ಕಿಶ್ತ್ವಾರ್​ ಮೇಘಸ್ಫೋಟ ದುರಂತ: ಸಾವಿನ ಸಂಖ್ಯೆ 46ಕ್ಕೆ ಏರಿಕೆ; 160 ಜನರ ರಕ್ಷಣೆ, ಹಲವರು ನಾಪತ್ತೆ
x

ಜಮ್ಮು ಕಾಶ್ಮೀರ

ಕಿಶ್ತ್ವಾರ್​ ಮೇಘಸ್ಫೋಟ ದುರಂತ: ಸಾವಿನ ಸಂಖ್ಯೆ 46ಕ್ಕೆ ಏರಿಕೆ; 160 ಜನರ ರಕ್ಷಣೆ, ಹಲವರು ನಾಪತ್ತೆ

ಗುರುವಾರ ಮಧ್ಯಾಹ್ನ 12 ರಿಂದ 1 ಗಂಟೆಯ ಸುಮಾರಿಗೆ, ಮಚೈಲ್ ಮಾತಾ ಯಾತ್ರೆಯ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಚೋಸಿಟಿ ಗ್ರಾಮದ ಮೇಲೆ ಪ್ರಕೃತಿ ಮುನಿಸಿಕೊಂಡಿತ್ತು.


ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​​ ಜಿಲ್ಲೆಯ ಚೋಸಿಟಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭೀಕರ ಮೇಘಸ್ಫೋಟ ಹಾಗೂ ಜಲಪ್ರಳಯದಲ್ಲಿ ಮೃತಪಟ್ಟವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 160ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಗುರುವಾರ ಮಧ್ಯಾಹ್ನ 12 ರಿಂದ 1 ಗಂಟೆಯ ಸುಮಾರಿಗೆ, ಮಚೈಲ್ ಮಾತಾ ಯಾತ್ರೆಯ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಚೋಸಿಟಿ ಗ್ರಾಮದ ಮೇಲೆ ಪ್ರಕೃತಿ ಮುನಿಸಿಕೊಂಡಿತ್ತು. ಮೇಘಸ್ಫೋಟದಿಂದಾಗಿ ಉಂಟಾದ ಹಠಾತ್ ಪ್ರವಾಹವು ಮನೆಗಳು, ಅಂಗಡಿಗಳು, ವಾಹನಗಳು ಮತ್ತು ಭದ್ರತಾ ಶಿಬಿರವನ್ನು ಕೊಚ್ಚಿಕೊಂಡು ಹೋಗಿದೆ.

ರಕ್ಷಣಾ ಕಾರ್ಯಾಚರಣೆ ಮತ್ತು ಪ್ರಸ್ತುತ ಸ್ಥಿತಿ:

ಈವರೆಗೆ ಪತ್ತೆಯಾದ 46 ಮೃತದೇಹಗಳ ಪೈಕಿ 21 ಶವಗಳನ್ನು ಗುರುತಿಸಲಾಗಿದೆ. ಮೃತರ ಚಿತ್ರಗಳನ್ನು ವಾಟ್ಸ್​​ಆ್ಯಪ್​ ಮೂಲಕ ಅವರ ಕುಟುಂಬಗಳಿಗೆ ಕಳುಹಿಸಿ ಗುರುತಿಸುವಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ರಕ್ಷಿಸಲಾದ 160 ಜನರ ಪೈಕಿ 38 ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನೂ 67 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿರುವ ಶಂಕೆ ಇರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸಹಾಯವಾಣಿ ಸ್ಥಾಪನೆ

ಜಮ್ಮು ಮತ್ತು ಕಾಶ್ಮೀರ ಆಡಳಿತವು ಸಂತ್ರಸ್ತರ ಸಹಾಯಕ್ಕಾಗಿ ಚೋಸಿಟಿ ಗ್ರಾಮದಿಂದ 15 ಕಿ.ಮೀ. ದೂರದಲ್ಲಿರುವ ಪಡ್ಡಾರ್ ಎಂಬಲ್ಲಿ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿಯನ್ನು ಸ್ಥಾಪಿಸಿದೆ. (ಸಹಾಯವಾಣಿ ಸಂಖ್ಯೆಗಳು: 9858223125, 6006701934, 9797504078, 8492886895, 8493801381, ಮತ್ತು 7006463710).

ದುರಂತದಿಂದಾಗಿ ಸಮೀಪದ ಮಚೈಲ್ ಮತ್ತು ಹಮೋರಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ನೂರಾರು ಯಾತ್ರಿಕರು ಹಾಗೂ ಸ್ಥಳೀಯರು ಸಿಲುಕಿಕೊಂಡಿದ್ದಾರೆ. ಭಾರತೀಯ ಸೇನೆ ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಚೆನಾಬ್ ನದಿಯಲ್ಲಿ ತೇಲಿಬರುತ್ತಿರುವ ಮೃತದೇಹಗಳನ್ನು ಹೊರತೆಗೆಯುವ ಪ್ರಯತ್ನಗಳೂ ನಡೆಯುತ್ತಿವೆ. ಈ ಮಹಾ ಪ್ರವಾಹದ ನಡುವೆಯೂ ಸ್ಥಳೀಯ ದೇವಸ್ಥಾನವೊಂದು ಪವಾಡಸದೃಶ ರೀತಿಯಲ್ಲಿ ಪಾರಾಗಿರುವುದು ವರದಿಯಾಗಿದೆ.

Read More
Next Story