ಕೊಡೆ ಹಿಡಿದು ಬಸ್ ಚಾಲನೆ; ವೈರಲ್ ವಿಡಿಯೋ ಎಷ್ಟು ಅಸಲಿ?
ಮಳೆ ಬರುವಾಗ ಕೊಡೆ ಹಿಡಿದು ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಚಲಾಯಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದು "ಚಾಲಕ ಮತ್ತು ನಿರ್ವಾಹಕಿ"ಯರು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಎಂಬ ಸತ್ಯ ಬಹಿರಂಗವಾಗಿದೆ.
ಶುಕ್ರವಾರ ಬೆಟಗೇರಿ -ಧಾರವಾಡ ಮಾರ್ಗವಾಗಿ ಕಾರ್ಯಾಚರಿಸುತ್ತಿದ್ದ ಬಸ್ ಚಾಲಕ ಮಳೆ ಬರುತ್ತಿದ್ದಾಗ ಕೊಡೆ ಹಿಡಿದು ಚಲಾಯಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಸರ್ಕಾರಿ ಬಸ್ ಸೋರುತ್ತಿದೆ ಹಾಗೂ ಸರ್ಕಾರದ ಸ್ಥಿತಿ ಅದೇ ರೀತಿ ಇದೆ ಎಂಬಿತ್ಯಾದಿ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಅರಂಭವಾಗಿದ್ದವು.
ಆದರೆ ಕೆಎಸ್‌ಆರ್‌ಸಿ ವಿಷಯ ಪರಿಶೀಲಿಸಿದಾಗ ಸತ್ಯ ಏನೆಂಬುದು ಗೊತ್ತಾಯಿತು. "ಈ ವಿಷಯಕ್ಕೆ ಸಂಬಂಧಿಸಿ ಧಾರವಾಡ ಗ್ರಾಮಾಂತರ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಮೇ 23 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕರಾಗಿ ಅನಿತಾ ಎಚ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ಹೊತ್ತಿನಲ್ಲಿ ಮಳೆ ಬರುತ್ತಿದ್ದು ಆ ಸಮಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕ ಮನೋರಂಜನೆಗಾಗಿ ಕೊಡೆ ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ನಿರ್ವಾಹಕಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ," ಎಂದು ಪ್ರಕಟಣೆ ತಿಳಿಸಿದೆ.
"ಆದರೆ ಆ ಸಮಯದಲ್ಲಿ ಬಸ್ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ ಇರಲಿಲ್ಲ. ಈ ಕುರಿತು ಸದರಿ ಚಾಲನಾ ಸಿಬ್ಬಂದಿಯಿಂದ ಇಲಾಖೆ ಸ್ಪಷ್ಟೀಕರಣ ಪಡೆದಿದ್ದು "ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿದೆ," ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.