Kumaraswamy hits back at Congress leaders who asked what HDKs contribution to Bengaluru is
x

ಕೇಂದ್ರ ಸಚಿವ ಕುಮಾರಸ್ವಾಮಿ.

ಬೆಂಗಳೂರಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕರಿಗೆ ಕುಮಾರಸ್ವಾಮಿ ತಿರುಗೇಟು

ನನ್ನ ಆಡಳಿತ ಕನಿಷ್ಠ ಅವಧಿಯದ್ದಾಗಿದ್ದು, ಬಿಜೆಪಿ ಜತೆ 20 ತಿಂಗಳು ಹಾಗೂ ಇನ್ನೊಮ್ಮೆ ಕಾಂಗ್ರೆಸ್‌ ಜತೆ 14 ತಿಂಗಳು ಕೆಲಸ ಮಾಡಿದ್ದೇನೆ. ಈ ಅವಧಿಯ ನನ್ನ ಕೆಲಸಗಳಿಗೆ ದಾಖಲೆಗಳಿವೆ ಓದಿಕೊಳ್ಳಿ ಎಂದು ಹೇಳಿದ್ದಾರೆ.


ಇತ್ತೀಚೆಗೆ ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ತಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ್ದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 2006ರಲ್ಲಿ ತಾವು 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಗರದ 58 ರಸ್ತೆಗಳನ್ನು ಅಗಲೀಕರಣ ಮಾಡಿದ್ದಾಗಿ, ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಿದ್ದಾಗಿ, ಹೊಸ ಏರ್‌ಪೋರ್ಟ್ ರಸ್ತೆ, ನೆಲಮಂಗಲ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ರಸ್ತೆ ಅಭಿವೃದ್ಧಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸಮಾವೇಶ ಮತ್ತು ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಆದ ಅನಾಹುತಗಳ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಕೆರೆಯನ್ನೇ ನುಂಗಿ ಜೆಪಿ ನಗರ, ಡಾಲರ್ಸ್ ಕಾಲೊನಿ ನಿರ್ಮಾಣ ಮಾಡಿದ್ದರು. ಆ ಮನೆಗಳಿಗೆ ಕೆರೆ ನೀರು ನುಗ್ಗುತ್ತಿದ್ದನ್ನು ತಪ್ಪಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ತಮ್ಮ ಆಡಳಿತವು ಅತ್ಯಲ್ಪ ಅವಧಿಯಾಗಿದ್ದು, ಈ ಹಿಂದೆ ಬಿಜೆಪಿ ಜೊತೆ 20 ತಿಂಗಳು ಹಾಗೂ ಇನ್ನೊಮ್ಮೆ ಕಾಂಗ್ರೆಸ್ ಜೊತೆ 14 ತಿಂಗಳು ಕೆಲಸ ಮಾಡಿದ್ದು, ತಮ್ಮ ಕೆಲಸಗಳಿಗೆ ದಾಖಲೆಗಳಿವೆ ಎಂದು ಹೇಳಿದ್ದಾರೆ. "ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ. ಜನ ನಿಮಗೆ ಕುದುರೆ ಕೊಟ್ಟಿದ್ದಾರೆ. ಕುದುರೆ ಶೋಕಿಗಲ್ಲ, ಇನ್ನಾದರೂ ಮಾತು ನಿಲ್ಲಿಸಿ ಕೆಲಸ ಮಾಡಿ, ಇಲ್ಲವಾದರೆ ನಿಮ್ಮ ಬ್ರ್ಯಾಂಡ್‌ಗೆ ಜನ ನೀರು ಬಿಟ್ಟಾರು" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ ಬೆಂಗಳೂರಿನ ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಸರ್ಕಾರಕ್ಕೆ ಆತ್ಮಸಾಕ್ಷಿ ಇದೆಯೇ? ಜನ ಸತ್ತು ಬದುಕುತ್ತಿದ್ದಾರೆ. ನಾಯಕರಿಗೆ ಸಾಧನಾ ಸಮಾವೇಶದ ಚಿಂತೆ. ವಾರದಿಂದ ಮಾಧ್ಯಮಗಳಲ್ಲಿ ಬಣ್ಣ ಬಣ್ಣದ ಸರಣಿ ಗ್ಯಾರಂಟಿ ಜಾಹೀರಾತು ನೀಡುತ್ತಿದ್ದಾರೆ. ನಗರ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತಿನ ಡಬ್ಬಾ ಹೊಡೆಯುವುದು ಬಿಟ್ಟು, ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಪಕ್ಕಕ್ಕಿಟ್ಟು ಕೆಲಸ ಮಾಡಲಿ. ವಾರ್ ರೂಂನಲ್ಲಿ ಕುಳಿತು ಬಿಜೆಪಿ ಹಾಗೂ ಜೆಡಿಎಸ್ ಮೇಲೆ ಪರೋಕ್ಷ ಯುದ್ಧ ಮಾಡಿದರೆ ಪ್ರಯೋಜನವೇನು ಎಂದು ಪ್ರಶ್ನಿಸಿರುವ ಅವರು, "ಕೈಲಾಗದವನಿಗೆ ಬಾಯಿ ಭದ್ರ ಇರುವುದಿಲ್ಲ. ಉಪಮುಖ್ಯಮಂತ್ರಿ ಆ ಪರಿಸ್ಥಿತಿಯಲ್ಲಿದ್ದಾರೆ" ಎಂದು ಟೀಕಿಸಿದ್ದಾರೆ.

ಯಾವ ಪುರುಷಾರ್ಥಕ್ಕೆ, ಯಾರ ಉದ್ಧಾರಕ್ಕೆ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದೀರಿ? ಲೂಟಿ ಹೊಡೆಯುವುದಕ್ಕೆ ಹೊಸ ಹೊಸ ಹೆಸರೇ? ಎರಡು ವರ್ಷಗಳಿಂದ ಬ್ರ್ಯಾಂಡ್, ಬ್ರ್ಯಾಂಡ್ ಎಂದು ಭಜನೆ ಮಾಡುತ್ತಿದ್ದರು. ಬ್ರ್ಯಾಂಡ್ ಎಂದರೆ ಬೆಂಗಳೂರನ್ನು ಮುಳುಗಿಸುವುದಾ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಈ ವ್ಯಕ್ತಿಗಳ ಪಾಲಿಗೆ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆಯಾಗಿದೆ. ಬಯಸಿದಾಗ ನೋಟಿನ ಮಳೆ ಸುರಿಸುವ ಅಕ್ಷಯಪಾತ್ರೆ. ಎರಡು ವರ್ಷಗಳಿಂದ ಸುರಿದ ನೋಟಿನ ಮಳೆ ಪ್ರಮಾಣ ಎಷ್ಟು? ಕೈ ಇಟ್ಟ ಕಡೆಯಲ್ಲೆಲ್ಲಾ ದುಡ್ಡು, ಜನರ ಮೇಲೆ ತೆರಿಗೆ ಮೇಲೆ ತೆರಿಗೆ, ಎರಡು ವರ್ಷಗಳಲ್ಲಿ ಎಷ್ಟೊಂದು ಬಾರಿ ಸಾಯಿ ಬಡಾವಣೆ ಮುಳುಗಿತು? ಅಲ್ಲಿಗೆ ಡಿಸಿಎಂ ಎಷ್ಟು ಸಲ ಹೋಗಿದ್ದರು? ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ನಗರಕ್ಕೆ ಏನು ಮಾಡಿದ್ದರು? ಸಚಿವಗಿರಿಯನ್ನು ಸ್ವ-ನಗದು ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Read More
Next Story