KSRTC Bus Rams Parked Lorry: 3 Killed on the Spot, 7 Seriously Injured
x

ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್‌

ನಿಂತಿದ್ದ ಲಾರಿಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ; 7 ಮಂದಿಗೆ ಗಂಭೀರ ಗಾಯ

ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟ ಮೂವರು ಬಾಗಲಕೋಟೆ ಮೂಲದವರು ಕೆಲಸದ ನಿಮಿತ್ತ ಮಂಗಳೂರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.


ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಕೇರಳ ಮೂಲದ ಲಾರಿಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ.

ಶನಿವಾರ ಮುಂಜಾನೆ, ಬಾಗಲಕೋಟೆಯಿಂದ ಮಂಗಳೂರು ಕಡೆಗೆ (ಕೆಎ 19 ಎಫ್ 3470) ತೆರಳುತ್ತಿದ್ದ ಕೆಎಸ್​ಆರ್​ಟಿಸಿಬಸ್, ಯಲ್ಲಾಪುರ-ಅಂಕೋಲಾ ನಡುವಿನ ದಟ್ಟ ಕಾಡು ಮತ್ತು ಘಟ್ಟ ಪ್ರದೇಶದಿಂದ ಕೂಡಿದ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಓವರ್ಟೇಕ್ ಮಾಡುವ ಸಂದರ್ಭದಲ್ಲಿ, ರಸ್ತೆಯಂಚಿನಲ್ಲಿ ನಿಂತಿದ್ದ ಕೇರಳ ಮೂಲದ ಲಾರಿಗೆ ಬಸ್ ವೇಗವಾಗಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಇಂಡಿಕೇಟರ್ ಹಾಕದೆ, ಕತ್ತಲೆಯಲ್ಲಿ ಲಾರಿಯನ್ನು ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​​ನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರು ಮತ್ತು ಗಾಯಾಳುಗಳ ವಿವರ

ದುರಂತದಲ್ಲಿ ಬಾಗಲಕೋಟೆ ಮೂಲದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರಲ್ಲಿ, ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನಿಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಮತ್ತು ಇನ್ನೂ ಹೆಸರು ಪತ್ತೆಯಾಗದ 45 ವರ್ಷದ ಒಬ್ಬ ವ್ಯಕ್ತಿ ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಏಳು ಮಂದಿ ಕೂಡ ಬಾಗಲಕೋಟೆ ಮೂಲದವರಾಗಿದ್ದು, ಅವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಚಿಕ್ಕಚಿಕ್ಕ ಮಕ್ಕಳೂ ಸೇರಿದ್ದು, ಅವರ ಸ್ಥಿತಿ ಕೂಡ ಗಂಭೀರವಾಗಿದೆ.

ಚಾಲಕನ ಮೇಲೆ ಪ್ರಕರಣ ದಾಖಲು

ಅಲಮಟ್ಟಿ ಗ್ರಾಮದ ಯಮನಪ್ಪ ಮಾಗಿ ಎಂಬ ಬಸ್ ಚಾಲಕನ ಮೇಲೆ ಈ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟ ಮೂವರು ಬಾಗಲಕೋಟೆ ಮೂಲದವರು ಕೆಲಸದ ನಿಮಿತ್ತ ಮಂಗಳೂರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.

ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಯಲ್ಲಾಪುರ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಭೀಕರ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Read More
Next Story