
ಕೋಲಾರ ಮಾರುಕಟ್ಟೆಯಲ್ಲಿನ ಟೆಮೊಟೊ
ಪಾಕಿಸ್ತಾನಕ್ಕೆ ಟೊಮೆಟೊ ಕೊಡಲ್ಲ; ಕೊಲಾರದ ರೈತರ ನಿರ್ಧಾರ
ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಖ್ಯಾತಿಗೆ ಕೋಲಾರದ ಮಾರುಕಟ್ಟೆ ಪಾತ್ರವಾಗಿದೆ. ಉತ್ತಮ ಗುಣಮಟ್ಟ ಹೊಂದಿರುವ ಟೊಮೆಟೊ ಬೇರೆ ರಾಜ್ಯಗಳು ಹಾಗೂ ವಿದೇಶಗಳಿಗೂ ರಫ್ತು ಮಾಡುತ್ತಿದೆ.
ಪಹಲ್ಗಾಮ್ ಉಗ್ರರ ದಾಳಿಯ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗಾಗಲೇ ಪಾಕಿಸ್ತಾನದೊಂದಿಗೆ ಸಿಂಧೂ ನದಿ ಒಪ್ಪಂದ, ವೀಸಾ ರದ್ದತಿ ಸೇರಿದಂತೆ ಹಲವಾರು ರಾಜತಾಂತ್ರಿಕ ಕ್ರಮ ಕೈಗೊಂಡಿದೆ. ಇದರ ನಡುವೆಯೇ ಕೋಲಾರದ ಟೊಮೆಟೊ ವ್ಯಾಪಾರಿಗಳು ಹಾಗೂ ವರ್ತಕರು ಪಾಕಿಸ್ತಾನಕ್ಕೆ ಟೊಮೆಟೊ ರಪ್ತು ಮಾಡಲು ನಿರಾಕರಿಸಿದ್ದಾರೆ.
ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಖ್ಯಾತಿಗೆ ಕೋಲಾರ ಪಾತ್ರವಾಗಿದೆ. ಉತ್ತಮ ಗುಣಮಟ್ಟ ಹೊಂದಿರುವ ಟೊಮೆಟೊ ಬೇರೆ ರಾಜ್ಯಗಳು ಹಾಗೂ ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತಿದೆ.
ಪ್ರತೀ ವರ್ಷ 800-900 ಟನ್ ಟೊಮೆಟೊವನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲಾಗತ್ತಿತ್ತು. ಟೊಮೆಟೊ ಜತೆಗೆ ತರಕಾರಿಯನ್ನು ಕಳುಹಿಸುತ್ತಿದ್ದು ಕೋಟ್ಯಾಂತರ ರೂಪಾಯಿ ವ್ಯಾಪಾರ ನಡೆಸುತ್ತಿದ್ದು, ಪಾಕಿಸ್ತಾನದ ಜತೆಗೆ ಇಲ್ಲಿನ ವರ್ತಕರು ಅವಿನಾಭಾವ ಸಂಬಂಧ ಹೊಂದಿದ್ದರು. ಆದರೆ ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನದೊಂದಿಗೆ ವಹಿವಾಟು ನಿಲ್ಲಿಸಲು ತೀರ್ಮಾನಿಸಿದ್ದು, ನಮಗೆ ನಷ್ಟವಾದರೂ ಪರವಾಗಿಲ್ಲ ಪಾಕಿಸ್ತಾನಕ್ಕೆ ಒಂದೇ ಒಂದು ಟೊಮೆಟೊ ಕಳಿಸುವುದಿಲ್ಲ ಎಂದಿದ್ದಾರೆ.
2013 ರಲ್ಲೂ ನಿರ್ಬಂಧ
2013ರಲ್ಲಿ ನಡೆದ ಪುಲ್ವಾಮ ದಾಳಿಯ ನಂತರ ಪಾಕಿಸ್ತಾನಕ್ಕೆ ಟೊಮೊಟೊ ರಫ್ತು ಮಾಡಲು ಕೋಲಾರದ ವ್ಯಾಪಾರಿಗಳು ಹಾಗೂ ವರ್ತಕರು ನಿರ್ಧರಿಸಿದ್ದರು. ಈಗ ಮತ್ತೊಮ್ಮೆ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿರುವುದರಿಂದ ಟೊಮೆಟೊ ಸೇರಿದಂತೆ ಯಾವುದೇ ತರಕಾರಿ ರಫ್ತು ಮಾಡದಿರಲು ನಿರ್ಧರಿಸಲಾಗಿದ್ದು, ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ನಮ್ಮ ಬೆಂಬಲವಿದೆ ಎಂದರು.
ಕೇಂದ್ರ ಸರ್ಕಾರದ ನಿರ್ಧಾರಗಳು
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಜನ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದರು. ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿ ಪಾಕಿಸ್ತಾನದ ವಿರುದ್ಧ ವೀಸಾ ರದ್ಧತಿ, ಸಿಂಧೂ ನದಿ ಒಪ್ಪಂದ ಮರುಪರಿಶೀಲನೆ, ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವುದು, ವಾಘಾ-ಅಟ್ಟಾರಿ ಗಡಿ ಬಂದ್, ದೇಶದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳಿಸುವ ನಿರ್ಧಾರ ಮಾಡಿದ್ದರು.
ಸುದ್ದಿ ಮಾಧ್ಯಮ, ಯೂಟ್ಯಬ್ ಚಾನೆಲ್‌ಗಳಿಗೆ ನಿರ್ಬಂಧ
ಭಾರತದ ಬಗ್ಗೆ ದ್ವೇಷ ಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುವ ಪಾಕಿಸ್ತಾನದ ಸುದ್ದಿ ಮಾಧ್ಯಮ ಹಾಗೂ ಯೂಟ್ಯೂಬ್ ಚಾನೆಲ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು ಅವುಗಳ ಪ್ರಸಾರವನ್ನು ರದ್ದುಪಡಿಸಲಾಗಿದೆ. ಪಾಕಿಸ್ತಾನಲ್ಲಿ ನಡೆಯುತ್ತಿರುವ ʼಪಾಕಿಸ್ತಾನ ಪ್ರೀಮಿಯರ್ ಲೀಗ್ʼ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಲಾಗಿದೆ.