ದಲಿತರ ಮೇಲೆ ದೌರ್ಜನ್ಯ | 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೊಪ್ಪಳ ನ್ಯಾಯಾಲಯ
2014ರಲ್ಲಿ ನಡೆದ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ನಡೆದಿತ್ತು. ಒಟ್ಟು 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಗುರುವಾರ(ಅ.24)ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಸಿ.ಚಂದ್ರಶೇಖರ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ 98 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ತಲಾ 5000ರೂ.ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಅ. 21ರಂದು ಪ್ರಕರಣದಲ್ಲಿ 98 ಆರೋಪಿಗಳನ್ನುಅಪರಾಧಿಗಳು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಅ.24 ಕ್ಕೆ ಕಾಯ್ದಿರಿಸಿತ್ತು.
101 ಮಂದಿ ಅಪರಾಧಿಗಳ ಪೈಕಿ ಮೂವರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿರುವ ಕಾರಣ ಜಾತಿನಿಂದನೆ ಕಾಯ್ದೆ ಅನ್ವಯಿಸಿಲ್ಲ. ಇವರಿಗೆ ತಲಾ ಐದು ವರ್ಷ ಕಾರಾಗೃಹ ಸಜೆ ವಿಧಿಸಿದೆ.ಈ ಮೂವರು ಅಪರಾಧಿಗಳ ವಿರುದ್ಧ ಕೊಲೆ ಯತ್ನ, ದೊಂಬಿ ಸೇರಿದಂತೆ ಇನ್ನಿತರ ಸೆಕ್ಷನ್ ಗಳಡಿ ಶಿಕ್ಷೆ ವಿಧಿಸಿದ್ದು, ತಲಾ 2000 ರೂ. ದಂಡ ವಿಧಿಸಿದೆ.
2014ರಲ್ಲಿ ನಡೆದ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ನಡೆದಿತ್ತು. ಒಟ್ಟು 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಗುರುವಾರ(ಅ.24)ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಸಿ.ಚಂದ್ರಶೇಖರ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
2014 ರ ಆಗಸ್ಟ್ 28 ರಂದು ಸಿನಿಮಾ ಟಿಕೆಟ್ ವಿಚಾರವಾಗಿ ಮರಕುಂಬಿ ಗ್ರಾಮದ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ನಡೆದಿತ್ತು. ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಕೊಲೆಯತ್ನ, ಹಲ್ಲೆ, ಜೀವ ಬೆದರಿಕೆ ಜೊತೆಗೆ ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಗಲಭೆ ಪ್ರಕರಣದಲ್ಲಿ ಒಟ್ಟು 117 ಜನರನ್ನು ಬಂಧಿಸಲಾಗಿತ್ತು. ಆದರೆ, ಇವರ ಪೈಕಿ 16 ಮಂದಿಯಲ್ಲಿ ಕೆಲವರು ನಿಧನರಾಗಿದ್ದರು. ಮತ್ತೆ ಕೆಲವು ಅಪರಾಧಿಗಳ ಹೆಸರು ಪುನರಾವರ್ತನೆಯಾಗಿತ್ತು.
ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಘೋಷಿಸುತ್ತಿದ್ದಂತೆ ಅಪರಾಧಿಗಳ ಕುಟುಂಬಸ್ಥರು ಕೋರ್ಟ್ ಆವರಣದಲ್ಲೇ ಕಣ್ಣಿರು ಹಾಕಿದರು.
ಘರ್ಷಣೆಗೆ ಕಾರಣವೇನು?
ಮರಕುಂಬಿ ಗ್ರಾಮದಲ್ಲಿ ಅಸ್ಪ್ರಶ್ಯತೆ ಆಚರಣೆಯಲ್ಲಿತ್ತು. ಗ್ರಾಮದಲ್ಲಿ ಸವರ್ಣೀಯರು ನಡೆಸುತ್ತಿದ್ದ ಅಸ್ಪ್ಪಶ್ಯತೆಯನ್ನು ಗ್ರಾಮದ ದಲಿತರು ಖಂಡಿಸಿದ್ದರು. ಇದರಿಂದ ಸವರ್ಣಿಯರು ಹಾಗೂ ದಲಿತರ ಮಧ್ಯೆ ಆಗಿಂದಾಗ್ಗೆ ಘರ್ಷಣೆ ನಡೆಯುತಿತ್ತು. ಪೊಲೀಸ್ ಠಾಣೆಗಳಲ್ಲಿ ದೂರು, ಪ್ರತಿದೂರು ದಾಖಲಾಗುತ್ತಿತ್ತು.
2014 ಆಗಸ್ಟ್ 28 ರಂದು ಗಂಗಾವತಿ ನಗರದ ಶಿವ ಚಿತ್ರಮಂದಿರದಲ್ಲಿ ಮರಕುಂಬಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮಂಜುನಾಥ ಮತ್ತು ಸ್ನೇಹಿತರು ಪುನೀತ್ ರಾಜಕುಮಾರ್ ಅಭಿನಯದ ಪವರ್ ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯುವ ವಿಚಾರದಲ್ಲಿ ಜಗಳ ನಡೆದಿತ್ತು. ಗ್ರಾಮಕ್ಕೆ ಬಂದ ಮೇಲ್ವರ್ಗದ ಸಮುದಾಯವರು ದಲಿತರು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗ್ರಾಮದಲ್ಲಿ ದೂರಿದ್ದರು. ಮೊದಲೇ ಬೂದಿ ಮುಚ್ಚಿದ ಕೆಂಡದಂತಿದ್ದ ಸವರ್ಣಿಯರು ಅಂದು ಸಂಜೆ ದಲಿತರ ಕೇರಿಗೆ ನುಗ್ಗಿ ದಾಂಧಲೆ ಮಾಡಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಗಲಾಟೆ ಬಳಿಕ ಸುಮಾರು ಮೂರು ತಿಂಗಳ ಕಾಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.
ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಹೋರಾಟ ನಡೆಸಿದ್ದ ಸಿಪಿಎಂ ಮುಖಂಡ ವೀರೇಶ ಮರಕುಂಬಿ ಅವರನ್ನು ಕೊಪ್ಪಳದ ರೈಲು ನಿಲ್ದಾಣದ ಬಳಿ ಕೊಲೆ ಮಾಡಲಾಗಿತ್ತು. ಮರಕುಂಬಿ ಪ್ರಕರಣದಲ್ಲಿ ವೀರೇಶ ಪ್ರಮುಖ ಸಾಕ್ಷಿದಾರರಾಗಿದ್ದರು. ಜುಲೈ 10, 2015 ರಂದು ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ಹೇಳಬೇಕಾಗಿತ್ತು. ಆದರೆ, ಅಂದು ಬೆಳಿಗ್ಗೆಯೇ ಅವರ ಶವ ಕೊಪ್ಪಳ ಹೊರವಲಯದ ರೈಲು ಹಳಿ ಮೇಲೆ ಪತ್ತೆಯಾಗಿತ್ತು.