೇ ತೋರಿಸುತ್ತಿದ್ದಾರೆ. ಜನ ಇವರ ನಾಟಕ ನೋಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಹಿಂದೆ ಇದೇ ಸಿದ್ದರಾಮಯ್ಯ ಐದು ವರ್ಷಗಳ ಸರ್ಕಾರ ಮಾಡಿದ್ದಾಗ ದಿನವೂ ಇಂಥವೇ ಅಕ್ರಮಗಳನ್ನು ನಡೆಸಿದ್ದರು. ಅದನ್ನು ದಿನವೂ ನಾನು ಪ್ರಶ್ನೆ ಮಾಡುತ್ತಿದ್ದೆ. ಇವನೊಬ್ಬನಿಂದ ನನಗೆ ಮುಜುಗರ ಇಲ್ಲದೆ ಆಡಳಿತ ನಡೆಸೋಕೆ ಆಗುತ್ತಿಲ್ಲ, ಇವನನ್ನು ಮಟ್ಟ ಹಾಕಿದರೆ ನನಗೆ ಯಾರ ಅಡ್ಡಿ ಇರುವುದಿಲ್ಲ ಎಂದು ಅವತ್ತೇ ನನ್ನ ವಿರುದ್ಧ ಕುತಂತ್ರ ಮಾಡಿದರು. ಜನರ ಪರವಾಗಿ ಹೋರಾಟ ಮಾಡಿದ್ದಕ್ಕೆ ಪ್ರತಿಯಾಗಿ ನಾನು ಇವತ್ತು ಇದೆಲ್ಲಾ ಎದುರಿಸಬೇಕಿದೆ. ಧೈರ್ಯವಾಗಿ ಎದುರಿಸುತ್ತೇನೆ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಹೆದರಿಸಿ ಕುಮಾರಸ್ವಾಮಿ ಬಾಯಿ ಮುಚ್ಚಿಸಿಸಬಹುದು ಎಂದು ಕಾಂಗ್ರೆಸ್ ನವರು ಭಾರೀ ಸಂಚು ಮಾಡಿದರು. ಆದರೂ ಇವರಿಗೆ ನನ್ನ ಬಾಯಿ ಮುಚ್ಚಿಸಲು ಸಾಧ್ಯವಾಯಿತಾ? ಯಾರಿಂದಲೂ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು ಅವರು.

ಡಿನೋಟಿಫಿಕೇಶನ್ ವಿಚಾರಕ್ಕೆ ಬರುವುದಾರೆ, ರಾಜಶೇಖರಯ್ಯ ಅನಾಮಿಕ ಎಂದು ಸಚಿವರು ಹೇಳಿದ್ದಾರೆ. 2007ರ ವಿಳಾಸವನ್ನು ಈಗ ಹುಡುಕಿಕೊಂಡು ಹೋದರೆ ಏನು ಪ್ರಯೋಜನ? ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಹುಡುಕಿಕೊಂಡು ಯಾಕೆ ಹೋಗಲಿಲ್ಲ? ಇವರು ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನನ್ನ ನೈತಿಕತೆಯನ್ನು ಸಾಬೀತು ಮಾಡಿ ಉತ್ತರ ಕೊಡುತ್ತೇನೆ ಎಂದು ಅವರು ಸವಾಲು ಹಾಕಿದರು.

ಗಂಗೇನಹಳ್ಳಿ ಭೂಮಿ ಸರ್ಕಾರಿ ಭೂಮಿ ಎಂದು ಸುಳ್ಳು ಹೇಳಿದ್ದಾರೆ. ಸ್ವಾಧೀನ ಮಾಡಿಕೊಂಡ ಭೂಮಿಗೆ ಬಿಡಿಎ ಪರಿಹಾರ ನೀಡಿದ್ದಾರೆಯೇ? ಅಲ್ಲಿ ಬಡಾವಣೆ ಮಾಡಲಾಗಿದೆಯೇ? ಯಾರಿಗಾದರೂ ನಿವೇಶನ ಹಂಚಿಕೆ ಆಗಿದೆಯಾ? 1975-7 6ರಲ್ಲಿ ಅದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 2007ವರೆಗೂ ಸ್ವಾಧೀನ ಮಾಡಿಕೊಂಡಿದ್ದ ಜಾಗದಲ್ಲಿ ನಿವೇಶನ ಮಾಡಿ ಹಂಚಿಲ್ಲ? ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಐದು ವರ್ಷದಲ್ಲಿ ಉಪಯೋಗ ಮಾಡಿಕೊಳ್ಳದಿದ್ದರೆ ಆ ಭೂಮಿಯನ್ನು ಮರಳಿ ರೈತರಿಗೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದು ಸರ್ಕಾರಕ್ಕೆ ಗೊತ್ತಿಲ್ಲವೇ? ಎಂದು ಕೇಂದ್ರ ಸರ್ಕಾರವನ್ನು ಅವರು ಪ್ರಶ್ನಿಸಿದರು.

ನನ್ನ ಬಾವಮೈದ ಆ ಜಾಗವನ್ನು ಖರೀದಿ ಮಾಡಿದ್ದಾನೆ. ಡಿನೋಟಿಫಿಕೇಶನ್ ಆದ ಜಾಗವನ್ನು ಮಾರಾಟ ಮಾಡಬಾರದು ಎಂದು ಕಾನೂನಿನಲ್ಲಿ ಇದೆಯಾ? ಸಿದ್ದರಾಮಯ್ಯ ಅವರಿಗೂ ಅದೇ ಹೇಳಿದ್ದೇನೆ, ಕಾನೂನು ವ್ಯಾಪ್ತಿಯಲ್ಲಿ ಹದಿನೈದು ಅಲ್ಲದಿದ್ದರೆ ಐವತ್ತು ನಿವೇಶನ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ ಎಂದು ಅವರು ಗುಡುಗಿದರು.

ನನ್ನ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಾನು ಪಲಾಯನ ಮಾಡುವ ಪೈಕಿ ಅಲ್ಲ. ನಾನು ಯಾವ ಪ್ರಭಾವ ಬಳಸಲ್ಲ. ಯಾರ ನೆರವೂ ಪಡೆಯಲ್ಲ ಎಂದ ಅವರು; ಕರ್ನಾಟಕದಲ್ಲಿ ಇರುವುದು ದರೋಡೆಕೋರರ ಸರ್ಕಾರ. ಅವರು ಹಿಂದೆಯೂ ದರೋಡೆ ಮಾಡುತ್ತಿದ್ದರು. ಈಗಲೂ ಮಾಡುತ್ತಿದ್ದಾರೆ. ಕೇರಳದ ಬಸ್ ನಲ್ಲಿ ಚಿನ್ನದ ವ್ಯಾಪಾರಿಯಿಂದ ಚಿನ್ನ ಲೂಟಿ ಮಾಡಿದ ನಿಮ್ಮ ಹಣೆಬರಹ ಮರೆತಿದ್ದಾರ? ಎಂದು ಕೇಳಿದರು.

ಯಾರಿಗೆ ಚಪ್ಪಲಿ ಹಾರ ಹಾಕುತ್ತೀರಿ?

ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದಾಗ ರಾಜ್ಯಪಾಲರ ಚಿತ್ರಕ್ಕೆ ಕಾಂಗ್ರೆಸ್ ನವರು ಚಪ್ಪಲಿ ಹಾರ ಹಾಕಿದರು. ಈಗ ಹೈಕೋರ್ಟ್ ಆದೇಶ ನೀಡಿದೆ, ಇವರು ಯಾರಿಗೆ ಚಪ್ಪಲಿ ಹಾರ ಹಾಕುತ್ತಾರೆ? ಎಂದು ಕೇಳಿದ ಅವರು; ಸಿದ್ದರಾಮಯ್ಯಗೆ ಹಾಕಬೇಕೋ ಅಥವಾ ಯಾರಿಗೆ ಹಾಕಬೇಕು? ಯಾರ ಪ್ರತಿಕೃತಿ ದಹನ ಮಾಡುತ್ತೀರಿ ಎಂದು ಪ್ರಶ್ನಿಸಿದರು.

Read More
Next Story