ಕೋಲಾರ ಕಗ್ಗಂಟು | ದೊಡ್ಡವರು ದೊಡ್ಡ ಮನಸು ಮಾಡಿದರೆ ಎಲ್ಲವೂ ಇತ್ಯರ್ಥ: ಕೆ ಎಚ್‌ ಮುನಿಯಪ್ಪ
x

ಕೋಲಾರ ಕಗ್ಗಂಟು | ದೊಡ್ಡವರು ದೊಡ್ಡ ಮನಸು ಮಾಡಿದರೆ ಎಲ್ಲವೂ ಇತ್ಯರ್ಥ: ಕೆ ಎಚ್‌ ಮುನಿಯಪ್ಪ

“ರಮೇಶ್ ಕುಮಾರ್ ಮತ್ತು ನನ್ನನ್ನು ಒಗ್ಗೂಡಿಸಿದರೆ ಪಕ್ಷ ಕೋಲಾರ ಮಾತ್ರವಲ್ಲದೆ, ಪಕ್ಕದ ಚಿಕ್ಕಬಳ್ಳಾಪುರ ಕ್ಷೇತ್ರವನ್ನೂ ಸುಲಭವಾಗಿ ಗೆಲ್ಲಲಿದೆ. ಆದರೆ, ಇಬ್ಬರನ್ನೂ ಕೂರಿಸಿ ಮಾತನಾಡಿ, ಸಮಸ್ಯೆ ಬಗೆಹರಿಸಬೇಕಾದವರ ಮನಸ್ಸು ಸ್ವಲ್ಪ ದೊಡ್ಡದಾಗಬೇಕಿದೆ” ಎಂದು ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.


ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಸಚಿವ ಕೆ ಎಚ್ ಮುನಿಯಪ್ಪ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ನಡುವಿನ ಹಗ್ಗಜಗ್ಗಾಟ ಬಗೆಹರಿಯದೆ ಬಿಕ್ಕಟ್ಟು ಇತ್ಯರ್ಥವಾಗುವ ಸಾಧ್ಯತೆಗಳೂ ಕಡಿಮೆ ಎನ್ನಲಾಗುತ್ತಿದೆ.

ಈ ನಡುವೆ, ಸಚಿವ ಕೆ ಎಚ್ ಮುನಿಯಪ್ಪ, “ರಮೇಶ್ ಕುಮಾರ್ ಮತ್ತು ನನ್ನನ್ನು ಒಗ್ಗೂಡಿಸಿದರೆ ಪಕ್ಷ ಕೋಲಾರ ಮಾತ್ರವಲ್ಲದೆ, ಪಕ್ಕದ ಚಿಕ್ಕಬಳ್ಳಾಪುರ ಕ್ಷೇತ್ರವನ್ನೂ ಸುಲಭವಾಗಿ ಗೆಲ್ಲಲಿದೆ. ಆದರೆ, ಇಬ್ಬರನ್ನೂ ಕೂರಿಸಿ ಮಾತನಾಡಿ, ಸಮಸ್ಯೆ ಬಗೆಹರಿಸಬೇಕಾದವರ ಮನಸ್ಸು ಸ್ವಲ್ಪ ದೊಡ್ಡದಾಗಬೇಕಿದೆ” ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಮುನಿಯಪ್ಪ, “ಕೋಲಾರ ಕ್ಷೇತ್ರದ ವಿಷಯದಲ್ಲಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಿರುವ ಸಮಸ್ಯೆಯನ್ನು ಬಗೆಹರಿಸುವ ದೊಡ್ಡ ಜವಾಬ್ದಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿದೆ. ಹಾಗೇ ಉಪ ಮುಖ್ಯಮಂತ್ರಿಯವರೂ ಈ ಬಗ್ಗೆ ಪರಸ್ಪರ ನಮ್ಮನ್ನು ಕೂರಿಸಿ ಮಾತನಾಡಬೇಕಿದೆ. ನಮ್ಮಿಬ್ಬರ ನಡುವಿನ ಸಮಸ್ಯೆ ಬಗೆಹರಿಯದೆ ನಾವು ಕೋಲಾರವನ್ನು ಗೆಲ್ಲಲಾಗದು” ಎಂದು ಹೇಳಿದ್ದಾರೆ.

ಪಕ್ಷದ ಎರಡೂ ಬಣಗಳನ್ನು ಒಗ್ಗೂಡಿಸಿದರೆ ಮಾತ್ರ ಕಾಂಗ್ರೆಸ್ ಗೆಲ್ಲಲಿದೆ. ಆದಿ ಬಿಟ್ಟು ಮೂರನೇ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದರೆ ಗೆಲ್ಲುವುದು ಸಾಧ್ಯವಿಲ್ಲ. ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ಗೆ ಕೆಲವರು ಬಂದರು. ಪಕ್ಷದ ಹಿತವನ್ನು ಬಯಸಿ ನಾನು ಆಗ ಯಾರಿಗೂ ವಿರೋಧ ಮಾಡಲಿಲ್ಲ. ಆ ಚುನಾವಣೆಯಲ್ಲಿ ನಾನು ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ಆಗಲೂ ನಾನು ರಮೇಶ್ ಕುಮಾರ್ ಮತ್ತು ನನ್ನ ನಡುವಿನ ಸಮಸ್ಯೆ ಪರಿಹರಿಸುವಂತೆ ಪಕ್ಷದ ನಾಯಕರಿಗೆ ನಾನೇ ಮನವಿ ಮಾಡಿದ್ದೆ. ಆ ಸಮಸ್ಯೆ ಬಗೆಹರಿಯದೆ ಈ ಚುನಾವಣೆಯಲ್ಲಿ ಗೆಲುವು ಸಾಧ್ಯವಿಲ್ಲ ಎಂದು ಮುನಿಯಪ್ಪ ಖಡಾಖಂಡಿತವಾಗಿ ಹೇಳಿದ್ದಾರೆ.

ಯಾರೇ ಅಭ್ಯರ್ಥಿಯಾದರೂ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ. ಮೂರನೇ ಅಭ್ಯರ್ಥಿಯ ಹೆಸರನ್ನು ನಾನು ಹೇಳಿಲ್ಲ. ನಾನು ಚಿಕ್ಕಪೆದ್ದಣ್ಣ ಹೆಸರನ್ನು ಮಾತ್ರ ಹೇಳಿರುವುದು. ಆದರೆ, ಅವರಿಗೂ ಬೇಡ, ಇವರಿಗೂ ಬೇಡ ಎಂದು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಯಾರೂ ಕೆಲಸ ಮಾಡುವುದಿಲ್ಲ. ಆಗ ಅಭ್ಯರ್ಥಿಯಾಗಿ ಬಂದವರು ಸಂಕಷ್ಟಕ್ಕೆ ಸಿಲುಕುತ್ತಾರೆ. ನಾನು ಮತ್ತು ರಮೇಶ್ ಕುಮಾರ್ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲದೆ ನಾನೇ ರಮೇಶ್ ಕುಮಾರ್ ಅವರ ಮನೆಗೂ ಹೋಗಿದ್ದೆ. ಆದರೆ, ಅವರು ಆ ವೇಳೆ ಮನೆಯಲ್ಲಿರಲಿಲ್ಲ. ಮುಖ್ಯಮಂತ್ರಿಗಳು ರಮೇಶ್ ಕುಮಾರ್ ಅವರನ್ನು ಕೂರಿಸಿಕೊಂಡು ಮಾತನಾಡಿದರೆ ಎಲ್ಲವೂ ಬಗೆಹರಿಯುತ್ತದೆ. ಆದರೆ, ಬೇರೆ ಎಲ್ಲಾ ಕ್ಷೇತ್ರಗಳ ಸಮಸ್ಯೆಗಳು ಬಗೆಹರಿಯುತ್ತವೆ. ಕೋಲಾರದ ಸಮಸ್ಯೆ ಮಾತ್ರ ಯಾಕೆ ಬಗೆಹರಿಯುತ್ತಿಲ್ಲ. ಯಾಕೆ ಸಂಧಾನ ಸಾಧ್ಯವಾಗುತ್ತಿಲ್ಲ ಎಂಬುದು ಅರ್ಥವಾಗದ ಪ್ರಶ್ನೆ ಎಂದು ಮುನಿಯಪ್ಪ ಹೇಳಿದ್ದಾರೆ.

Read More
Next Story