ನನ್ನನ್ನು ಕೆಣಕಬೇಡ ಶಿವಕುಮಾರ್..ಹುಷಾರ್! ಡಿಸಿಎಂ ವಿರುದ್ಧ ಎಚ್‌ಡಿಕೆ ಏಕವಚನ ವಾಗ್ದಾಳಿ
ಶುಕ್ರವಾರ ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡಸಿದ್ದರು. ಆ ವಾಗ್ದಾಳಿಗೆ ತಿರುಗೇಟು ನೀಡಿರುವ ಎಚ್‌ಡಿಕೆ, ಉಪಮುಖ್ಯಮಂತ್ರಿ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ʻʻಡಿ.ಕೆ.ಶಿವಕುಮಾರ್ ಗೆ ವ್ಯಕ್ತಿತ್ವ ಎನ್ನುವುದು ಇದೆಯಾ? ಅವರದ್ದು ಒಂದು ನಾಲಿಗೆನಾ.. ಆತ ಮನುಷ್ಯನಾ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʻʻಧೈರ್ಯ ಎನ್ನುವುದು ಇದ್ದರೆ, ಗಂಡಸ್ತನದಿಂದ ರಾಜಕೀಯ ಮಾಡಬೇಕು. ನನ್ನನ್ನು ಪ್ರಶ್ನೆ ಮಾಡುತ್ತಾನೆ. ಯಾರ ಮಗನನ್ನು ಬೆಳೆಸಬೇಕು ಎಂದು ಜನ ನಿರ್ಧಾರ ಮಾಡುತ್ತಾರೆ. ಒಳ್ಳೆಯದು, ಕೆಟ್ಟದು ಏನು ಎನ್ನುವುದು ಅವರಿಗೆ ಗೊತ್ತಿದೆʼʼ ಎಂದು ಕಿಡಿಕಾರಿದ್ದಾರೆ.
ʻʻಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿರ್ಧಾರ ಮಾಡುತ್ತಾರೆ. ಮೊದಲು ನೆಟ್ಟಗೆ ಬದುಕು. ನನ್ನನ್ನು ಕೆಣಕಬೇಡ ಶಿವಕುಮಾರ್..ಹುಷಾರ್ʼʼ ಎಂದು ಎಚ್ಚರಿಕೆ ನೀಡಿದ್ದಾರೆ.
ʻʻನಿನ್ನ ಯೋಗ್ಯತೆ, ಹಣೆಬರಹ ನನಗೆ ಬಹಳ ಚನ್ನಾಗಿ ಗೊತ್ತಿದೆ. ನಿನ್ನ ಬಗ್ಗೆ ನನ್ನಲ್ಲಿರುವ ಮಾಹಿತಿ ತೆಗೆದಿಟ್ಟರೆ ನೀನು ಬದುಕಲು ಕಷ್ಟವಾಗುತ್ತದೆ. ನಮ್ಮ ಕುಟುಂಬದ ವಿರುದ್ಧ ನೀನು ಏನೆಲ್ಲಾ ಸಂಚು ಮಾಡಿದೆ, ರೇವಣ್ಣ ಕುಟುಂಬ ಮುಗಿಸಲು ಏನು ಕುತಂತ್ರ ಮಾಡಿದೆ, ಎನ್ನುವುದು ನನಗೆ ಗೊತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʻʻನನ್ನದು ಪಾರಾದರ್ಶಕ ಆಡಳಿತ. ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ರೀಡು ಹೆಸರಿನಲ್ಲಿ ಲೂಟಿ ಹೊಡೆದಿದ್ದೀರಿ. ಕೆಂಪಣ್ಣ ವರದಿ ಏನಾಯಿತು? ಸದನ ಸಮಿತಿ ವರದಿ ಎಲ್ಲಿ ಇಟ್ಕೊಂಡಿದ್ದೀರಿ? ಇವತ್ತು ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ಎ.ಕೆ.ಸುಬ್ಬಯ್ಯ ಕಾಲದಿಂದಲೂ ದೇವೇಗೌಡರನ್ನು ಮುಗಿಸಲು ಯತ್ನ ಮಾಡಲಾಯಿತು. ಯಾವ ಸಂಚು ಮಾಡಿ ಈ ಪುಸ್ತಕ ಬಿಡುಗಡೆ ಮಾಡಿದ್ದೀಯಾ ಪೊಣ್ಣನ್ನ?ʼʼ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ʻʻನಿವೇಶನ ಕೊಡಿ ಎಂದು 37,000 ರೂಪಾಯಿ ದುಡ್ಡು ಕಟ್ಟಿದ್ದೇನೆ. ನನಗೆ ಈವರೆಗೆ ನಿವೇಶನ ಕೊಟ್ಟಿಲ್ಲ. ನಾನು ಮೈಸೂರಿನಲ್ಲಿದ್ದಾಗ ಸಿನಿಮಾ, ಹಂಚಿಕೆ ನಿರ್ಮಾಣ ಮಾಡುತ್ತಿದ್ದಾಗ ಹಣ ಕಟ್ಟಿದ್ದೆ. ಸತ್ಯ ಸಂಗತಿ ಮುಚ್ಚಿಟ್ಟು ಮೈಸೂರುನಲ್ಲಿ ಬೋರ್ಡ್, ಫ್ಲೆಕ್ಸ್ ಹಾಕಿಕೊಂಡಿದ್ದಾರೆ. ಅದನ್ನು ನಿಮ್ಮ ಶಾಸಕರು ಕೊರಳಿಗೆ ಹಾಕಿಕೊಳ್ಳಲಿ. ಆ ಪ್ರಕರಣದಲ್ಲಿ ಏನು ಇಲ್ಲ ಎಂದು ಲೋಕಾಯುಕ್ತ, ಸಿಐಡಿ ಯವರು ಹೇಳಿದ್ದಾರೆ. ಈ ಬೋರ್ಡ್ ಕಾಂಗ್ರೆಸ್ ಸ್ವಂತದ್ದ.. ಬಿಜೆಪಿಯಿಂದ ಎರವಲು ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಏನೂ ಇಲ್ಲʼʼ ಎಂದು ಹೇಳಿದರು.
ʻʻಕಾಂಗ್ರೆಸ್ ನಾಯಕರು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಮಾಡಿದರು. ಇವರಿಗೆ ನಾಚಿಕೆ ಆಗಬೇಕು. ವಿರೋಧ ಪಕ್ಷದಲ್ಲಿದ್ದಾಗ ಬೊಗಳೆ ಬಿಟ್ಟರು. ಸಾಕ್ಷಿಗಳಿಲ್ಲದೇ ಅವರು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದರು. ವಿರೋಧ ಪಕ್ಷದ ಸ್ಥಾನದ ಘನತೆ ಮರೆತು ಅತ್ಯಂತ ನಿಷ್ಕೃಷ್ಟವಾಗಿ ವರ್ತಿಸಿದ್ದಾರೆ. ವಿಧಾನಸಭೆಯಲ್ಲಿ ನಮ್ಮ ಶಾಸಕರು ಕಡಿಮೆ ಇದ್ದರೂ ದಾಖಲೆ ಸಮೇತ ಹೋರಾಟ ಮಾಡಿದ್ದೆವು. ದಾಖಲೆ ಸಮೇತ ಮಾತನಾಡಿದೆವು, ಅದರಲ್ಲೇನು ನಾಚಿಕೆ ಇಲ್ಲʼʼ ಎಂದರು.
ʻʻನಾನು ಸಿಎಂ ಆಗಿದ್ದಾಗ ಒಂದು ಅಕ್ರಮ ನಡೆದಿದ್ದರೆ ದಾಖಲೆ ನೀಡಲಿ. ಇವರೇನಾದರೂ ದಾಖಲೆ ನೀಡಿದ್ದರಾ? ನಾನು ವಿರೋಧ ಪಕ್ಷದ ನಾಯಕನಿದ್ದಾಗ ಬಿಜೆಪಿ ವಿರುದ್ಧವೂ ಹೋರಾಟ ಮಾಡಿದ್ದೆ. ಈಗ ಏನೋ ಹೊಸದು ಇದೆ ಎಂದು ಬಂದಿದ್ದಾರೆ. ಇದರಲ್ಲಿ ನನ್ನ ಮೇಲೆ ಆಪಾದನೆ ಏನೂ ಇಲ್ಲʼʼ ಎಂದು ಹೇಳಿದರು.
ʻʻಮೋದಿ ಅವರನ್ನು ಭೇಟಿಯಾಗಿದ್ದು ರಕ್ಷಣೆ ಪಡೆಯಲು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಾವು ಯಾವತ್ತು ಕಾಪಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನೀವು ಲೋಕಾಯಕ್ತ ಮುಚ್ಚಿ ಎಸಿಬಿ ಮಾಡಿದಿರಿ. ಹ್ಯೂಬ್ಲೊಟೊ ವಾಚ್ ಏನಾಯಿತು, ರೀಡು ಹಗರಣ, ಕೆಂಪಯ್ಯ ವರದಿ ಏನಾಯಿತು?ʼʼ ಎಂದು ಪ್ರಶ್ನಿಸಿದರು.
ಸರ್ಕಾರ ಕೆಡವಲು ಪ್ರಯತ್ನ ನಡೆಯುತ್ತದೆಯಂತೆ ನಿಜವೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻಸಂಚು ನಡೆಯುತ್ತಿದೆ ಎಂದು ಯಾರು ಹೇಳಿದರು? ಅವರಿಗೇನು ಕನಸು ಬಿದ್ದಿತ್ತಾ? ಅಥವಾ ಅಜ್ಜಯ್ಯ ಹೇಳಿದರಾ? ಯಾರು ಹೇಳಿದ್ರಂತೆ ಅವರಿಗೆ?ʼʼ ಎಂದು ಕುಮಾರಸ್ವಾಮಿ ಮರು ಪ್ರಶ್ನೆ ಮಾಡಿದರು.