ಅಭಿವೃದ್ಧಿಗೆ ಗ್ಯಾರಂಟಿ ಏಟು | ಸತ್ಯ ಒಪ್ಪಿಕೊಂಡ ರಾಯರೆಡ್ಡಿಯವರನ್ನು ಅಭಿನಂದಿಸುತ್ತೇನೆ: ಪ್ರಲ್ಹಾದ ಜೋಶಿ
ರಾಜ್ಯದಲ್ಲಿ ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಈ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಅತೃಪ್ತಿ ಹೊರಹಾಕುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಗ್ಯಾರಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಒಬ್ಬೊಬ್ಬರೇ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ವೈಫಲ್ಯ ಮತ್ತು ಅದರಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾದ ಬಗ್ಗೆ ಕಾಂಗ್ರೆಸ್ ಪಕ್ಷದವರೇ ಆದ ಬಸವರಾಜ ರಾಯರೆಡ್ಡಿ ಅವರು ಬಹಿರಂಗವಾಗಿ ಸತ್ಯ ಹೇಳುವ ಧೈರ್ಯ ತೋರಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆʼʼ ಎಂದು ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ʻʻರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಲ್ಲಾ ಹಣ ವಿನಿಯೋಗ ಮಾಡುತ್ತಿದೆ. ಆದಾಗ್ಯೂ ಇನ್ನೂ ಶೇ.50ರಷ್ಟು ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಲ್ಲ. ಇತ್ತ ಗ್ಯಾರಂಟಿಯೂ ಅಪೂರ್ಣ, ಅತ್ತ ಅಭಿವೃದ್ಧಿಯೂ ಇಲ್ಲದಂಥ ಸ್ಥಿತಿ ಎದುರಾಗಿದೆʼʼ ಎಂದು ಬೇಸರ ವ್ಯಕ್ತಪಡಿಸಿದರು.
ʻʻರಸ್ತೆ, ಕಟ್ಟಡಗಳ ನಿರ್ಮಾಣ, ಆಸ್ಪತ್ರೆ, ಆರೋಗ್ಯ ಸೇವೆ, ಸಮರ್ಪಕ ಬೆಳೆ ಪರಿಹಾರ, ಹೈನುಗಾರರಿಗೆ ಪ್ರೋತ್ಸಾಹ ಧನ, ವಿವಿಧ ಯೋಜನೆಗಳ ಸಬ್ಸಿಡಿ, ಸಿಬ್ಬಂದಿ ನೇಮಕಾತಿ ಹೀಗೆ ಯಾವುದೊಂದು ಕಾರ್ಯ ಚಟುವಟಿಕೆಗಳೂ ಸಕ್ರಿಯವಾಗಿಲ್ಲʼʼ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ. ಅವರ ಹಸ್ತಕ್ಷೇಪ, ಭಾಗಿ ಇಲ್ಲದೇ ಇರಲು ಸಾಧ್ಯವಿಲ್ಲ. ಹಾಗಾಗಿ ಇದರಲ್ಲಿ ಸಿಎಂ ವಿರುದ್ಧ ನೇರ ತನಿಖೆ ಆಗಬೇಕು. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ. ಅವರ ಭಾಗಿತ್ವ ಇಲ್ಲದೇ ಈ ಮಟ್ಟದ ಭ್ರಷ್ಟಾಚಾರ ಅಸಾಧ್ಯ ಎಂದು ಜೋಶಿ ಹೇಳಿದ್ದಾರೆ
ಬಸವರಾಜ ರಾಯರೆಡ್ಡಿ ಹೇಳಿದ್ದೇನು?
ʻʻನಮ್ಮ ಗ್ಯಾರಂಟಿಗೆ 65 ಸಾವಿರ ಕೋಟಿ ಬೇಕಿದೆ. ನಾನು ಮುಖ್ಯಮಂತ್ರಿಗಳ ಜೊತೆಗೇ ಇರುವವನು. ನನಗೆ ಆರ್ಥಿಕ ಒಳಗುಟ್ಟು ಚೆನ್ನಾಗಿ ಗೊತ್ತಿದೆ. ಅಷ್ಟು ಮೊತ್ತದ ಹಣವನ್ನು ಗ್ಯಾರಂಟಿಗೆ ಮೀಸಲಿಡಬೇಕಿದೆ. ಹಾಗಾಗಿ, ಅಭಿವೃದ್ದಿ ಕೆಲಸಗಳಿಗೆ ಎಲ್ಲಿಂದ ದುಡ್ಡು ಸಿಗುತ್ತದೆʼʼ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದರು.