K.N. Rajanna dismissed from ministerial post, supporters protest, attempt suicide
x

ಕೆ.ಎನ್‌. ರಾಜಣ್ಣ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ವಜಾ: ಮಧುಗಿರಿಯಲ್ಲಿ ಬೆಂಬಲಿಗರ ಪ್ರತಿಭಟನೆ, ಆತ್ಮಹತ್ಯೆ ಯತ್ನ

ಪ್ರತಿಭಟನೆ ವೇಳೆ ಕೆ.ಎನ್‌. ರಾಜಣ್ಣ ಅಭಿಮಾನಿ ಶಿವಲಿಂಗ ಎಂಬುವವರು ಡಿಸೇಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಅಲ್ಲಿದ್ದ ಪ್ರತಿಭಟನಾಕಾರರು ಅಭಿಮಾನಿಯನ್ನು ಸಮಾಧಾನಗೊಳಿಸಿ ಆಗಬಹುದಾಗಿದ್ದ ದುರಂತವನ್ನು ತಪ್ಪಿಸಿದರು.


ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಅವರ ತವರು ಕ್ಷೇತ್ರವಾದ ಮಧುಗಿರಿಯಲ್ಲಿ ಮಂಗಳವಾರ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ರಾಜಣ್ಣ ಅವರ ಅಭಿಮಾನಿಯೊಬ್ಬರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಪಟ್ಟಣದ ಎಂ.ಎನ್.ಕೆ. ಸಮುದಾಯ ಭವನದ ಬಳಿ ಜಮಾಯಿಸಿದ ರಾಜಣ್ಣ ಅವರ ನೂರಾರು ಬೆಂಬಲಿಗರು ಮತ್ತು ಅಭಿಮಾನಿಗಳು, ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಹಿಂಪಡೆದು, ರಾಜಣ್ಣ ಅವರನ್ನು ಶೀಘ್ರವೇ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ ಪ್ರತಿಭಟನಾಕಾರರು, ಮಧ್ಯಾಹ್ನ 1 ಗಂಟೆಯ ನಂತರ ಮಧುಗಿರಿ ಬಂದ್ಗೂ ಕರೆ ನೀಡಿದರು.

ಪ್ರತಿಭಟನೆ ನಡೆಯುತ್ತಿದ್ದ ವೇಳೆ, ಶಿವಲಿಂಗ ಎಂಬ ರಾಜಣ್ಣ ಅವರ ಅಭಿಮಾನಿಯೊಬ್ಬರು ಏಕಾಏಕಿ ತಮ್ಮ ಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳದಲ್ಲಿದ್ದ ಇತರ ಪ್ರತಿಭಟನಾಕಾರರು ಮತ್ತು ಪೊಲೀಸರು, ಅವರನ್ನು ತಡೆದು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಯಿತು.

ಆಗಸ್ಟ್ 11 ರಂದು, ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದರು. ಮುಖ್ಯಮಂತ್ರಿಯವರ ಶಿಫಾರಸ್ಸನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಗೀಕರಿಸಿ, ಅಧಿಕೃತ ಆದೇಶ ಹೊರಡಿಸಿದ್ದರು. ಈ ನಿರ್ಧಾರವೇ ಇದೀಗ ಮಧುಗಿರಿಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read More
Next Story