
ಕುದುರೆಮುಖ ವಿಹಂಗಮ ನೋಟ (ಎಕ್ಸ್ ಖಾತೆಯಿಂದ)
ಕುದುರೆಮುಖ ಚಾರಣಪಥ ಮೇ 1 ರಿಂದ ಪ್ರವಾಸಿಗರಿಗೆ ಮುಕ್ತ
ನಿತ್ಯಹರಿದ್ವರ್ಣ, ಶೋಲಾ ಕಾಡುಗಳ ವಿಶಾಲತಾಣ, ಸಿಂಹಬಾಲದ ಸಿಂಘಳೀಕ, ಕಾಡುಪಾಪ, ಹುಲಿ, ಚಿರತೆಯಂತಹ ಲಕ್ಷಾಂತರ ಜೀವಗಳ ಆವಾಸಸ್ತಾನವಾದ ಕುದುರೆಮುಖ ಪಶ್ಚಿಮಘಟ್ಟದ ಅತಿಮುಖ್ಯ ಘಟ್ಟಗಳಲ್ಲಿ ಒಂದಾಗಿದೆ.
ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ, ಕುದುರೆಮುಖ, ನರಸಿಂಹ ಪರ್ವತ, ಹಿಡ್ಲುಮನೆ ಜಲಪಾತ, ಕೊಡಚಾದ್ರಿ ಚಾರಣ ಪಥಗಳು ಮೇ 1ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದ್ದು ಪ್ರವಾಸಿಗರು ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗ ತಿಳಿಸಿದೆ.
ಕಾಡ್ಗಿಚ್ಚು ಉಂಟಾಗುವ ಸಾಧ್ಯತೆ ಹಾಗೂ ಪ್ರವಾಸಿಗರ ಯೋಗಕ್ಷೇಮ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರವಾಸಿ ಧಾಮಗಳಿಗೆ ಕಳೆದ ಕೆಲವು ತಿಂಗಳಿಂದ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಮತ್ತು ಚಾರಣಿಗರಿಗೆ ಮುಕ್ತವಾಗಿದೆ.
ನಿತ್ಯಹರಿದ್ವರ್ಣ, ಶೋಲಾ ಕಾಡುಗಳ ವಿಶಾಲತಾಣ, ಸಿಂಹಬಾಲದ ಸಿಂಘಳೀಕ, ಕಾಡುಪಾಪ, ಹುಲಿ, ಚಿರತೆಯಂತಹ ಲಕ್ಷಾಂತರ ಜೀವಗಳ ಆವಾಸಸ್ಥಾನವಾದ ಕುದುರೆಮುಖ ಪಶ್ಚಿಮಘಟ್ಟದ ಅತಿಮುಖ್ಯ ಘಟ್ಟಗಳಲ್ಲಿ ಒಂದಾಗಿದ್ದು ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಚಾರಣಧಾಮವಾಗಿದೆ.
ಕುದುರೆಮುಖ ಗಿರಿ ಶ್ರೇಣಿ ಹಾಗೂ ನೇತ್ರಾವತಿ ಪೀಕ್ ಚಾರಣಕ್ಕೆ ಅರಣ್ಯ ಇಲಾಖೆಯು ಕಳೆದ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಿತ್ತು. ಎರಡೂ ಗಿರಿಶ್ರೇಣಿಗೆ ತಲಾ 300 ಜನರಿಗೆ ಅವಕಾಶವಿದ್ದು ಒಬ್ಬರು ಮೂರು ಜನರಿಗೆ ಮಾತ್ರ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ. ಮೂರು ಜೀವನದಿಗಳ ಉಗಮ ಸ್ಥಳವಾಗಿರುವ ಕುದುರೆಮುಖ ಹಲವಾರು ಜಲಪಾತಗಳನ್ನು ಹೊಂದಿದ್ದು ಚಾರಣಿಗರು ಹಾಗೂ ಸಾಹಸಪ್ರಿಯರನ್ನು ಆಕರ್ಷಿಸಿತ್ತದೆ.
ಹತ್ತಿರದ ಆಕರ್ಷಕ ಸ್ಥಳಗಳು:
ಕುದುರೆಮುಖದಿಂದ 20 ಕಿಲೋಮೀಟರ್ ದೂರದಲ್ಲಿ ಕಳಸದ ಕಳಸೇಶ್ವರ ದೇವಾಲಯ, 30 ಕಿಲೋಮೀಟರ್ ದೂರದಲ್ಲಿ ಹೊರನಾಡು ಅನ್ನಪೊರ್ಣೇಶ್ವರಿ ದೇವಾಲಯ, ದಕ್ಷಿಣದ ಚಿರಾಪುಂಜಿ ಎಂದೇ ಹೆಸರಾದ ಆಗುಂಬೆ ಹಾಗೂ ಶೃಂಗೇರಿ ಶಾರದಾ ಪೀಠವು ಕುದುರೆಮುಖದಿಂದ 50 ಕಿಲೋಮೀಟರ್ ದೂರದಲ್ಲಿವೆ.