KPCC President | ನೂತನ ಅಧ್ಯಕ್ಷರ ನೇಮಕ ಕೂಗು: ಯಾರಾಗಲಿದ್ದಾರೆ ರಾಜ್ಯ ಕಾಂಗ್ರೆಸ್ ಸಾರಥಿ?
ಕಳೆದ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಎದ್ದಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(KPCC) ಅಧ್ಯಕ್ಷರ ಬದಲಾವಣೆಯ ಚರ್ಚೆ, ಇದೀಗ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾವೇಶದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಕಳೆದ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಎದ್ದಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(KPCC) ಅಧ್ಯಕ್ಷರ ಬದಲಾವಣೆಯ ಚರ್ಚೆ, ಇದೀಗ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾವೇಶದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಬದಲಾವಣೆಯ ಚರ್ಚೆ ಮತ್ತೆ ಮತ್ತೆ ಚಾಲ್ತಿಗೆ ಬರುತ್ತಿದೆ. ಆದರೆ, ವಿಧಾನಸಭಾ ಚುನಾವಣೆಯ ಬಳಿಕ ಲೋಕಸಭಾ ಚುನಾವಣೆ ಎದುರಾಯಿತು, ಬಳಿಕ ಉಪಚುನಾವಣೆ ಬಂದಿತು. ಹೀಗೆ ಚುನಾವಣೆಗಳ ಮೇಲೆ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತೆ ಮತ್ತೆ ಮುಂದೆ ಹೋಗಿತ್ತು. ಇದೀಗ ಮತ್ತೆ ಬಿಬಿಎಂಪಿ ಮತ್ತು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು ಎದುರಾಗಿವೆ.
ಈ ನಡುವೆ, ಬೆಳಗಾವಿಯಲ್ಲಿ ಐತಿಹಾಸಿನ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ವಾರಾಂತ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಮಾವೇಶದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಬದಲಾವಣೆಯ ಕೂಗನ್ನು ಮತ್ತೆ ಎತ್ತಿದ್ದು, ದೆಹಲಿ ಮಟ್ಟದಲ್ಲಿ ಈಗಾಗಲೇ ಕೆಲವರು ಲಾಬಿಯನ್ನೂ ಆರಂಭಿಸಿದ್ದಾರೆ.
ಮುಖ್ಯವಾಗಿ ಕಳೆದ ಬಾರಿಯೇ ಪ್ರಮುಖವಾಗಿ ಹೆಸರು ಕೇಳಿಬಂದಿದ್ದ ಸಚಿವ ಡಾ ಎಂ ಬಿ ಪಾಟೀಲರು ದೆಹಲಿ ಮಟ್ಟದಲ್ಲಿ ಪ್ರಬಲ ಲಾಬಿ ನಡೆಸಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಕೂಡ ಮೇಲುಗೈ ಆಗುವ ಸಂಭವ ಇದೆ ಎನ್ನಲಾಗುತ್ತಿದೆ.
ಸಾರಥ್ಯಕ್ಕೆ ಹಲವರ ಪೈಪೋಟಿ
ಅಲ್ಲದೆ, ಅದೇ ಉತ್ತರಕರ್ನಾಟಕ ಭಾಗದ ಮತ್ತೊಬ್ಬ ಪ್ರಭಾವಿ ಮುಖಂಡರಾದ ಸಚಿವ ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಪಟ್ಟಕ್ಕಾಗಿ ಕಳೆದ ಒಂದು ವರ್ಷದಿಂದಲೂ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಅವರು ಆ ಕುರಿತು ಹಲವು ಬಾರಿ ಬಹಿರಂಗ ಹೇಳಿಕೆಗಳನ್ನೂ ನೀಡಿದ್ದಾರೆ.
ಅವರೊಂದಿಗೆ ಸಚಿವ ಈಶ್ವರ್ ಖಂಡ್ರೆ, ಹಿರಿಯ ನಾಯಕ ಬಿ ಕೆ ಹರಿಪ್ರಸಾದ್, ಕೆ ಎನ್ ರಾಜಣ್ಣ ಅವರ ಹೆಸರುಗಳೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಇವೆ ಎನ್ನಲಾಗುತ್ತಿದೆ.
ಆದರೆ, ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ಹಳೇ ಮೈಸೂರು ಭಾಗದ ಡಿ ಕೆ ಶಿವಕುಮಾರ್ ಅವರಿಗೆ ನೀಡಿ ನಾಲ್ಕೂವರೆ ವರ್ಷಗಳ ಕಾಲ ಅವರಿಗೆ ಅಧಿಕಾರ ನೀಡಿರುವ ಕಾಂಗ್ರೆಸ್, ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಯೂ ಮಾಡಿದೆ. ಜೊತೆಗೆ ಮುಖ್ಯಮಂತ್ರಿ ಸ್ಥಾನ ಕೂಡ ಹಳೇ ಮೈಸೂರು ಭಾಗದವರಿಗೇ ನೀಡಲಾಗಿದೆ. ಹಾಗಾಗಿ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕದವರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಹಲವರ ಕೋಟಾ ಈಗಾಗಲೇ ಮುಗಿದಿದೆ
ಅಲ್ಲದೆ, ಪಕ್ಷದ ಸಾರಥ್ಯವನ್ನೂ ಇತ್ತೀಚಿನ ವರ್ಷಗಳಲ್ಲಿ ಈಗಾಗಲೇ ದಲಿತರು, ಬ್ರಾಹ್ಮಣರು ಮತ್ತು ಒಕ್ಕಲಿಗರು ವಹಿಸಿಕೊಂಡಿದ್ದಾರೆ. ಹಾಗಾಗಿ ಅವರ ಸಮುದಾಯಗಳ ಕೋಟಾ ಮುಗಿದಿದೆ. ಹಲವು ದಶಕಗಳಿಂದ ಲಿಂಗಾಯತರಿಗೆ ಪಕ್ಷದ ಸಾರಥ್ಯ ಸಿಕ್ಕಿಲ್ಲ.
ಅದರಲ್ಲೂ ಮುಖ್ಯವಾಗಿ ಪಕ್ಷದ ಆಯಕಟ್ಟಿನ ಸ್ಥಾನದಲ್ಲಿ ಅಧಿಕಾರ ಇಲ್ಲದೇ ಇರುವ ಲಿಂಗಾಯತ ಅಥವಾ ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಹೆಚ್ಚಿರುವುದರಿಂದ ಡಾ ಎಂ ಬಿ ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶಗಳು ಹೆಚ್ಚಿವೆ ಎಂಬ ಮಾತು ಕೆಪಿಸಿಸಿ ಅಂಗಳದಲ್ಲಿ ಕೇಳಿಬರುತ್ತಿದೆ. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಮತ್ತೊಬ್ಬ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ.
ಬೆಳಗಾವಿ ಅಧಿವೇಶನದ ಅವಧಿಯಲ್ಲಿಯೇ ಅಧ್ಯಕ್ಷರ ಆಯ್ಕೆ ಮತ್ತು ಸಚಿವ ಸಂಪುಟ ಪುನರ್ ರಚನೆಯ ವಿಷಯಗಳೂ ಚರ್ಚೆಯಾಗಲಿವೆ. ಹೈಕಮಾಂಡ್ ನಾಯಕರು ಬಹುತೇಕ ಅಧಿವೇಶನದ ವೇಳೆಯೇ ಕರ್ನಾಟಕ ಕಾಂಗ್ರೆಸ್ ನೂತನ ಸಾರಥಿ ಮತ್ತು ಸಚಿವ ಸಂಪುಟದ ಹೊಸ ಸಚಿವರು ಯಾರಾಗಲಿದ್ದಾರೆ ಎಂಬುದನ್ನೂ ನಿರ್ಧರಿಸಲಿದ್ದಾರೆ ಎನ್ನಲಾಗುತ್ತಿದೆ.
ಲಿಂಗಾಯತರಿಗೆ ಅವಕಾಶ ಹೆಚ್ಚು
ಲೋಕಸಭಾ ಚುನಾವಣೆಯವರೆಗೆ ತಮ್ಮನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂದು ಹೈಕಮಾಂಡ್ ನಾಯಕರಿಗೆ ಡಿ ಕೆ ಶಿವಕುಮಾರ್ ಕೋರಿದ್ದರೆ ಎನ್ನಲಾಗಿದ್ದು, ಇದೀಗ ಲೋಕಸಭಾ ಚುನಾವಣೆ ಮುಗಿದು, ಉಪ ಚುನಾವಣೆಯೂ ಮುಗಿದಿದೆ. ಅಲ್ಲದೆ, ಲೋಕಸಭಾ ಚುಣಾವಣೆಯಲ್ಲಿ ತಮ್ಮ ಸಹೋದರ ಡಿ ಕೆ ಸುರೇಶ್ ಸೋಲಿನ ಬಳಿಕ ಸ್ವತಃ ಡಿ ಕೆ ಶಿವಕುಮಾರ್ ಅವರೇ ಅಧ್ಯಕ್ಷ ಸ್ಥಾನ ತ್ಯಾಗದ ಮಾತುಗಳನ್ನೂ ಆಡಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಮತ್ತು ಜಿಪಂ-ತಾಪಂ ಚುನಾವಣೆಗೆ ಮುನ್ನ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ ಹೆಚ್ಚಿದೆ.
ಆದರೆ, ಈ ಬಾರಿ ಸರ್ಕಾರ ಮತ್ತು ಪಕ್ಷದಲ್ಲಿ ಆಯಕಟ್ಟಿನ ಅಧಿಕಾರ ವಂಚಿತವಾಗಿರುವ ಸಮುದಾಯ ಮತ್ತು ಪ್ರದೇಶವನ್ನು ಪರಿಗಣಿಸಿ ನೂತನ ಅಧ್ಯಕ್ಷರ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಲಿಂಗಾಯತ ಮತಬ್ಯಾಂಕ್ ಮೇಲೆ ಬಿಜೆಪಿ ಹಿಡಿತ ಸಡಿಲವಾಗಿರುವ ಈ ಹೊತ್ತಿನಲ್ಲಿ; ವಿಶೇಷವಾಗಿ ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟದ ಸಂಘರ್ಷ ಆರಂಭಿಸಿರುವ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೇ ಆ ಅವಕಾಶ ಒಲಿಯುವ ಸಾಧ್ಯತೆ ಹೆಚ್ಚಿದೆ.