ಪ್ರಜ್ವಲ್ ಪ್ರಕರಣ ಮರೆಮಾಚಲು ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ
ರಾಜ್ಯ ಸರ್ಕಾರ ತಮ್ಮ ಕುಟುಂಬ ಸದಸ್ಯರ ಫೋನ್ ಕದ್ದಾಲಿಕೆ ಮಾಡಿದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಪ್ರಜ್ವಲ್ ಪ್ರಕರಣ ಮರೆಮಾಚಲು ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದಾರೆ," ಎಂದು ತಿರುಗೇಟು ನೀಡಿದ್ದಾರೆ.
ಬುಧವಾರ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸುವ ವೇಳೆ ಮಾಧ್ಯಮದವರು ಫೋನ್ ಕದ್ದಾಲಿಕೆ ಹೇಳಿಕೆ ವಿಚಾರವಾಗಿ ಪ್ರಶ್ನೆ ಮಾಡಿದಾಗ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻʻಫೋನ್ ಕದ್ದಾಲಿಕೆ ಮಾಡಿಲ್ಲ, ಮಾಡುವುದೂ ಇಲ್ಲ. ನಮ್ಮ ರಾಜಕೀಯ ಜೀವನದಲ್ಲಿ ಫೋನ್ ಕದ್ದಾಲಿಕೆ ಮಾಡಿಲ್ಲ, ಮಾಡುವುದಿಲ್ಲ. ʼʼ ಕುಮಾರಸ್ವಾಮಿ ಹೇಳಿಕೆಯನ್ನು ಅಲ್ಲಗಳೆದರು.
ಹೆಚ್. ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ʻʻಗೃಹ ಸಚಿವರಿಗೆ ಲಿಖಿತ ದೂರು ನೀಡಲು ಹೇಳಿ. ಯಾರ ಯಾರ ಕಾಲದಲ್ಲಿ ಕದ್ದಾಲಿಕೆ ಆಗಿದೆ ಗೊತ್ತಿದೆ. ಆರೋಪ ಮಾಡುತ್ತಿರುವವರು ಕೆಲವರು ಹೋಂ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್ ಮಿನಿಸ್ಟರ್ ಆಗಿದ್ದವರು. ಆಗ ಎಲ್ಲ ರಿಪೋರ್ಟ್ ಬಂದಿತ್ತಲ್ಲ ಫೋನ್ ಕದ್ದಾಲಿಕೆ ಬಗ್ಗೆʼʼ ಎಂದು ಹೇಳಿದರು.
ʻʻಫೋನ್ ಕದ್ದಾಲಿಕೆ ಬಗ್ಗೆ ಕುಮಾರಸ್ವಾಮಿಗೆ ಯಾರು ಮಾಹಿತಿ ಕೊಟ್ಡಿದ್ದಾರೋ ಆ ಬಗ್ಗೆ ಅಫಿಡವಿಟ್ ಕೊಡಲು ಹೇಳಿ. ಮಾಹಿತಿ ಕೊಟ್ಟಿದ್ದರೆ ಬಹಳ ಸಂತೋಷʼʼ ಎಂದರು.
ಏನಿದು ಆರೋಪ?
ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಆರೋಪಿ ಆಗಿರುವ ಪ್ರಜ್ವಲ್ ರೇವಣ್ಣ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಎಸ್‌ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು ಪ್ರಜ್ವಲ್ ಎಲ್ಲಿದ್ದಾರೆ ಎಂಬ ನಿಟ್ಟಿನಲ್ಲಿ ನಿಗಾ ಇಡುತ್ತಿದೆ. ತನಿಖೆಯ ಭಾಗವಾಗಿ ನಮ್ಮ ಕುಟುಂಬದ ಸದಸ್ಯರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾಡಿದ್ದರು.