
ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾದ HDK
ರಾಜಕೀಯ ಒತ್ತಡದಿಂದ ನನ್ನ ಮೇಲೆ ಈ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಈ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ನನ್ನಿಂದ ಆದೇಶ ಆಗಿಲ್ಲ. ಒಂದು ವೇಳೆ ನಾನು ಡಿನೋಟಿಫಿಕೇಶನ್ ಮಾಡಬೇಕು ಎಂದು ಅಂದುಕೊಂಡಿದ್ದಿದ್ದರೆ ನಾನೇ ಮಾಡುತ್ತಿದ್ದೆ. ಅಷ್ಟು ಸಾಮಾನ್ಯ ತಿಳಿವಳಿಕೆ ನನ್ನ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಇಲ್ಲ
ನಾನು ಸ್ವಇಚ್ಛೆಯಿಂದ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿದ್ದೇನೆ. ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾದ ನಂತರ ಅಲ್ಲಿಯೇ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಬೆಳಗ್ಗೆಯಿಂದ ನೋಡುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜಕೀಯ ಗಂಡಾಂತರ, ಭೂ ಗಂಡಾಂತರ ಎಂದು ಚರ್ಚೆ ನಡೆಯುತ್ತಿದೆ. ಆದರೆ; ನನ್ನ ರಾಜಕೀಯ ಜೀವನದಲ್ಲಿ ಗಂಡಾಂತರ ತಂದುಕೊಳ್ಳುವ ಯಾವುದೇ ಕೆಲಸವನ್ನೂ ಮಾಡಿಲ್ಲ ಎಂದು ಕೇಂದ್ರ ಸಚಿವರು ನೇರ ಮಾತುಗಳಲ್ಲಿ ಹೇಳಿದರು.
ರಾಜಕೀಯ ಒತ್ತಡದಿಂದ ನನ್ನ ಮೇಲೆ ಈ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಈ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ನನ್ನಿಂದ ಆದೇಶ ಆಗಿಲ್ಲ. ಒಂದು ವೇಳೆ ನಾನು ಡಿನೋಟಿಫಿಕೇಶನ್ ಮಾಡಬೇಕು ಎಂದು ಅಂದುಕೊಂಡಿದ್ದಿದ್ದರೆ ನಾನೇ ಮಾಡುತ್ತಿದ್ದೆ. ಅಷ್ಟು ಸಾಮಾನ್ಯ ತಿಳಿವಳಿಕೆ ನನ್ನ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಇಲ್ಲ ಎಂದು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಈ ಪ್ರಕರಣದ ಬಗ್ಗೆ ಲೋಕಾಯುಕ್ತರು ಹೇಳಿಕೆ ದಾಖಲಿಸಿಕೊಂಡಿದ್ದರು. ಈಗ ಮತ್ತೆ ಹೇಳಿಕೆ ನೀಡಿದ್ದೇನೆ. ಈ ಪ್ರಕರಣದ ಬಗ್ಗೆ ನನಗೆ ಯಾವ ಆತಂಕವೂ ಇಲ್ಲ ಎಂದು ಅವರು ತಿಳಿಸಿದರು.
ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ
ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. 2015ರ ಸಿದ್ದರಾಮಯ್ಯ ಸರ್ಕಾರವಿದ್ದಾಗ ನನ್ನ ಮೇಲೆ ಹಾಕಿರುವ ಕೇಸ್ ಇದು. ಪಲಾಯನ ಮಾಡುವ ಅಗತ್ಯ ನನಗೆ ಇಲ್ಲ. ಅಂಥ ಜಾಯಮಾನ ನನ್ನದಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಯಾವ ಮುಖ ಇಟ್ಕೊಂಡು ನನ್ನ ಮುಖ್ಯಮಂತ್ರಿ ಮಾಡಿಕೊಂಡಿದ್ದರು?
ನನ್ನ ಬಗ್ಗೆ ಹೇಳಿಕೆ ಕೊಟ್ಟಿರುವ ಅಷ್ಟೂ ಮಂದಿ ಸಚಿವರು, ಶಾಸಕರು 2018ರಲ್ಲಿ ನನ್ನು ಸಿಎಂ ಮಾಡಿದ್ದವರು. ಅಂತಹ ಆರೋಪ ನನ್ನ ಮೇಲೆ ಇದ್ದಾಗ ಕಾಂಗ್ರೆಸ್ ಪಕ್ಷ ನನ್ನ ಜತೆ ಸರಕಾರ ಮಾಡಿದ್ದೇಕೆ? ಯಾವ ಮುಖ ಇಟ್ಕೊಂಡು ನನ್ನ ಮುಖ್ಯಮಂತ್ರಿ ಮಾಡಿಕೊಂಡಿದ್ದರು ಇವರು. ಆವತ್ತು ಕುಮಾರಸ್ವಾಮಿ ಕೆಟ್ಟವರಾಗಿರಲಿಲ್ಲವೇ? ಎಂದು ಅವರು ಕಿಡಿಕಾರಿದರು.
ಬೆಳಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನಿಸಿದ್ದೇನೆ. ಅವರಿಗೂ ಉತ್ತಮ ಕೊಡುತ್ತೇನೆ. ಇವತ್ತು ನನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿರುವ ಸಚಿವ ಮಹಾಶಯರು ನನ್ನ ಸಂಪುಟದಲ್ಲಿಯೂ ಸಚಿವರಾಗಿದ್ದರು. ಆಗ ಇವರೆಲ್ಲರ ಪ್ರಾಮಾಣಿಕತೆ, ನೈತಿಕತೆ ಎಲ್ಲಿ ಹೋಗಿತ್ತು? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.
ನನ್ನ ರಾಜೀನಾಮೆ ಕೇಳುವ ನೈತಿಕತೆ ಇವರಿಗೆ ಇಲ್ಲ
ಈ ಸರ್ಕಾರದ ಸಚಿವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಜವರಿಗೆ ನನ್ನ ರಾಜೀನಾಮೆ ಕೇಳುವ, ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂಬುದು ದಾಖಲೆಗಳೇ ಹೇಳುತ್ತವೆ. ಇವರ ಹಾಗೆ ನಾನು ಸರ್ಕಾರದ ಭೂಮಿ ಲೂಟಿ ಮಾಡಿಲ್ಲ. ಮೂಡಾ ಹಗರಣವನ್ನೇ ನೋಡಿದ್ದೀರಿ. ಕುಮಾರಸ್ವಾಮಿ ಯಾಕೆ ರಾಜಿನಾಮೆ ಕೊಡಬೇಕು? ಲೂಟಿ ಮಾಡಿರೋದು ಇವರು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳುಹಿಸಬೇಕು ಎಂದು ಹಿಂದಿನ ಐದು ವರ್ಷದ ಕಾಂಗ್ರೆಸ್ ಸರಕಾರದಲ್ಲಿ ಸಂಚು ರೂಪಿಸಿದ್ದರು. ಅವರ ಆಸೆ ಈಡೇರಲಿಲ್ಲ. ಯಾಕೆಂದರೆ ಆ ಸಂದರ್ಭದಲ್ಲಿಯೂ ದಿನವೂ ಕಾಂಗ್ರೆಸ್ ನಾಯಕರ ಭ್ರಷ್ಟ ಮುಖವನ್ನು ಬಯಲು ಮಾಡುತ್ತಿದ್ದೆ. ಇವನ ಕಾಟ ತಡೆಯಲು ಆಗುತ್ತಿಲ್ಲ, ಒಂದು ದಿನವಾದರೂ ಇವನನ್ನು ಜೈಲಿಗೆ ಕಳಿಸಬೇಕು ಎಂದು ಹೊಂಚು ಹಾಕಿದ್ದರು. ಆಗಲೂ ಇವರಿಗೆ ನನ್ನನ್ನು ಏನೂ ಮಾಡಲು ಆಗಲಿಲ್ಲ, ಈಗಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ನಾನೇನು ತಪ್ಪು ಮಾಡಿ ಇಲ್ಲಿಗೆ ಬಂದಿಲ್ಲ. ಸ್ವಯಂಪ್ರೇರಿತವಾಗಿ ಬಂದಿದ್ದೇನೆ. ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ. ಈ ಸರ್ಕಾರದಲ್ಲಿರುವ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ದರೋಡೆಕೋರರು. ಆ ದಾಖಲೆಗಳನ್ನು ನೋಡಿದ ಮೇಲೆ ಈ ಸಚಿವರುಗಳು ನನ್ನ ಮಾತನಾಡಲಿ.
ಇವರ ಆಡಳಿತದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಹೇಗೆ ಕೆಲಸ ಮಾಡುತ್ತಿದೆ? ಒಂದು ಪೊಲೀಸ್ ಠಾಣೆಯಂತೆ ಕೆಲಸ ಮಾಡುತ್ತಿದೆ. ಕಳೆದ ಹಲವು ದಿನಗಳಿಂದ ಡಿಜಿ ಕಚೇರಿಗೆ ಹೆಣ್ಣುಮಕ್ಕಳನ್ನು ಕರೆಸಿಕೊಂಡು ಎಫ್ ಐಆರ್ ಹಾಕುತ್ತಿದ್ದಾರೆ ಎಂದು ಸಚಿವರು ದೂರಿದರು