KPSCs move has caused confusion, demand that the Agriculture Department exam also be conducted according to internal reservation
x

ಕೆಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು

ಕೆಪಿಎಸ್‌ಸಿ ದ್ವಂದ್ವ ನೀತಿ: ಒಳ ಮೀಸಲಾತಿ ಗೊಂದಲದಲ್ಲಿ ಕೃಷಿ ಇಲಾಖೆ ಪರೀಕ್ಷೆ!

2024 ಫೆಬ್ರವರಿಯಲ್ಲಿ ಭೂಮಾಪಕ ಹುದ್ದೆಗಳಿಗೆ ಅಧಿಸೂಚನೆ ಹಾಗೂ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಒಳ ಮೀಸಲಾತಿ ಕಾರಣ ನೀಡಿ ಸ್ಥಗಿತಗೊಳಿಸಿದೆ. ಆದರೆ ಕೃಷಿ ಇಲಾಖೆ ಹುದ್ದೆಗೆ ಮಾತ್ರ ಪರೀಕ್ಷೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಪ್ರಶ್ನೆಪತ್ರಿಕೆಗಳ ಅನುವಾದ, ಕೀ ಉತ್ತರ ಹಾಗೂ ಆಯ್ಕೆಪಟ್ಟಿ ಬಿಡುಗಡೆ ವಿಳಂಬ ಸೇರಿದಂತೆ, ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೀಗ ಮತ್ತೊಮ್ಮೆ ಸ್ಪರ್ಧಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಒಳ ಮೀಸಲಾತಿ ಜಾರಿ ಕಾರಣಕ್ಕಾಗಿ ಕಳೆದ ಒಂದು ವರ್ಷದಿಂದ ಯಾವುದೇ ನೇಮಕಾತಿಗಳು ನಡೆಯದೆ ಸ್ಪರ್ಧಾರ್ಥಿಗಳು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ. ಸರ್ಕಾರ ಯಾವಾಗ ನೇಮಕಾತಿ ಅಧಿಸೂಚನೆ ಹೊರಡಿಸುತ್ತದೆಯೋ ಎಂದು ಅವರು ಕಾಯುತ್ತಿದ್ದಾರೆ. ಆದರೆ, ಕೆಪಿಎಸ್‌ಸಿ ಮಾತ್ರ ಕೃಷಿ ಇಲಾಖೆಯ ಅಧಿಕಾರಿಗಳ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿರುವುದು, ಪ್ರತಿಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ.

ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳು ವೈಜ್ಞಾನಿಕ ದತ್ತಾಂಶ ಆಧರಿಸಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಬಹುದು ಎಂದು 2024ರ ಆಗಸ್ಟ್ 1ರಂದು ತೀರ್ಪು ನೀಡಿತ್ತು. ಈ ತೀರ್ಪಿನ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ನ್ಯಾ. ನಾಗಮೋಹನ್‌ದಾಸ್ ಆಯೋಗದ ವರದಿಯಂತೆ ಎಡಗೈ ಸಮುದಾಯಕ್ಕೆ ಶೇ. 6, ಬಲಗೈ ಸಮುದಾಯಕ್ಕೆ ಶೇ. 6 ಹಾಗೂ ಇತರೆ ಸ್ಪೃಶ್ಯ ಮತ್ತು ಅಲೆಮಾರಿ ಸಮುದಾಯಗಳಿಗೆ ಶೇ. 5ರಷ್ಟು ಒಳ ಮೀಸಲಾತಿ ಜಾರಿಗೊಳಿಸಿತ್ತು. ಈ ಮೀಸಲಾತಿ ಅನ್ವಯವೇ ಮುಂದಿನ ನೇಮಕಾತಿಗಳು ನಡೆಯಬೇಕು ಎಂದು ಆದೇಶಿಸಲಾಗಿದೆ.

ಕೆಪಿಎಸ್‌ಸಿ, 2024ರ ಸೆಪ್ಟೆಂಬರ್ 20ರಂದು ಕೃಷಿ ಇಲಾಖೆಯಲ್ಲಿ 'ಬಿ' ವೃಂದದ 945 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ನಂತರ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಆದರೆ, ಸರ್ಕಾರವು ಕ್ರೀಡಾ ಸಾಧಕರಿಗೆ ಶೇ. 2ರಷ್ಟು ಮೀಸಲಾತಿ ನೀಡಿ ಹೊಸ ಆದೇಶ ಹೊರಡಿಸಿದ್ದರಿಂದ, ಅಧಿಸೂಚನೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿ ಅರ್ಜಿ ಆಹ್ವಾನಿಸಿತ್ತು.

ಎರಡು ಅಧಿಸೂಚನೆಗಳಿಗೆ ಎರಡು ನಿಯಮ

ಇದೀಗ ಕಲ್ಯಾಣ ಕರ್ನಾಟಕದ ಹುದ್ದೆಗಳಿಗೆ ಸೆಪ್ಟೆಂಬರ್ 6 ಮತ್ತು 7ರಂದು ಹಾಗೂ ಕಲ್ಯಾಣ ಕರ್ನಾಟಕೇತರ ಹುದ್ದೆಗಳಿಗೆ ಸೆಪ್ಟೆಂಬರ್ 27 ಮತ್ತು 28ರಂದು ಪರೀಕ್ಷೆ ನಡೆಸಲು ಕೆಪಿಎಸ್‌ಸಿ ತೀರ್ಮಾನಿಸಿದೆ. ಆದರೆ, ಇದಕ್ಕೂ ಮೊದಲು 2024ರ ಫೆಬ್ರವರಿಯಲ್ಲಿ ಹೊರಡಿಸಿದ್ದ ಭೂಮಾಪಕ ಹುದ್ದೆಗಳ ಅಧಿಸೂಚನೆ ಮತ್ತು ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಒಳ ಮೀಸಲಾತಿ ಕಾರಣ ನೀಡಿ ಸ್ಥಗಿತಗೊಳಿಸಿದೆ. ಹೀಗಿರುವಾಗ ಕೃಷಿ ಇಲಾಖೆಯ ಹುದ್ದೆಗಳಿಗೆ ಮಾತ್ರ ಪರೀಕ್ಷೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಒಳ ಮೀಸಲಾತಿ ನೀಡಿ ಪ್ರಯೋಜನವೇನು?

ಈ ಕುರಿತು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ (ಅಕ್ಸರ) ಅಧ್ಯಕ್ಷ ಸಂತೋಷ್ ಮರೂರು ಮಾತನಾಡಿ, "ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ಕೆಪಿಎಸ್‌ಸಿ ಪರೀಕ್ಷೆ ನಡೆಸುತ್ತಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೆಪಿಎಸ್‌ಸಿ, ಒಳ ಮೀಸಲಾತಿ ಅನ್ವಯವೇ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದ್ದು, ಮೂರು ದಶಕಗಳ ಹೋರಾಟಕ್ಕೆ ಏನು ಪ್ರಯೋಜನ? ಸರ್ಕಾರ ಒಳ ಮೀಸಲಾತಿ ನೀಡಿದರೂ ಪ್ರಯೋಜನವಾದರೂ ಏನು? ಸರ್ಕಾರ ಈಗಾಗಲೇ ತಡೆಹಿಡಿದಿರುವ ಮತ್ತು ಮುಂದೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳನ್ನು ಒಳ ಮೀಸಲಾತಿ ಅನ್ವಯವೇ ಮಾಡಬೇಕು. ಉದ್ಯೋಗದಲ್ಲಿ ಒಳ ಮೀಸಲಾತಿ ನೀಡಲು ಸರ್ಕಾರಕ್ಕೆ ಆಸಕ್ತಿ ಇದೆಯೇ, ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ, ಸಚಿವರಿಗೆ ಮನವಿ

"ಕೃಷಿ ಇಲಾಖೆಯ ಅಧಿಸೂಚನೆಗೆ ಒಳ ಮೀಸಲಾತಿ ಅನ್ವಯಿಸಿಯೇ ನೇಮಕಾತಿ ಮಾಡಬೇಕು" ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದಾದ್ಯಂತ ನೂರಾರು ಪರೀಕ್ಷಾರ್ಥಿಗಳು, ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೃಷಿ ಸಚಿವ ಚಲುವರಾಯಸ್ವಾಮಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಸಚಿವ ಆಂಜನೇಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. "ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು" ಎಂದು ಎಲ್ಲರೂ ಭರವಸೆ ನೀಡಿದ್ದಾರೆ ಎಂದು ಬೀದರ್‌ನ ಪರೀಕ್ಷಾರ್ಥಿ ಅಂಕೇಶ್ ತಿಳಿಸಿದ್ದಾರೆ.

ಕೆಪಿಎಸ್‌ಸಿಯಿಂದ ಹಾರಿಕೆಯ ಉತ್ತರ

"ಕೃಷಿ ಇಲಾಖೆ ಅಧಿಕಾರಿಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯಿಸಿ ಪರೀಕ್ಷೆ ನಡೆಸಿ ಎಂದು ಕೆಪಿಎಸ್‌ಸಿ ಸದಸ್ಯ ದೇವಪ್ಪ ಅವರಿಗೆ ವಿದ್ಯಾರ್ಥಿಗಳು ಮನವಿ ಮಾಡಿದಾಗ, 'ಮುಂದಿನ ನೇಮಕಾತಿಗಳಿಗೆ ಒಳ ಮೀಸಲಾತಿ ನೀಡುತ್ತೇವೆ. ಸದ್ಯಕ್ಕೆ ಕೃಷಿ ಇಲಾಖೆ ನೇಮಕಾತಿ ಪರೀಕ್ಷೆ ಬರೆಯಿರಿ' ಎಂದು ಹಾರಿಕೆಯ ಉತ್ತರ ನೀಡುತ್ತಾರೆ" ಎಂದು ಹೆಸರು ಹೇಳಲು ಇಚ್ಛಿಸದ ಪರೀಕ್ಷಾರ್ಥಿಯೊಬ್ಬರು ದೂರಿದ್ದಾರೆ.

ಪರೀಕ್ಷೆಗೆ ಕಾಲಾವಕಾಶ ನೀಡಿ

"ಉದ್ಯೋಗದಲ್ಲಿ ಮೀಸಲಾತಿ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ತೀರ್ಪು ಏನಾಗಲಿದೆ ಎಂಬ ಆತಂಕದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸೂಕ್ತ ಸಿದ್ಧತೆ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ, ಕೆಪಿಎಸ್‌ಸಿ ನಡೆಸಲು ಉದ್ದೇಶಿಸಿರುವ ಕೃಷಿ ಇಲಾಖೆ ಅಧಿಕಾರಿಗಳ ನೇಮಕಾತಿಗೆ ಒಳ ಮೀಸಲಾತಿ ಅನ್ವಯಿಸಿ, ಕನಿಷ್ಠ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಬೇಕು. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ" ಎಂದು ಪರೀಕ್ಷಾರ್ಥಿ ತೌಸಿಫ್ ಪಾಷಾ ಅಭಿಪ್ರಾಯಪಟ್ಟಿದ್ದಾರೆ.

ಒಳ ಮೀಸಲಾತಿ ಜಾರಿಗೊಳಿಸಿದ ನಂತರವೇ ಪರೀಕ್ಷೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒಕ್ಕೊರಲಿನಿಂದ ಮನವಿ ಮಾಡುತ್ತಿದ್ದಾರೆ. ಆದರೆ, ಕೆಪಿಎಸ್‌ಸಿ ಈಗಾಗಲೇ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Read More
Next Story