ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆಯೇ 400 ಕೋಟಿ ದರೋಡೆ; ಬೆಳಗಾವಿ ಎಸ್ಪಿ ಹೇಳಿದ್ದೇನು?
x

ಬೆಳಗಾವಿ ಎಸ್ಪಿ ರಾಮರಾಜನ್‌

ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆಯೇ 400 ಕೋಟಿ ದರೋಡೆ; ಬೆಳಗಾವಿ ಎಸ್ಪಿ ಹೇಳಿದ್ದೇನು?

ನಾಸಿಕ್‌ ಪೊಲೀಸರಿಂದ ಮಾಹಿತಿ ಬಂದ ತಕ್ಷಣವೇ ಬೆಳಗಾವಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಖಾನಾಪುರ ಉಪವಿಭಾಗದ ಸಬ್ ಇನ್‌ಸ್ಪೆಕ್ಟರ್ ಒಳಗೊಂಡ ವಿಶೇಷ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ.


ಕರ್ನಾಟಕ–ಗೋವಾ ಗಡಿಭಾಗದ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ಸುಮಾರು 400 ಕೋಟಿ ಮೊತ್ತದ ಭಾರೀ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ದರೋಡೆ ಪ್ರಕರಣ ಸಂಬಂಧ ಜ. 6ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಬೆಳಗಾವಿ ಪೊಲೀಸರಿಗೆ ಅಧಿಕೃತ ಪತ್ರ ಬಂದಿದ್ದು, ಪ್ರಕರಣದ ಮಾಹಿತಿ ಉಲ್ಲೇಖಿಸಲಾಗಿದೆ. ಚೋರ್ಲಾ ಘಾಟ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಹಣವನ್ನು ದರೋಡೆ ಮಾಡಲಾಗಿದೆ. ಸುಮಾರು 400 ಕೋಟಿ ರೂ. ಆಗಿರಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಬೆಳಗಾವಿ ಎಸ್ಪಿ ರಾಮರಾಜನ್ ಭಾನುವಾರ ಮಾಹಿತಿ ಹಂಚಿಕೊಂಡಿದ್ದಾರೆ.

ನಾಸಿಕ್‌ ಪೊಲೀಸರಿಂದ ಮಾಹಿತಿ ಬಂದ ತಕ್ಷಣವೇ ಬೆಳಗಾವಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಖಾನಾಪುರ ಉಪವಿಭಾಗದ ಸಬ್ ಇನ್‌ಸ್ಪೆಕ್ಟರ್ ಒಳಗೊಂಡ ವಿಶೇಷ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಜೊತೆಗೆ, ಪ್ರಕರಣದ ಗಂಭೀರತೆ ಪರಿಗಣಿಸಿ ವಿಶೇಷ ತನಿಖಾ ತಂಡ ಕೂಡ ರಚನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕೃತ ದೂರು ದಾಖಲಾಗಿಲ್ಲ

400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಮುಂದಿನ ದಿನಗಳಲ್ಲಿ ಯಾರೇ ದೂರು ನೀಡಿದರೂ ಸ್ವೀಕರಿಸಿ, ತನಿಖೆ ನಡೆಸುತ್ತೇವೆ. ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರು ನಡೆಸುತ್ತಿದ್ದು, ಕರ್ನಾಟಕ ಪೊಲೀಸರು ಸಹಕಾರ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಚೋರ್ಲಾ ಘಾಟ್ ಪ್ರದೇಶವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವ್ಯಾಪ್ತಿಗೆ ಒಳಪಡುವ ಸೂಕ್ಷ್ಮ ಪ್ರದೇಶವಾಗಿದೆ. ಈ ಕಾರಣದಿಂದಾಗಿ ತನಿಖೆಯು ಜಟಿಲವಾಗಿದೆ. ಮೂರೂ ರಾಜ್ಯಗಳ ಪೊಲೀಸರು ಸಮನ್ವಯದಿಂದ ತನಿಖೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರೀ ಮೊತ್ತದ ದರೋಡೆ ಪ್ರಕರಣವು ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.

ದೃಢಪಡಿಸದ ಮಹಾರಾಷ್ಟ್ರ ಪೊಲೀಸರು

ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಗಡಿಭಾಗದ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣದ ಕುರಿತು ಮಹಾರಾಷ್ಟ್ರ ಪೊಲೀಸರು ಕೂಡ ದೃಢಪಡಿಸಿಲ್ಲ. ಘಟನೆಗೆ ಸಂಬಂಧಿಸಿ ಈವರೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಧಿಕೃತ ದೂರು ದಾಖಲಿಸಿಲ್ಲ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಸಂಭಾವ್ಯ ಘಟನೆ ಕುರಿತು ನೆರೆಯ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ನಾಸಿಕ್‌ ಪೊಲೀಸರು ಹೇಳಿದ್ದಾರೆ.

ಘಟನೆ ನಡೆದ ಸ್ಥಳ, ಹಣ ಸಾಗಣೆ ವಿವರ, ಬಳಸಲಾದ ವಾಹನಗಳು ಹಾಗೂ ಭದ್ರತಾ ದಾಖಲೆಗಳ ಕುರಿತು ಪರಿಶೀಲನೆ ನಡೆಯುತ್ತಿದೆ. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಗಳು, ಟೋಲ್ ಪ್ಲಾಜಾ ದಾಖಲೆಗಳು ಮತ್ತು ಹಣ ಸಾಗಣೆ ಸಂಬಂಧಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯಕ್ಕೆ ಈ ಪ್ರಕರಣವನ್ನು ಪರಿಶೀಲನೆ ಹಂತದಲ್ಲಿರುವ ಸಂಶಯಾಸ್ಪದ ಮಾಹಿತಿ (Unverified Input) ಎಂದು ಪರಿಗಣಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ.

Read More
Next Story