
ಕರ್ನಾಟಕ ಲೋಕಸೇವಾ ಆಯೋಗ
ಇನ್ನು ಮುಂದೆ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಕಪ್ಪು ಜತೆ ನೀಲಿ ಶಾಯಿಯ ಪೆನ್ನೂ ಬಳಸಬಹುದು
ಈ ಮೊದಲು ಕೇವಲ ಕಪ್ಪುಬಣ್ಣದ ಬಾಲ್ ಪೆನ್ನಿನಲ್ಲಿ ಮಾತ್ರ ಬರೆಯಬೇಕೆಂಬ ನಿಯಮವಿತ್ತು. ಆದರೆ ಈಗ ಕಪ್ಪು ಅಥವಾ ನೀಲಿ ಶಾಯಿಯ ಯಾವುದೇ ವಿಧದ ಪೆನ್ನನ್ನು ಬಳಸಬಹುದಾಗಿದೆ.
ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯಲ್ಲಿ ಬಳಸುವ ಪೆನ್ಗಳಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಇನ್ನು ಮುಂದೆ ಕಪ್ಪು ಶಾಯಿಯ ಪೆನ್ ಮಾತ್ರವಲ್ಲದೆ ನೀಲಿ ಶಾಯಿಯ ಪೆನ್ ಬಳಸಬಹುದು ಎಂದು ಹೇಳಿದೆ. ಈ ಹಿಂದೆ ಕೇವಲ ಕಪ್ಪು ಶಾಯಿ ಪೆನ್ಗಳ ಬಳಕೆ ಕಡ್ಡಾಯವಾಗಿತ್ತು. ಆ ನಿಯಮವನ್ನು ಈಗ ಬದಲಾಯಿಸಲಾಗಿದೆ.
ಹೊಸ ಪ್ರಕಟಣೆಯನ್ನು ಕೆಪಿಎಸ್‌ಸಿ ಸೋಮವಾರ (ಏಪ್ರಿಲ್ 28ರಂದು) ಹೊರಡಿಸಿದ್ದು, ಮುಖಪುಟದ ವಿವರಗಳನ್ನು ಬರೆಯಲು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪೆನ್ ಬಳಸಬಹುದು. ವಿವರಣಾತ್ಮಕ ಉತ್ತರ ಬರೆಯಲು ನೀಲಿ ಅಥವಾ ಕಪ್ಪು ಶಾಯಿಯ ಇಂಕ್ ಪೆನ್ ಸೇರಿದಂತೆ ಯಾವುದೇ ವಿಧದ ಪೆನ್ ಬಳಸಬಹುದು.
ಈ ಮೊದಲು ಕೇವಲ ಕಪ್ಪುಬಣ್ಣದ ಬಾಲ್ ಪೆನ್ನಲ್ಲಿ ಮಾತ್ರ ಬರೆಯಬೇಕೆಂಬ ನಿಯಮವಿತ್ತು. ಆದರೆ ಈಗ ಕಪ್ಪು ಅಥವಾ ನೀಲಿ ಶಾಯಿಯ ಯಾವುದೇ ವಿಧದ ಪೆನ್ನನ್ನು ಬಳಸಬಹುದಾಗಿದೆ. ಮೇ 3 ರಿಂದ9 ರವರೆಗೆ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆ ಪ್ರಾರಂಭವಾಗಲಿದ್ದು ಮುಖ್ಯ ಪರೀಕ್ಷೆಗೂ ಈ ನಿಯಮ ಅನ್ವಯವಾಗಲಿದೆ.
2024 ಫೆಬ್ರವರಿ 27ರಂದು ಕೆಎಎಸ್ 384 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದ ಕೆಪಿಎಸ್‌ಸಿ ಆಗಸ್ಟ್ 27 ರಂದು ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆಂಗ್ಲಭಾಷೆಯಿಂದ ಕನ್ನಡಕ್ಕೆ ಭಾಷಾಂತರವಾಗಿದ್ದ ಎರಡು ಪ್ರಶ್ನೆಪತ್ರಿಕೆಯಲ್ಲಿ ಎಂಬತ್ತಕ್ಕೂ ಅಧಿಕ ಪ್ರಶ್ನೆಗಳು ತಪ್ಪಾಗಿದ್ದವು. ವಿದ್ಯಾರ್ಥಿಗಳು ಹಾಗೂ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರ ಪರಿಣಾಮ ಪೂರ್ವಭಾವಿ ಪರೀಕ್ಷೆ ರದ್ದುಪಡಿಸಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಮರು ಪರೀಕ್ಷೆಗೆ ಆದೇಶಿಸಿದ್ದರು.
ಡಿಸೆಂಬರ್ 29ರಂದು ಪೂರ್ವಭಾವಿ ಮರು ಪರೀಕ್ಷೆ ನಡೆಸಿದ್ದರೂ, ಭಾಷಾಂತರದ ಎಡವಟ್ಟಿನಿಂದ 79ಕ್ಕೂ ಅಧಿಕ ಪ್ರಶ್ನೆಗಳು ಮತ್ತೆ ತಪ್ಪಾಗಿ ಭಾಷಾಂತರಗೊಂಡಿದ್ದವು. ಕೆಪಿಎಸ್‌ಸಿಯ ಈ ಎಡವಟ್ಟು ವಿದ್ಯಾರ್ಥಿಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಟೀಕೆಗೆ ಗುರಿಯಾಗಿತ್ತು.