ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ; ರಂಗಕ್ಕಿಳಿದ ಬಿ.ಕೆ. ಹರಿಪ್ರಸಾದ್‌, ಪರಮೇಶ್ವರ್
x
ಚರ್ಚೆ ಮಾಡುತ್ತಿರುವ ಕಾಂಗ್ರೆಸ್ ನಾಯಕರಾದ ಸುರ್ಜೆವಾಲಾ, ಸಿದ್ದರಾಮಯ್ಯ, ಡಿಕೆಶಿ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ; ರಂಗಕ್ಕಿಳಿದ ಬಿ.ಕೆ. ಹರಿಪ್ರಸಾದ್‌, ಪರಮೇಶ್ವರ್

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಸಿಎಂ ಡಿಕೆ ಶಿವಕುಮಾರ್ ಬದಲಾವಣೆ ವಿಚಾರ ಈಗ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವ ಪಡೆದುಕೊಂಡಿದೆ. ತಮ್ಮದೇ ಪಕ್ಷದ ನಾಯಕರಿಗೆ ತಿರುಗೇಟು ಕೊಡುವ ಮೂಲಕ ಡಿಕೆಶಿ ಬಿಸಿ ಮುಟ್ಟಿಸಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ. ಶಿವಕುಮಾರ್ ಬದಲಾವಣೆ ಆಗುವವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಈ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.

ಜ. 16 ರಂದು ಸಂಪುಟ ಸಭೆಗೂ ಮುನ್ನ ಬಹುತೇಕ ಸಚಿವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಎದುರು ಮಾತನಾಡಿದ್ದರು. ನಂತರವೂ ಕಾಂಗ್ರೆಸ್ ವಲಯದಲ್ಲಿ ಈ ಚರ್ಚೆ ಮುಂದುವರೆದಿದ್ದು ಕಾಂಗ್ರೆಸ್ ಹಿರಿಯ ನಾಯಕ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಬೆಂಗಳೂರಿನಲ್ಲಿ ಮೊದಲ ಬಾರಿ ಮಾತನಾಡಿದ್ದಾರೆ. ಅದಕ್ಕೆ ಡಿಕೆ ಶಿವಕುಮಾರ್ ತಿರುಗೇಟನ್ನೂ ನೀಡಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವುದೇನು? ಮುಂದಿದೆ ಮಾಹಿತಿ.

'ಈ ವಿಚಾರ ಉದಯಪುದಲ್ಲಿ ತೆಗೆದುಕೊಂಡಿರುವ ನಿರ್ಣಯದಂತೆ ಈಗ ಚರ್ಚೆ ಆಗುತ್ತಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ತೀರ್ಮಾನವನ್ನು ಉದಯಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ತೆಗೆದುಕೊಳ್ಳಲಾಗಿದೆ. ಈ ತೀರ್ಮಾನದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬೇಡಿಕೆ ಇಡುತ್ತಿದ್ದಾರೆ. ಆದರೆ ಈ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕಿತ್ತು. ಮೊನ್ನೆ ನಡೆದ ಸಿಎಲ್‌ಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಬೇಕಿತ್ತು. ಅದನ್ನು ಬಿಟ್ಟು ಬಹಿರಂಗವಾಗಿ ಈ ವಿಚಾರವನ್ನು ಚರ್ಚೆ ಮಾಡುವುದು ಸರಿಯಲ್ಲ. ಮತ್ತೆ ಶಾಸಕಾಂಗ ಪಕ್ಷದ ಸಭೆ ಕರೆದಾಗ ಈ ವಿಷಯದ ಮೇಲೆ ಮಾತನಾಡೋಣ ಎಂದು ಸುಮ್ಮನಾದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಆಗದಿದ್ದರೂ, ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆದರೂ ಇದು ಚರ್ಚೆ ಆಗಬೇಕಿತ್ತು. ಆದರೆ ಆಗಿಲ್ಲ. ಹೀಗಾಗಿ ಕೆಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ' ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ.

'ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಬದಲಾವಣೆ ಕುರಿತು ಎಐಸಿಸಿ ಅಂತಿಮ ನಿರ್ಧಾರ ಮಾಡುತ್ತದೆ. ಸಚಿವರುಗಳು ಕೂಡ ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡುತ್ತಿದ್ದಾರೆ' ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಆ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್ ನಿರ್ಗಮಿಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಒಬ್ಬರಿಗೆ ಒಂದೇ ಸ್ಥಾನ ಎನ್ನುವ ಮೂಲಕ ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಈ ಎರಡರಲ್ಲಿ ಒಂದು ಹುದ್ದೆಯಲ್ಲಿ ಮುಂದುವರೆಯಬೇಕು ಎಂದು ಡಿಕೆ ಶಿವಕುಮಾರ್​ಗೆ ಪರೋಕ್ಷ ಸಂದೇಶವನ್ನು ಹರಿಪ್ರಸಾದ್ ರವಾನಿಸಿದ್ದಾರೆ.

ಪರಮೇಶ್ವರ್‌ ಮಾತು

ಜೊತೆಗೆ ಇದೇ ವಿಚಾರದ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಮಾತನಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸುರ್ಜೆವಾಲಾ ಎದುರಿಗೆ ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಭೆ ಮಾಡಿದರೆ, ನಮ್ಮ ಅಭಿಪ್ರಾಯ ಏನಿದೆಯೊ ಅದನ್ನು ಅವರಿಗೆ ಹೇಳುತ್ತೇವೆ. ಈ ಕುರಿತು ಮಾಧ್ಯಮಗಳ ಎದುರು ಮಾತನಾಡಬೇಡಿ ಎಂದಿದ್ದಾರೆ. ಹೀಗಾಗಿ ನಾವೇ ನೇರವಾಗಿ ಸುರ್ಜೆವಾಲಾಗೆ ಹೇಳುತ್ತೇವೆ. ಮಾಧ್ಯಮಗಳ ಎದುರು ನನ್ನ ಅಭಿಪ್ರಾಯ ಹೇಳುವುದಿಲ್ಲ ಎಂದಿದ್ದಾರೆ.

ಆ ಮೂಲಕ ತಾವು ಕರೆದಿದ್ದ ಎಸ್​ಸಿ, ಎಸ್​ಟಿ ಕಾಂಗ್ರೆಸ್ ನಾಯಕರ ಔತಣಕೂಟಕ್ಕೆ ಹೈಕಮಾಂಡ್ ಹೆಸರಿನಲ್ಲಿ ಬ್ರೇಕ್ ಹಾಕಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷರ ಮೇಲೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಡಿಕೆಶಿ ತಿರುಗೇಟು

ಸ್ವಪಕ್ಷದ ನಾಯಕ ಹೇಳಿಕೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮದೇ ದಾಟಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

"ನಾನು ಯಾವ ಸ್ಥಾನ ಹುಡುಕಿ ಹೋದವನಲ್ಲ" ಎಂದು ಬೆಂಗಳೂರಿನಲ್ಲಿ ತಮ್ಮದೇ ಪಕ್ಷದ ನಾಯಕರಿಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. "ಹುಡುಕಿಕೊಂಡು ಹೋದರೂ ಸಿಗುವ ಸ್ಥಾನ ಅದಲ್ಲ. ಯಾರಿಗೇ ಆದರೂ ಕರೆದು ಕೊಡಬೇಕು. ನಾಯಕತ್ವ ಗುಣ, ಸಂಘಟನೆ ಮಾಡುವ ಶಕ್ತಿಯನ್ನು ನೋಡಿ ಹುದ್ದೆಯನ್ನು ಕೊಡುತ್ತಾರೆ. ನಮ್ಮ ಪಕ್ಷದಲ್ಲಿ ಈ ರೀತಿ ಇದೆ. ಬೇರೆ ಪಕ್ಷದಲ್ಲಿ ಏನಿದೆಯೋ ಗೊತ್ತಿಲ್ಲ. ಗಾಂಧಿ, ನೆಹರೂ, ಇಂದಿರಾ ಗಾಂಧಿ ಕುಳಿತ ಜಾಗದಲ್ಲಿ ಈಗ ಮಲ್ಲಿಕಾರ್ಜುನ್ ಖರ್ಗೆ ಕುಳಿತಿದ್ದಾರೆ. ಅವರಿಗೆ ಕಣ್ಣು,ಕಿವಿ ಇದೆ. ಈ ಎಲ್ಲ ವಿಚಾರವೂ ಗೊತ್ತಿದೆ. ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಶುರು ಮಾಡಿ ರಾಷ್ಟ್ರದ ಅಧ್ಯಕ್ಷರಾಗಿ ಕುಳಿತಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಇದನ್ನೆಲ್ಲ ನೋಡಿಕೊಳ್ಳುತ್ತಾರೆ. ನಾನು ಏನು ಚರ್ಚೆ ಮಾಡಲ್ಲ," ಎಂದು ಹೇಳುವ ಮೂಲಕ ನನ್ನ ಬೆಂಬಲಕ್ಕೆ ಹೈಕಮಾಂಡ್ ಇದೆ ಎಂಬ ಸಂದೇಶವನ್ನು ತಮ್ಮ ಪಕ್ಷದ ನಾಯಕರಿಗೆ ರವಾನಿಸಿದ್ದಾರೆ.

ಆದರೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಕಾಂಗ್ರೆಸ್​ ಪಕ್ಷದಲ್ಲಿ ಇಷ್ಟಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಆ ಬೇಡಿಕೆಯನ್ನೂ ಅವರು ಪಕ್ಷದ ವೇದಿಕೆಯಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡುವ ಮೂಲಕ ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೆ ಬಗ್ಗೆ ಪ್ರಸ್ತಾಪ ಮಾಡದಂತೆ ಒತ್ತಡ ಹಾಕುವ ತಂತ್ರ ಇದಾಗಿದೆ ಎನ್ನಲಾಗುತ್ತಿದೆ.

Read More
Next Story