
ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಸಚಿವರಿಗೆ ಸೂಚಿಸಿದ ಕೆಪಿಸಿಸಿ; ಬಿಜೆಪಿ ಆರೋಪದ ಬಳಿಕ ಎಚ್ಚೆತ್ತ ಕಾಂಗ್ರೆಸ್
ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಜ್ಯದ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ ಎಂಬ ಪ್ರತಿಪಕ್ಷ ಬಿಜೆಪಿ ಆರೋಪ ಮಾಡುತ್ತಿರುವ ಬೆನ್ನಿಗೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಸಚಿವರಿಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸ್ಪಷ್ಟ ಸೂಚನೆ ನೀಡಿದೆ.
ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, "ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟಗಳನ್ನು ಆಲಿಸಬೇಕು ಹಾಗೂ ಅಗತ್ಯ ನೆರವುಗಳನ್ನು ಒದಗಿಸಿಕೊಡಬೇಕು" ಎಂದು ಪಕ್ಷದ ಸಚಿವರಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಭಾರಿ ಮಳೆಯಾಗುತ್ತಿದೆ ಮತ್ತು ಪ್ರವಾಹದಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿ ನೀರಿನ ಹೊರಹರಿವು ಹೆಚ್ಚಾದ ಪರಿಣಾಮ ನೆರೆ ಪರಿಸ್ಥಿತಿ ಎದುರಾಗಿದೆ. ನದಿ ಪಾತ್ರದ ಜನ, ಜಾನುವಾರು, ಆಸ್ತಿ, ಬೆಳೆಗಳಿಗೆ ಹಾನಿಗಳ ಬಗ್ಗೆ ವರದಿಯಾಗುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ಜನರ ಜೊತೆ ನಿಲ್ಲಬೇಕಿರುವುದು ನಮ್ಮ ಸರ್ಕಾರದ ಕರ್ತವ್ಯ. ಹೀಗಾಗಿ ಸಚಿವ ಸಹೋದ್ಯೋಗಿಗಳು ತಮ್ಮ ಕ್ಷೇತ್ರ ವ್ಯಾಪ್ತಿ ಹಾಗೂ ಇತರೆ ಪ್ರವಾಹಪೀಡಿತ ಪ್ರದೇಶಗಳ ಶಾಸಕರ ಸಂಪರ್ಕದೊಂದಿಗೆ ಭೇಟಿ ಕೊಟ್ಟು, ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಅವರ ನೆರವಿಗೆ ಧಾವಿಸಬೇಕಾಗಿ ಕೋರುತ್ತೇನೆ" ಎಂದು ಮನವಿ ಮಾಡಿದ್ದಾರೆ.
"ವರುಣನ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ಇದೇ ವೇಳೆ ಉಂಟಾಗಿರುವ ಅವಘಡಗಳಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಜನಪ್ರತಿನಿಧಿಗಳಾದ ನಾವು ಅವರ ಜೊತೆ ನಿಲ್ಲೋಣ" ಎಂದು ತಿಳಿಸಿದ್ದಾರೆ.