Karnataka Milk Federation | ವೇತನ ಆಯೋಗ ಜಾರಿ ಭರವಸೆ; ಮುಷ್ಕರದಿಂದ ಹಿಂದೆ ಸರಿದ ಕೆಎಂಎಫ್‌ ಸಿಬ್ಬಂದಿ
x
ಬೆಂಗಳೂರಿನಲ್ಲಿ ಕೆಎಂಎಫ್‌ ಅಧಿಕಾರಿಗಳು ಹಾಗೂ ಜಿಲ್ಲಾ ಒಕ್ಕೂಟಗಳ ಅಧಿಕಾರಿಗಳು ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿದರು

Karnataka Milk Federation | ವೇತನ ಆಯೋಗ ಜಾರಿ ಭರವಸೆ; ಮುಷ್ಕರದಿಂದ ಹಿಂದೆ ಸರಿದ ಕೆಎಂಎಫ್‌ ಸಿಬ್ಬಂದಿ

ಫೆಬ್ರವರಿ ಮೊದಲ ವಾರದಲ್ಲಿ (ಫೆ.7) ಆದೇಶ ಜಾರಿಗೊಳಿಸದಿದ್ದರೆ ಫೆ.10 ರಂದು ಸಂಘದ ಕಾರ್ಯಕಾರಿ ಮಂಡಳಿ ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ಚರ್ಚಿಸಲಿದೆ. ಈ ಬಗ್ಗೆ ಕೆಎಂಎಪ್‌ ನೌಕರರ ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.


ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಕೆಎಂಎಫ್ ಅಧಿಕಾರಿಗಳು ಹಾಗೂ ನೌಕರರ ಸಂಘ, ಫೆ.1 ಕ್ಕೆ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಇದರಿಂದ ಹಾಲು ಖರೀದಿಸುವ ಗ್ರಾಹಕರು ಹಾಗೂ ಹಾಲು ಸರಬರಾಜು ಮಾಡುವ ಹೈನುಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಕೆಎಂಎಫ್ ಅಧಿಕಾರಿಗಳು ಹಾಗೂ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವ ಘೋಷಣೆ ಹಿನ್ನೆಲೆಯಲ್ಲಿ ಹಾಲು ಮಾರಾಟದಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿತ್ತು.

ಕೆಎಂಎಫ್ ಅಧಿಕಾರಿಗಳು ಹಾಗೂ ನೌಕರರ ಮನವಿಗೆ ಸ್ಪಂದಿಸಿದ ಕೆಎಂಎಫ್‌ ಅಧ್ಯಕ್ಷರು, 7ನೇ ವೇತನ ಆಯೋಗ ಜಾರಿಗೆ ವಾರದಲ್ಲಿ ಆದೇಶ ಹೊರಡಿಸುವ ಭರವಸೆ ನೀಡಿರುವ ಕಾರಣ ಅನಿರ್ದಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

"ಫೆ. 3 ರೊಳಗೆ 7 ನೇ ವೇತನ ಆಯೋಗ ಜಾರಿ ಸಂಬಂಧ ಸಹಕಾರ ಸಚಿವರೊಂದಿಗೆ ಚರ್ಚಿಸಿ ಆದೇಶ ಹೊರಡಿಸುವುದಾಗಿ ಕೆಎಂಎಫ್ ಅಧ್ಯಕ್ಷರು ಭರವಸೆ ನೀಡಿದ್ದಾರೆ. ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನಂದಿನಿ ಉತ್ಪನ್ನಗಳ ಸರಬರಾಜು ಹಾಗೂ ಹಾಲು ಖರೀದಿಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ" ಎಂದು ಕೆಎಂಎಫ್ ಅಧಿಕಾರಿಗಳು ಹಾಗೂ ನೌಕರರ ಸಂಘದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

"ಫೆಬ್ರವರಿ ಮೊದಲ ವಾರದಲ್ಲಿ (ಫೆ.7) ಆದೇಶ ಜಾರಿಗೊಳಿಸದಿದ್ದರೆ ಫೆ.10 ರಂದು ಸಂಘದ ಕಾರ್ಯಕಾರಿ ಮಂಡಳಿ ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು. ಕೆಎಂಎಫ್‌ನಲ್ಲಿ ಕೆಲವರು ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ನೇರ ನೌಕರರು ಇದ್ದಾರೆ. ನಿಯೋಜನೆ ಮೇರೆಗೆ ಬಂದಿರುವವರಿಗೆ ವೇತನ ಆಯೋಗದಂತೆ ವೇತನ ಪರಿಷ್ಕರಣೆಯಾಗಿದೆ. ಆದರೆ, ನೇರ ನೌಕರರಿಗೆ ಇದರ ಲಾಭ ಸಿಕ್ಕಿಲ್ಲ. ಹಾಗಾಗಿ ಮುಷ್ಕರಕ್ಕೆ ತೀರ್ಮಾನಿಸಲಾಗಿತ್ತು. ಆಗೊಮ್ಮೆ ಬೇಡಿಕೆ ಈಡೇರಿಸದೇ ಹೋದರೆ ಕೆಎಂಎಫ್ ಅಧಿಕಾರಿಗಳು ಹಾಗೂ ನೌಕರರ ಸಂಘದ ತೀರ್ಮಾನದಂತೆ ಹೋರಾಟ ನಡೆಸಲಾಗುವುದು" ಎಂದು ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದರು.

7 ಸಾವಿರಕ್ಕೂ ಹೆಚ್ಚು ನೌಕರರ ಆಗ್ರಹ

ಕರ್ನಾಟಕ ಹಾಲು ಮಹಾಮಂಡಳ ಹಾಗೂ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು ರೈತರಿಂದ ಪ್ರತಿನಿತ್ಯ ಹಾಲನ್ನು ಖರೀದಿಸಿ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿವೆ. ಸುಮಾರು 150 ಕ್ಕೂ ಹೆಚ್ಚು ವಿವಿಧ ಮಾದರಿಯ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ. ಕೆಎಂಎಫ್‌ನಲ್ಲಿ ಸುಮಾರು 1300ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳಿದ್ದಾರೆ. ಅದೇ ರೀತಿ 16 ಜಿಲ್ಲಾ ಹಾಲು ಒಕ್ಕೂಟಗಳಲ್ಲಿ 6000 ಅಧಿಕಾರಿ, ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ 7ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ನೌಕರರ ಸಂಘ ಆಗ್ರಹಿಸಿದೆ.

ಸ್ವಾಯತ್ತ ಸಂಸ್ಥೆಯಾದ ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ 7ನೇ ಆಯೋಗದ ಮಧ್ಯಂತರ ವರದಿಯಂತೆ ಶೇ 17 ರಷ್ಟು ಪರಿಹಾರ ನೀಡಲಾಗುತ್ತಿತ್ತು. ಉಳಿದ ಶೇ 10.5 ಹಣ ವೇತನ ಮಂಜೂರಿಗೆ ಆದೇಶ ಹೊರಡಿಸುವಂತೆ ಸಾಕಷ್ಟು ಮನವಿ ಮಾಡಿದರೂ ಸಹಕಾರಿ ಇಲಾಖೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧಿಕಾರಿಗಳು ಹಾಗೂ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು.

ಸಂಘದ ಬೇಡಿಕೆಗಳು ಏನು?

  • 7 ನೇ ವೇತನ ಆಯೋಗದ ಶಿಫಾರಸನ್ನು ಕೆಎಂಎಫ್ ಹಾಗೂ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ ಯಥಾವತ್ತಾಗಿ ಜಾರಿಗೊಳಿಸಬೇಕು.
  • 1984 ರಲ್ಲಿ ರಾಜ್ಯ ಸರ್ಕಾರ, ಕೆಡಿಡಿಸಿ (ಕೆಎಂಎಫ್), ಎನ್ಡಿಡಿಬಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ (Tri-party) ರಚಿಸಿ ಒಕ್ಕೂಟದ ಅಧಿಕಾರಿ/ನೌಕರರಿಗೆ ವೇತನಕ್ಕೆ ಸಂಬಂಧಿಸಿ ಆಗಿರುವ ಒಡಂಬಡಿಕೆಯಂತೆ DA, HRA, CCA ಯನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು.
  • ವೇತನ ಸಂಬಂಧ ಹೈಕೋರ್ಟ್ 1988 ರಲ್ಲಿ ನೀಡಿರುವ ಆದೇಶ ಪಾಲಿಸಬೇಕು.
  • ಕರ್ನಾಟಕ ಸಹಕಾರಿ ಕಾಯ್ದೆಯಡಿ ವೇತನ ಮತ್ತು ಭತ್ಯೆಗಳನ್ನು ಮಂಜೂರು ಮಾಡುವ ಅಧಿಕಾರ ಆಡಳಿತ ಮಂಡಳಿಗೆ ಇರುತ್ತದೆ. ಹಾಗಾಗಿ ವಾರ್ಷಿಕ ಲಾಭ-ನಷ್ಟವನ್ನು ಮಾತ್ರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಪರಿಗಣಿಸಬೇಕು.
  • ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಆಡಳಿತ ಮಂಡಳಿ ಸಭೆಗಳಲ್ಲಿ ಸರ್ಕಾರದ ಪ್ರತಿನಿಧಿಗಳು ಒಳಗೊಳ್ಳುವಂತೆ ಮಾಡಬೇಕು. ಇದರಿಂದ ಕಾಲಕಾಲಕ್ಕೆ ಸರ್ಕಾರದಿಂದ ಬಿಡುಗಡೆ ಮಾಡುವ ವೇತನ ಮತ್ತು ಭತ್ಯೆಗಳ ಅನುಮೋದನೆಯ ಅಧಿಕಾರ ಆಡಳಿತ ಮಂಡಳಿಗೆ ನೀಡಬೇಕು.
  • ಕೆಎಂಎಫ್ / ಹಾಲು ಒಕ್ಕೂಟದ ಉನ್ನತ ಹುದ್ದೆಗಳಾದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳಿಗೆ ಒಕ್ಕೂಟದಲ್ಲೇ ಕಾರ್ಯ ನಿರ್ವಹಿಸಿದ ತಾಂತ್ರಿಕ ಹಿನ್ನೆಲೆಯ ಅಥವಾ ಡೇರಿ ಉದ್ದಿಮೆಯಲ್ಲಿ ಅನುಭವ ಹೊಂದಿರುವವರಿಗೆ ಮಾತ್ರ ನೀಡಬೇಕು.

Read More
Next Story