ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆಯುತ್ತಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಸಂಪುಟ ಪುನಾರಚನೆ ಜೊತೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆ ನಡೆಯಲಿದೆ. ಅಂತಿಮವಾಗಿ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯ ಸಚಿವ ಸಂಪುಟ ಪುನಾರಚನೆಯ ಜೊತೆಗೆ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಬದಲಾವಣೆಯ ಚರ್ಚೆ ಕೂಡ ದೆಹಲಿಯ ಹೈಕಮಾಂಡ್ ಅಂಗಳ ತಲುಪಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿ ಡಬ್ಲ್ಯೂಸಿ)ಯಲ್ಲಿ ಭಾಗವಹಿಸಿದ ಬಳಿಕ ಹೈಕಮಾಂಡ್ ಜೊತೆ ಈ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಡಿ.ಕೆ.ಶಿವಕುಮಾರ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಪದಗ್ರಹಣದಲ್ಲಿ ಭಾಗಿಯಾಗಲು ತೆರಳಿದ್ದು, ಗುರುವಾರ ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಸಂಜೆ ದೆಹಲಿಗೆ ಪ್ರಯಾಣಿಸಲಿದ್ದು, ಎರಡೂ ವಿಷಯಗಳ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತು ದೆಹಲಿಯಲ್ಲಿ ಚರ್ಚೆ ನಡೆಯಲಿದೆ. ಅಂತಿಮವಾಗಿ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ನಾಲ್ಕು ವರ್ಷ ಪೂರ್ಣಗೊಳಿಸಿದ್ದು, ಈಗ ವಿಸ್ತರಿತ ಅವಧಿಯಲ್ಲಿದ್ದಾರೆ. ಹೊಸ ಅಧ್ಯಕ್ಷರ ನೇಮಕ ಕುರಿತ ಮಾತುಗಳೂ ಕೇಳಿಬರುತ್ತಿವೆ. ನಾಳೆ ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸಚಿವ ಸಂಪುಟ ಪುನಾರಚನೆ ಹಾಗೂ ಅಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್ ಜತೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಿಎಂ ಹಾಗೂ ಎಐಸಿಸಿ ಅಧ್ಯಕ್ಷರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಚರ್ಚೆಯಷ್ಟೇ ಗೊತ್ತಿದೆ. ಆದರೆ, ಅದು ಯಾವ ಹಂತದಲ್ಲಿದೆ ಎಂಬುದು ತಿಳಿದಿಲ್ಲ. ಸಿಎಂ, ಕರ್ನಾಟಕ ಉಸ್ತುವಾರಿ ಹಾಗೂ ಎಐಸಿಸಿ ಅಧ್ಯಕ್ಷರು ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದಿದ್ದಾರೆ.
ಯಾವ ಸ್ಥಾನ ನೀಡಿದರೂ ಒಕೆ
ಸಂಪುಟ ಪುನಾರಚನೆ ವೇಳೆ ಸ್ಥಾನ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ 35 ವರ್ಷಗಳಿಂದ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ಪೂರೈಸಿದ್ದೇನೆ. ಈಗ ಯಾವುದೇ ಸ್ಥಾನ ನೀಡಿದರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ಪಕ್ಷದ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಸುಲಭದ ಕೆಲಸವಲ್ಲ ಅಂತ ಅವರೇ ಹೇಳಿದ್ದಾರೆ. ಇದು ಕಷ್ಟಕರವಾದ ಕೆಲಸ ಎಂದು ಪರಮೇಶ್ವರ್ ಹೇಳಿದ್ದಾರೆ.
ಸಂಪುಟ ಪುನಾರಚನೆಯಲ್ಲಿ ಬಿ. ನಾಗೇಂದ್ರ, ಬಿ.ಕೆ. ಹರಿಪ್ರಸಾದ್, ಎಂ.ಕೃಷ್ಣಪ್ಪ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಬಿ. ನಾಗೇಂದ್ರ ಅವರ ಮರು ಸೇರ್ಪಡೆಗೆ ಒಲವು ತೋರಿದ್ದಾರೆ. ಬಿ.ಕೆ. ಹರಿಪ್ರಸಾದ್ ಸೇರ್ಪಡೆ ಕುರಿತು ಈ ಹಿಂದೆ ಆಶ್ವಾಸನೆ ನೀಡಲಾಗಿತ್ತು. ಈಗ ಹಿರಿಯ ಶಾಸಕರು ಕೂಡ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದು, ಸಿಎಂ ಹಾಗೂ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.