Congress Infighting | ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣು; ಕುತೂಹಲ ಮೂಡಿಸಿದ ಸಿಎಂ-ಡಿಸಿಎಂ ಮಾತುಕತೆ
x
ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ

Congress Infighting | ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣು; ಕುತೂಹಲ ಮೂಡಿಸಿದ ಸಿಎಂ-ಡಿಸಿಎಂ ಮಾತುಕತೆ

ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರು ದೆಹಲಿಯಲ್ಲಿ ತೀವ್ರ ಲಾಬಿ ನಡೆಸಿ ಬಂದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.


ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರ್ಚಿಗಾಗಿ ನಡೆಯುತ್ತಿರುವ ತೆರೆಮರೆಯ ಪೈಪೋಟಿ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರು ದೆಹಲಿಯಲ್ಲಿ ತೀವ್ರ ಲಾಬಿ ನಡೆಸಿ ಬಂದ ಬೆನ್ನಲ್ಲೇ ದಿಢೀರ್ ಬೆಳವಣಿಗೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಒಂದೆಡೆ ಸಿಎಂ ಆಪ್ತ ಬಳಗದ ಸಚಿವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಹಾಗೂ ದಲಿತ ಸಮಾವೇಶ ನಡೆಸಲು ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಸಚಿವರಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ.

ಸಾರಥ್ಯ ಮುಂದುವರಿಸಲು ಪಟ್ಟು

ತಮ್ಮನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ತಮ್ಮನ್ನೇ ಮುಂದುವರಿಸುವಂತೆ ಡಿ.ಕೆ. ಶಿವಕುಮಾರ್‌ ಅವರು ವರಿಷ್ಠರ ಮೇಲೆ ತೆರೆಮರೆಯಲ್ಲಿ ಒತ್ತಡ ಹೇರುತ್ತಿದ್ದರು. ಈಗ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಬಿಬಿಎಂಪಿ ಚುನಾವಣೆ ಮುಗಿಯುವವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬಾರದು. ಒಂದು ವೇಳೆ ಬದಲಾವಣೆಯಾದರೆ ಪಕ್ಷ ಸಂಘಟನೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಶಿವಕುಮಾರ್‌ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ಆರಂಭಿಸಿರುವ ಸತೀಶ್‌ ಜಾರಕಿಹೊಳಿ ಹಾಗೂ ಕೆ.ಎನ್‌. ರಾಜಣ್ಣ ಅವರು ಬಹಿರಂಗ ಹೇಳಿಕೆ ನೀಡುತ್ತಿದ್ದು, ಅವರನ್ನು ಕರೆದು ಮಾತನಾಡುವಂತೆ ಸಿಎಂ ಅವರಿಗೆ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಮರ್ಥರಿಗೆ ಹೈಕಮಾಂಡ್‌ ಹುಡುಕಾಟ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರಂತೆ ಪ್ರಬಲ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಸಮರ್ಥ ಅಭ್ಯರ್ಥಿಗಾಗಿ ವರಿಷ್ಠರು ಹುಡುಕಾಟ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಸತೀಶ್‌ ಜಾರಕಿಹೊಳಿ ಹಾಗೂ ಕೆ.ಎನ್‌. ರಾಜಣ್ಣ ಅವರು ಈಗಾಗಲೇ ಕೆಪಿಸಿಸಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಇಬ್ಬರೂ ಸಚಿವ ಸ್ಥಾನದಲ್ಲಿರುವ ಕಾರಣ ಯಾವುದೇ ಭರವಸೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಜಾತಿ ಸಮೀಕರಣ, ಅಹಿಂದ ಹಾಗೂ ಮೇಲ್ವರ್ಗದ ಎರಡೂ ಸಮುದಾಯಗಳು ಒಪ್ಪುವ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಜೊತೆಗೆ ಆ ಸೂಕ್ತ ಅಭ್ಯರ್ಥಿಯನ್ನು ಸಿಎಂ ಹಾಗೂ ಡಿಸಿಎಂ ಒಪ್ಪಬೇಕಾಗಿದೆ. ಈ ಮಧ್ಯೆ, ಡಿ.ಕೆ. ಶಿವಕುಮಾರ್‌ ಅವರು ತಮ್ಮ ಸೋದರ ಡಿ.ಕೆ. ಸುರೇಶ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಕಸರತ್ತು ನಡೆಸುತ್ತಿದ್ದಾರೆ ಎಂಬ ಚರ್ಚೆಯೂ ಕಾಂಗ್ರೆಸ್‌ ಪಾಳಯದಲ್ಲಿ ಗರಿಗೆದರಿದೆ.

ದಲಿತ ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ?

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟುಹಿಡಿದಿರುವ ಸಚಿವ ರಾಜಣ್ಣ ಅವರು ಬದಲಾದ ವಿದ್ಯಮಾನದಲ್ಲಿ ದಲಿತ ಸಿಎಂ ದಾಳವನ್ನೂ ಉರುಳಿಸಿದ್ದಾರೆ. ಒಂದೊಮ್ಮೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ದಲಿತ ಸಚಿವರಲ್ಲೇ ಒಬ್ಬರನ್ನು ಸಿಎಂ ಮಾಡಬೇಕು ಎಂದು ಒತ್ತಡ ಹಾಕಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದು, ಸಮಾವೇಶ ನಡೆಸಲು ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಅಥವಾ ನಾಳೆ ಅಹಿಂದ ಸಚಿವರ ಸಭೆ ನಡೆಸಿ, ಸಮಾವೇಶದ ದಿನಾಂಕ ನಿಗದಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಪರ ಜಾರಕಿಹೊಳಿ ಬ್ಯಾಟಿಂಗ್‌?

ಈ ನಡುವೆ ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ಗೆಲ್ಲಬೇಕು. ಹಾಗಾಗಿ ಅವರೇ ಪೂರ್ಣಾವಧಿ ಸಿಎಂ ಆಗಿರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮಗೆ ಬೇಕು. ಹಿಂದೆಯೂ ಇದನ್ನು ಹೇಳಿದ್ದೆ, ಈಗಲೂ ಹೇಳುತ್ತೇನೆ. ಸಿದ್ದರಾಮಯ್ಯ ಅವರು ಚುನಾವಣೆಗೆ ನಿಲ್ಲದಿದ್ದರೂ, ರಾಜಕೀಯ ನಿವೃತ್ತಿ ಪಡೆದರೂ ಅವರು ಕಾಂಗ್ರೆಸ್‌ಗೆ ಬೇಕೆ ಬೇಕು. ಅವರ ಸಾರಥ್ಯದಲ್ಲೇ ಮುಂದಿನ ನಾಯಕತ್ವ ಬೆಳೆಯಬೇಕು. ಅದಕ್ಕಾಗಿ ಅವರು ರಾಜಕಾರಣದಲ್ಲಿ ಇರಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಖರ್ಗೆ ಅವರು ತೀರ್ಮಾನ ಮಾಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಬೇರೆ ರಾಜ್ಯಗಳ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳುತ್ತೇವೆ ಎಂದು ಜಾರಕಿಹೊಳಿ ಹೇಳಿದ್ದಾರೆ.

Read More
Next Story