ಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡುತ್ತಿದ್ದಾರೆ: ಜಿ ಟಿ ದೇವೇಗೌಡ ವಾಗ್ದಾಳಿ
x
ಜಿ ಟಿ ದೇವೇಗೌಡ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡುತ್ತಿದ್ದಾರೆ: ಜಿ ಟಿ ದೇವೇಗೌಡ ವಾಗ್ದಾಳಿ

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡುತ್ತಿದ್ದಾರೆ ಎಂದು ಜಿಟಿ ದೇವೇಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.


Click the Play button to hear this message in audio format

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್‌ ಹೀನಾಯ ಸೋಲು ಕಂಡ ಬೆನ್ನಲ್ಲೇ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಜಿ ಟಿ ಡಿ ನೇರ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿ ಈಗ ಬಿಜೆಪಿಯನ್ನು ತಬ್ಬಿಕೊಂಡಿದ್ದು, ಬಿಜೆಪಿ ಜೊತೆ ಹೋಗದಿದ್ದರೆ ಜೆಡಿಎಸ್ ಏನಾಗುತ್ತಿತ್ತು, ದಳ ಉಳಿಯುತಿತ್ತೇ? ದೇವರು, ದೇವೇಗೌಡರ ಶ್ರಮದಿಂದ ಜೆಡಿಎಸ್​​ ಪಕ್ಷ ಉಳಿಯುತ್ತಿದೆ ಎಂದು ಹೇಳಿದ್ದಾರೆ.

ಮುನಿಸು ಇದ್ದಾಗಲೂ ದೇವೇಗೌಡರು ಮಾತನಾಡುತ್ತಿದ್ದರು. ಸಾ.ರಾ.ಮಹೇಶ್ ತೋಟಕ್ಕೆ ಬಂದು ಹೋದರು, ಆಗಲೂ ಮಾತನಾಡಲಿಲ್ಲ. ಅವರಿಗೂ ನಾನು ಬೇಕಾಗಿಲ್ಲ ಅನಿಸುತ್ತದೆ ಎಂದು ಜಿ ಟಿ ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರ ಆಪ್ತ ಮಾಜಿ ಶಾಸಕ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಸಾರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ಜೊತೆ ಇದ್ದವರೆ ಸಾ.ರಾ.ಮಹೇಶ್‌ ಅವರಿಗೂ ಬೇಕಾಗಿತ್ತು. ನಾನು ಈಗ ಹೇಗಿದ್ದೇನೆ ಅದೇ ರೀತಿ ಇರುತ್ತೇನೆ. ಇನ್ನೂ ಮೂರು ವರ್ಷ ಶಾಸಕನಾಗಿ ಇರುತ್ತೇನೆ. ನಮ್ಮ ಜನ ಎಷ್ಟು ಕಷ್ಟ ಆದರೂ ಇರು ಅಂದಿದ್ದಾರೆ, ಅದಕ್ಕಾಗಿ ಇರುತ್ತೇನೆ. ಕ್ಷೇತ್ರದ ಜನರು ತೀರ್ಮಾನ ಮಾಡಬೇಕು ಎಂದು ಅವರು ಹೇಳಿದರು.

ಈ ವೇಳೆ ತಮಗೆ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಜೆಡಿಎಸ್‌ ನನ್ನನ್ನು ಶಾಸಕಾಂಗ ಪಕ್ಷದ ಉಪನಾಯಕನ್ನಾಗಿ ಮಾಡಲಿಲ್ಲ. ಏಕೆಂದರೆ ಉಪನಾಯಕನನ್ನಾಗಿ ಮಾಡಿದರೆ ಪಕ್ಕದಲ್ಲಿ ಕೂರಿಸಿಕೊಳ್ಳಬೇಕಾಗುತ್ತದೆ. ನನಗೂ ಕುಮಾರಸ್ವಾಮಿಗೂ ಸಾಕಷ್ಟು ಬಾರಿ ಮುನಿಸಾಗಿದೆ. ಆದರೂ ನೊಂದಿದ್ದರೂ ನಾನೇ ಮಾತನಾಡಿದ್ದೇನೆ. ನಾನು ಬಿಜೆಪಿಯಲ್ಲಿ ಇದ್ದಾಗ, ಜೆಡಿಎಸ್‌ನಲ್ಲಿ ಇದ್ದಿದ್ದರೆ 5 ಸ್ಥಾನ ಗೆಲ್ಲುತ್ತಿದ್ದೆವು ಎಂದು ಹೇಳಿ ವಾಪಸ್‌ ಕರೆಸಿಕೊಂಡವರು ಅವರೇ. ಆದರೆ, ಅಧಿಕಾರ ಕೊಡುವ ಸಮಯ ಬಂದಾಗ ದೂರ ಮಾಡುತ್ತಾರೆ ಎಂದು ತಮ್ಮ ಅಸಮಾಧಾನ ತೋಡಿಕೊಂಡರು.

ಹಿರಿಯ ಎಂದು ನನ್ನನ್ನು ಯಾವತ್ತೂ ಪರಿಗಣಿಸಿಯೇ ಇಲ್ಲ. ಜ್ಯೂನಿಯರ್‌ ಟೀಮ್‌ ಕಟ್ಟಿಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಏನಿದೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜಿಟಿಡಿ ಅಸಹಾಯಕತೆ ವ್ಯಕ್ತಪಡಿಸಿದರು.

Read More
Next Story