ಕೆಕೆ ಎಕ್ಸ್‌ಪ್ರೆಸ್‌ ರೈಲಿಗೆ ಬಾಂಬ್ ಬೆದರಿಕೆ ಹುಸಿ ಕರೆ: ಉತ್ತರ ಪ್ರದೇಶದ ವ್ಯಕ್ತಿ ಬಂಧನ
x

ಕೆಕೆ ಎಕ್ಸ್‌ಪ್ರೆಸ್‌ ರೈಲಿಗೆ ಬಾಂಬ್ ಬೆದರಿಕೆ ಹುಸಿ ಕರೆ: ಉತ್ತರ ಪ್ರದೇಶದ ವ್ಯಕ್ತಿ ಬಂಧನ

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ದೀಪ್‌ಸಿಂಗ್ (33) ಎಂದು ಗುರುತಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುವ ಆತ ಚಿತ್ತಾಪುರದ ಜೈಲಿನಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ (ಕೆಕೆ) ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ವಾಡಿ ರೈಲ್ವೆ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ದೀಪ್‌ಸಿಂಗ್ (33) ಎಂದು ಗುರುತಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುವ ಆತ ಚಿತ್ತಾಪುರದ ಜೈಲಿನಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ವಾಡಿ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಬೋಗಿಗಳ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಸುಮಾರು ನಾಲ್ಕು ಗಂಟೆಗಳ ಕಾಲ (ರಾತ್ರಿ 1.30 ರಿಂದ 4.30 ರವರೆಗೆ) ತಪಾಸಣೆ ನಡೆಸಲಾಯಿತು. ರೈಲಿನಲ್ಲಿದ್ದ 22 ಬೋಗಿಗಳಿಂದ ಸಾವಿರಾರು ಪ್ರಯಾಣಿಕರನ್ನು ಕೆಳಗೆ ಇಳಿಸಿ, ಸಂಪೂರ್ಣ ರೈಲನ್ನು ಶೋಧಿಸಲಾಯಿತು. ಅಂತಿಮವಾಗಿ, ಇದು ಹುಸಿ ಬಾಂಬ್ ಕರೆ ಎಂಬುದು ಖಚಿತವಾಯಿತು.

ದೆಹಲಿಯಿಂದ ಗುಂತಕಲ್‌ಗೆ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದೀಪ್‌ಸಿಂಗ್ ಭಯದಿಂದ ತನ್ನ ತಂದೆಯ ಫೋನ್‌ ನಂಬರ್‌ನಿಂದ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಕರೆ ಮಾಡಿದ ನಂತರ ಮುಂದೆ ಏನಾಗಬಹುದು ಎಂಬ ಭಯದಿಂದ ಮೊಬೈಲ್‌ ಅನ್ನು ಫ್ಲೈಟ್ ಮೂಡ್‌ಗೆ ಹಾಕಿ ಏನೂ ಗೊತ್ತಿಲ್ಲದಂತೆ ನಟಿಸಿದ್ದಾನೆ. ಪೊಲೀಸರು ಟ್ರೂ ಕಾಲರ್ ಆ್ಯಪ್‌ನಲ್ಲಿ ಕರೆ ಮಾಡಿದ ವ್ಯಕ್ತಿಯ ಫೋಟೋವನ್ನು ಪತ್ತೆಹಚ್ಚಿ, ಫೋಟೋದ ಆಧಾರದ ಮೇಲೆ ವಾಡಿ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಆರ್‌ಪಿಎಫ್, ವಾಡಿ ಠಾಣೆಯ ಸಿಬ್ಬಂದಿ, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ 40 ಕ್ಕೂ ಹೆಚ್ಚು ಸಿಬ್ಬಂದಿ ಈ ತಪಾಸಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ರೈಲಿನಲ್ಲಿ ಯಾವುದೇ ಬಾಂಬ್ ಇಲ್ಲ ಎಂಬುದು ಖಚಿತವಾದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟು ನಿರಾಂತಕರಾದರು.

Read More
Next Story