KPSC Controversy | ನಿಲ್ಲದ ಕೆಪಿಎಸ್‌ಸಿ ನಿರ್ಲಕ್ಷ್ಯ; 70 ಸಾವಿರ ಪ್ರೊಬೆಷನರಿ ಹುದ್ದೆ ಆಕಾಂಕ್ಷಿಗಳ ಆಸೆಗೆ ಎಳ್ಳುನೀರು
x

ಕರ್ನಾಟಕ ಲೋಕಸೇವಾ ಆಯೋಗ

KPSC Controversy | ನಿಲ್ಲದ ಕೆಪಿಎಸ್‌ಸಿ ನಿರ್ಲಕ್ಷ್ಯ; 70 ಸಾವಿರ ಪ್ರೊಬೆಷನರಿ ಹುದ್ದೆ ಆಕಾಂಕ್ಷಿಗಳ ಆಸೆಗೆ ಎಳ್ಳುನೀರು

ಲಕ್ಷಾಂತರ ಯುವಜನರು ಉಪವಿಭಾಗಧಿಕಾರಿ, ಡಿವೈಎಸ್‌ಪಿ, ತಹಶೀಲ್ದಾರ್‌ ಸೇರಿ ಹಲವು ಉನ್ನತ ಹುದ್ದೆಗಳ ಮೂಲಕ ನಾಗರಿಕ ಸೇವೆ ಸಲ್ಲಿಸಬೇಕೆಂದು ಹಗಲು- ರಾತ್ರಿ ಅಧ್ಯಯನ ಮಾಡಿದ್ದರು. ಆದರೆ, ಅವರ ಆಸೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಎಳ್ಳು ನೀರು ಬಿಟ್ಟಿದೆ.


ಸರ್ಕಾರಿ ಉದ್ಯೋಗ ಪಡೆಯುವ, ಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಳ್ಳುವ ಆಕಾಂಕ್ಷಿಗಳ ಮಹದಾಸೆಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಕೊಳ್ಳಿ ಇಟ್ಟಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ವರ್ಷಗಳ ಕಾಲ ಹಗಲಿರುಳು ತಯಾರಿ ನಡೆಸಿದ್ದ ಅಭ್ಯರ್ಥಿಗಳಿಗೆ ಸರ್ಕಾರ ಹಾಗೂ ಕೆಪಿಎಸ್‌ಸಿ ಜಂಟಿಯಾಗಿ ಎಳ್ಳು ನೀರು ಬಿಟ್ಟಿವೆ.

ಕೆಪಿಎಸ್‌ಸಿಯ ಸ್ವಯಂಕೃತ ಲೋಪಗಳಿಂದಾಗಿ 70 ಸಾವಿರಕ್ಕೂ ಅಧಿಕ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆ ಆಕಾಂಕ್ಷಿಗಳ ಭವಿಷ್ಯವನ್ನು ಮಣ್ಣು ಪಾಲು ಮಾಡಿದೆ. ಆಡಳಿತ ಯಂತ್ರಕ್ಕೆ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡುವ ಹೊಣೆ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ ನಿರ್ಲಕ್ಷ್ಯ ಮುಂದುವರಿದಿದೆ.

2024ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಆಯೋಗ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಒಂದಲ್ಲ, ಎರಡು ಬಾರಿ ಭಾಷಾಂತರದ ದೋಷ ಕಂಡು ಬಂದರೂ ಆಯೋಗ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ತಾನು ಮಾಡಿದ ತಪ್ಪಿಗೆ ಅಭ್ಯರ್ಥಿಗಳನ್ನು ಬಲಿಪಶು ಮಾಡಿದ್ದು, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳೇ ಹೆಚ್ಚು ಬಾಧಿತರಾಗಿದ್ದಾರೆ.

ಮಣ್ಣುಪಾಲಾದ ಅಭ್ಯರ್ಥಿಗಳ ಶ್ರಮ

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಾದ ಉಪವಿಭಾಗಾಧಿಕಾರಿ, ಡಿವೈಎಸ್‌ಪಿ, ತಹಸೀಲ್ದಾರ್‌ ಸೇರಿದಂತೆ ಹಲವು ಹುದ್ದೆಗಳಿಗೆ ಲಕ್ಷಾಂತರ ಯುವಕರು ಅರ್ಜಿ ಸಲ್ಲಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಹಗಲಿರುಳು ಅಧ್ಯಯನ ನಡೆಸಿದ್ದರು. ಆದರೆ, ಕೆಪಿಎಸ್‌ಸಿ ಪ್ರತಿ ಪರೀಕ್ಷೆಯಲ್ಲೂ ಮಾಡುವ ಅವಾಂತರಗಳಿಂದ ಹುದ್ದೆ ಆಕಾಂಕ್ಷಿಗಳು ನಿತ್ಯ ನ್ಯಾಯಾಲಯ, ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಅಧಿಸೂಚನೆ ಹೊರಡಿಸಿ ವರ್ಷಗಳೇ ಕಳೆದರೂ ಇಂದಿಗೂ ನೇಮಕಾತಿ ಪತ್ರ ನೀಡದಿರುವುದು ಕೆಪಿಎಸ್‌ಸಿ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಈಗ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದವರಲ್ಲಿ ಸುಮಾರು 70 ಸಾವಿರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.


ಗೆಜೆಟೆಡ್‌ ಪ್ರೊಬೆಷನರಿ ಪರೀಕ್ಷೆಯಲ್ಲಿ ಅವಾಂತರ

ಕೆಪಿಎಸ್‌ಸಿಯು 2023-24 ನೇ ಸಾಲಿನಲ್ಲಿ 384 ಗೆಜೆಟೆಡ್‌ ಪ್ರೊಬೆಷನರಿ ʼಗ್ರೂಪ್‌ ಎʼ ಹಾಗೂ ʼಗ್ರೂಪ್‌ ಬಿʼ ಹುದ್ದೆಗಳಿಗೆ 2024 ಫೆ.27 ರಂದು ಅಧಿಸೂಚನೆ ಹೊರಡಿಸಿತ್ತು. ಅದಕ್ಕಾಗಿ ಆ.27 ರಂದು ಕೆಪಿಎಸ್‌ಸಿಯು ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಎರಡು ಪ್ರಶ್ನೆ ಪತ್ರಿಕೆಗಳ ಭಾಷಾಂತರದಲ್ಲಿ 70 ಕ್ಕೂ ಹೆಚ್ಚು ಪ್ರಶ್ನೆಗಳು ತಪ್ಪಾಗಿದ್ದವು. ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅರ್ಥ ಮಾಡಿಕೊಳ್ಳುವುದೇ ಸವಾಲಾಗಿತ್ತು. ದೋಷಪೂರಿತ ಪ್ರಶ್ನೆಪತ್ರಿಕೆ ತಯಾರಿಸಿದ ಕೆಪಿಎಸ್‌ಸಿ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಬೃಹತ್‌ ಪ್ರತಿಭಟನೆ ನಡೆಸಿದ್ದರ ಪರಿಣಾಮ ಸಿಎಂ ಸಿದ್ದರಾಮಯ್ಯ ಅವರು ಮರು ಪರೀಕ್ಷೆಗೆ ಆದೇಶಿಸಿದ್ದರು.

ಮರುಪರೀಕ್ಷೆಯಲ್ಲೂ ಮತ್ತದೇ ಲೋಪ

ಸಿಎಂ ಸಿದ್ದರಾಮಯ್ಯ ಅವರು ಮರುಪರೀಕ್ಷೆಗೆ ಸೂಚಿಸಿದ ನಂತರವೂ ಕೆಪಿಎಸ್‌ಸಿ ಡಿ.29ರಂದು ನಡೆಸಿದ ಮರುಪರೀಕ್ಷೆಯಲ್ಲಿ ತನ್ನ ಎಡವಟ್ಟು ಮುಂದುವರಿಸಿತ್ತು. ಎರಡು ಪ್ರಶ್ನೆ ಪತ್ರಿಕೆಗಳಲ್ಲಿ ಒಟ್ಟು 79 ಪ್ರಶ್ನೆಗಳ ಭಾಷಾಂತರದಲ್ಲಿ ದೋಷಗಳಿದ್ದವು. ಆಗಲೂ ವಿದ್ಯಾರ್ಥಿ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸಿದ್ದವು. ಆಗ ಲೋಕಸೇವಾ ಆಯೋಗವು ಆಂತರಿಕ ಸಮಿತಿ ರಚಿಸಿ, 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿತ್ತು. ಆದರೆ, ಇದನ್ನು ಒಪ್ಪದ ಕೆಲ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕೆಪಿಎಸ್‌ಸಿ ಕರ್ಮಕಾಂಡದ ವಿರುದ್ಧ ಹೈಕೋರ್ಟ್‌ ಕೂಡ ಚಾಟಿ ಬೀಸಿತ್ತು. ಈ ಸಂಬಂಧ ಪ್ರತಿಪಕ್ಷಗಳು ಸದನದಲ್ಲಿ ಪ್ರಸ್ತಾಪಿಸಿ, ಕೆಪಿಎಸ್‌ಸಿಗೆ ಸುಧಾರಣೆ ತರುವಂತೆ ಒತ್ತಾಯಿಸಿದ್ದವು.

ಹುಸಿಯಾದ ಸಿಎಂ ಅಭಯ

ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆ ಅವಾಂತರ ಖಂಡಿಸಿ ಹೋರಾಟ ತೀವ್ರವಾದ ಹಿನ್ನೆಲೆಯಲ್ಲಿ ಬಜೆಟ್‌ ಅಧಿವೇಶನದಲ್ಲಿ ವಿಪಕ್ಷಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ ವಿಷಯ ನ್ಯಾಯಾಲಯದಲ್ಲಿದೆ. ತೀರ್ಪು ಬಂದ ನಂತರ ಸರ್ವಪಕ್ಷದ ಸಭೆ ಕರೆದು ಅನ್ಯಾಯಕ್ಕೆ ಒಳಗಾದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿಭಾಗದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಆದರೆ ಸಿಎಂ ಅಭಯ ಹುಸಿಯಾಗಿದೆ.

ನ್ಯಾಯಾಲಯದ ಮೊರೆ

ಕೆಪಿಎಸ್‌ಸಿ ಮರು ಪರೀಕ್ಷೆಯಲ್ಲಿ 79ಕ್ಕೂ ಹೆಚ್ಚು ತಪ್ಪುಗಳಾಗಿದ್ದವು. ಭಾಷಾಂತರದಲ್ಲಿ ಶೇ. 45-50 ರಷ್ಟು ದೋಷಗಳಿವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹೇಳಿತ್ತು. ಕೆಪಿಎಸ್‌ಸಿ ಆಂತರಿಕ ಸಮಿತಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿ ಫಲಿತಾಂಶ ಪ್ರಕಟಿಸಿತ್ತು. ಇದರ ವಿರುದ್ಧ ಮತ್ತೆ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಹೈಕೋರ್ಟ್‌ ಮೊರೆ ಹೋಗಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಮೊದಲ ಹಂತದಲ್ಲಿ ಏ.28 ರಂದು 32 ಅಭ್ಯರ್ಥಿಗಳು, ಏ.29 ರಂದು 144 ಅಭ್ಯರ್ಥಿಗಳು ಹಾಗೂ ಮೇ 2 ರಂದು 119 ಅಭ್ಯರ್ಥಿಗಳು ಸೇರಿ ಒಟ್ಟು 295 ಅಭ್ಯರ್ಥಿಗಳಿಗೆ ಮುಖ್ಯಪರೀಕ್ಷೆ ಬರೆಯಲು ಅವಕಾಶ ನೀಡಿತ್ತು.


ಸಾಮಾಜಿಕ ನ್ಯಾಯಕ್ಕೆ ಒತ್ತಾಯ

ಕೆಪಿಎಸ್‌ಸಿ ತನ್ನ ಭಾಷಾಂತರ ದೋಷದ ಹೊರತಾಗಿಯೂ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿತ್ತು. 384 ಹುದ್ದೆಗಳಿಗೆ 1:15 ಅಭ್ಯರ್ಥಿಗಳಂತೆ 5,760 ಮಂದಿ ಉತ್ತೀರ್ಣರಾಗಿದ್ದರು. ಭಾಷಾಂತರ ದೋಷದಿಂದ ಕಡಿಮೆ ಅಂಕ ಗಳಿಸಿ ಮುಖ್ಯಪರೀಕ್ಷೆಗೆ ಅವಕಾಶ ಸಿಗದೇ 70 ಸಾವಿರಕ್ಕೂ ಅಧಿಕ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳು ಅನ್ಯಾಯಕ್ಕೆ ಒಳಗಾಗಿದ್ದರು. ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಅಭ್ಯರ್ಥಿಗಳು ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಬಡ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮುಖ್ಯಪರೀಕ್ಷೆ ಬರೆಯಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಕೋರ್ಟ್‌ ಮೊರೆ ಹೋದ ವಿದ್ಯಾರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆಗೆ ಅವಕಾಶ ದೊರೆತಿದೆ. ಈ ತಾರತಮ್ಯ ನಿವಾರಿಸಿ, ಸಾಮಾಜಿಕ ನ್ಯಾಯ ದೊರಕಿಸಬೇಕು ಎಂಬುದು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳ ಒತ್ತಾಯವಾಗಿದೆ.

ಕೆಪಿಎಸ್‌ಸಿ ಶುದ್ಧೀಕರಣ ಅಗತ್ಯ

"ಕೆಪಿಎಸ್‌ಸಿ ನಡೆಸಿದ ಹಲವಾರು ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಗೆಜೆಟೆಡ್‌ ಪ್ರೊಬೆಷನರಿ ಪರೀಕ್ಷೆಯನ್ನು ಅತ್ಯಂತ ವೇಗವಾಗಿ, ಹಗಲು-ರಾತ್ರಿ ಕಾರ್ಯನಿರ್ವಹಿಸಿ ನಡೆಸುತ್ತಿರುವುದು ಆಶ್ಚರ್ಯ ಹಾಗೂ ಅನುಮಾನ ಮೂಡಿಸುತ್ತಿದೆ. ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ಕೊಟ್ಯಂತರ ರೂ.ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಪೂರ್ವಭಾವಿ ಮರುಪರೀಕ್ಷೆಯಲ್ಲಿ ನಡೆದ ಭಾಷಾಂತರ ದೋಷದಿಂದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳ ಅನ್ಯಾಯವಾಗಿದೆ. ಅಧಿಸೂಚನೆ ಹೊರಡಿಸುವ ಮುನ್ನ ಕೇಂದ್ರ ಲೋಕಸೇವಾ ಆಯೋಗದಂತೆ ವೇಳಾಪಟ್ಟಿ ನಿಗದಿಪಡಿಸಿ ಪರೀಕ್ಷಾ ದಿನಾಂಕ, ಫಲಿತಾಂಶದ ದಿನಾಂಕ ಪ್ರಕಟಿಸಬೇಕು" ಎಂದು ಕೆಎಎಸ್‌ ಮುಖ್ಯಪರೀಕ್ಷೆಯ ಅವಕಾಶವಂಚಿತ ಅಭ್ಯರ್ಥಿ ದರ್ಶನ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.


ಅಕ್ರಮದ ವರದಿ ನೀಡಿದ್ದ ಸಿಐಡಿ

2011ರಲ್ಲಿ ಕೆಪಿಎಸ್‌ಸಿ 362 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಪರೀಕ್ಷೆ ನಡೆಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿತ್ತು. ಅಂತಿಮ ಆಯ್ಕೆಗೆ ಸಂಬಂಧಿಸಿ ಕೆಲವು ಅಭ್ಯರ್ಥಿಗಳು ಕೋರ್ಟ್‌ ಮೊರೆ ಹೋಗಿದ್ದರು. ಕೋರ್ಟ್‌ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿದ್ದರು.

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

ಪ್ರಸ್ತುತ, ಕೆಪಿಎಸ್‌ಸಿ ನಡೆಸಿದ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಷಾಂತರ ದೋಷದಿಂದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಆರ್ಥಿಕವಾಗಿ ಸಬಲರಾಗಿರುವವರು ಕೋರ್ಟ್‌ಗೆ ಹೋಗಿ ಮುಖ್ಯಪರೀಕ್ಷೆಗೆ ಅವಕಾಶ ಪಡೆದಿದ್ದಾರೆ. ಆದರೆ, ಹಣಕಾಸಿನ ಸಮಸ್ಯೆಯಿಂದ ಸುಮಾರು 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಸಿಕ್ಕಿಲ್ಲ. ಹಾಗಾಗಿ ನಮಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಪರೀಕ್ಷೆ ವಂಚಿತರಲ್ಲಿ ಕೆಲವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಮಧ್ಯರಾತ್ರಿವರೆಗೂ ಪ್ರವೇಶ ಪತ್ರ ವಿತರಣೆ

ಕೆಪಿಎಸ್‌ಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇ 2 ರಂದು ರಾತ್ರಿ 12 ಗಂಟೆವರೆಗೂ ಕಾರ್ಯನಿರ್ವಹಿಸಿ ಇತಿಹಾಸ ಬರೆದಿದೆ. ಹೈಕೋರ್ಟ್‌ ಹಾಗೂ ಕೆಎಟಿ ನೀಡಿದ ಮಧ್ಯಂತರ ಆದೇಶದ ಪ್ರಕಾರ ಮುಖ್ಯಪರೀಕ್ಷೆ ಅವಕಾಶ ಪಡೆದ 119 ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಸೂಚಿಸಿ, ಪ್ರವೇಶ ಪತ್ರ ವಿತರಿಸಿತ್ತು. ತಡರಾತ್ರಿವರೆಗೂ ಮಳೆಯಲ್ಲಿಯೇ ಕಾದು ಅಭ್ಯರ್ಥಿಗಳು ಪ್ರವೇಶಪತ್ರ ಪಡೆದು ಬೆಳಿಗ್ಗೆ ಒತ್ತಡದಲ್ಲಿ ಪರೀಕ್ಷೆ ಬರೆಯಬೇಕಾಗಿ ಬಂದ ಪರಿಸ್ಥಿತಿ ಸೃಷ್ಟಿಸಿದ ಕೆಪಿಎಸ್‌ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

"ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯಲ್ಲಿ ದೋಷಪೂರಿತ ಭಾಷಾಂತರದಿಂದ 70 ಸಾವಿರಕ್ಕೂ ಅಧಿಕ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ವಿಧಾನಸಭೆಯಲ್ಲಿ ಕೊಟ್ಟ ಮಾತಿನಂತೆ ಅನ್ಯಾಯವಾದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಬೇಕು. ಇಲ್ಲವೇ ಎರಡನೇ ಬಾರಿಗೆ ನಡೆದಿರುವ ಪೂರ್ವಭಾವಿ ಮರುಪರೀಕ್ಷೆ ರದ್ದುಗೊಳಿಸಿ ಮತ್ತೊಮ್ಮೆ ಮರುಪರೀಕ್ಷೆ ನಡೆಸಬೇಕು" ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾಧಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

Read More
Next Story