K.N. Rajanna should be punished for telling the truth about Congresss shortcomings: Vijayendra alleges
x

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಸತ್ಯ ಹೇಳಿದ್ದಕ್ಕೆ ಕೆ.ಎನ್‌. ರಾಜಣ್ಣ ತಲೆದಂಡ: ವಿಜಯೇಂದ್ರ ಆರೋಪ

ಚುನಾವಣಾ ಆಯೋಗದ ವಿರುದ್ಧ ಮತ ಕಳ್ಳತನದ ಕುರಿತು ಬಾಲಿಶತನದ ಆರೋಪ ಮಾಡುವ ಮೂಲಕ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ನಗೆ ಪಾಟಲಿಗೀಡಾಗಿದ್ದು ಹತಾಶ ಮನಸ್ಥಿತಿಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತರಾಗಿ ಕಾಂಗ್ರೆಸ್ ಪಕ್ಷದ ವೈಫಲ್ಯಗಳು ಹಾಗೂ ಆಂತರಿಕ ದಬ್ಬಾಳಿಕೆಗಳನ್ನು ನಿಷ್ಠುರವಾಗಿ ಬಿಚ್ಚಿಡುವ ಮೂಲಕ ಹಿರಿಯ ಸಚಿವ ಕೆ.ಎನ್‌ ರಾಜಣ್ಣ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದರು. ಆದ್ದರಿಂದ ಅವರ ತಲೆದಂಡವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಕೆ.ಎನ್‌. ರಾಜಣ್ಣನ ರಾಜೀನಾಮೆ ಕುರಿತು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಚುನಾವಣಾ ಆಯೋಗದ ವಿರುದ್ಧ ಮತ ಕಳ್ಳತನದ ಕುರಿತು ಬಾಲಿಶತನದ ಆರೋಪ ಮಾಡುವ ಮೂಲಕ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ನಗೆ ಪಾಟಲಿಗೀಡಾಗಿದ್ದು ಹತಾಶ ಮನಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್‌ ದೋಷಗಳ ಬಗ್ಗೆ ನಿಜ ಹೇಳಿದ್ದಕ್ಕಾಗಿ ರಾಜೀನಾಮೆ ಪಡೆಯಲಾಗಿದೆ ಎಂದರು.

'ಕೈ' ವರಿಷ್ಠ ರಾಹುಲ್ ಗಾಂಧಿಯವರ ಎಡಬಿಡಂಗಿ ನಡೆಯನ್ನು ಎತ್ತಿ ತೋರಿಸಿದಕ್ಕಾಗಿ ಪರಿಶಿಷ್ಟ ಪಂಗಡ ಹಾಗೂ ಶೋಷಿತ ಸಮುದಾಯಗಳ ನಾಯಕನನ್ನು ಸಚಿವ ಪದವಿಯಿಂದ ಉಚ್ಚಾಟಿತಗೊಳಿಸಲಾಗಿದೆ. ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸಂಸ್ಕೃತಿ ಇನ್ನೂ ತೊಲಗಿಲ್ಲ ಎನ್ನುವುದನ್ನು ಸಾಕ್ಷೀಕರಿಸಿದೆ ಎಂದು ಹೇಳಿದರು.

"2024 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಲೋಕಸಭಾ ಚುನಾವಣೆಗೂ ಮುಂಚೆಯೇ ಮತದಾರರ ಪಟ್ಟಿಯನ್ನು ಪರಿಶೀಲಿಸುವುದು ಕಾಂಗ್ರೆಸ್‌ನ ಜವಾಬ್ದಾರಿಯಾಗಿತ್ತು. ಚುನಾವಣಾ ಸಂದರ್ಭದಲ್ಲಿ ಬೂತ್ ಕಾರ್ಯಕರ್ತರು ಇದನ್ನು ಗಮನಿಸುವಂತೆ ಪಕ್ಷ ನೋಡಿಕೊಳ್ಳಬೇಕಿತ್ತು. ಮತ ಕಳ್ಳತನದ ಬಗ್ಗೆ ಅನುಮಾನಗಳಿದ್ದರೆ ಚುನಾವಣೆಯ ನಂತರವೂ ದೂರು ಸಲ್ಲಿಸಬೇಕಾಗಿತ್ತು" ಎಂದು ಕೆ.ಎನ್. ರಾಜಣ್ಣ ಹೇಳಿದ್ದರು. ಅವರ ಹೇಳಿಕೆಯಲ್ಲಿ ಯಾವುದೇ ದೋಷವಿರಲಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವುದಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ರಾಹುಲ್‌ ಗಾಂಧಿ ಆರೋಪ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಕಾಂಗ್ರೆಸ್ ನಾಯಕರುಗಳನ್ನು ಮೂಲೆಗೆ ಸೇರಿಸುವ ತುಘಲಕ್ ದರ್ಬಾರ್ ಆರಂಭವಾಗಿದೆ. ಕೆ.ಎನ್. ರಾಜಣ್ಣನವರ ರಾಜೀನಾಮೆ ಪಡೆಯುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ನಿರ್ಧಾರಗಳು ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಪ್ರಕಟವಾಗುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಸೆಪ್ಟಂಬರ್‌ಗೆ ರಾಜಕೀಯ ಕ್ರಾಂತಿಯಾಗಲಿದೆ ಎಂದು ಕೆ.ಎನ್‌. ರಾಜಣ್ಣ ಹೇಳಿದ್ದರು. ಆದರೆ ಆಗಸ್ಟ್‌ನಲ್ಲೇ ಆರಂಭವಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದ ಕಾರಣಕ್ಕಾಗಿ ಜನ ಶಪಿಸುತ್ತಿದ್ದಾರೆ. ಇದರ ನಡುವೆ ದಮನಿತ ಸಮುದಾಯದ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಟೀಕಿಸಿದರು.

Read More
Next Story