ಮತ್ತೊಂದು ಬಿಲ್ ಬಾಕಿ ಪ್ರಕರಣ | ದಯಾಮರಣ ಕೋರಿ ರಾಷ್ಟ್ರಪತಿಗೆ ಕಿಯೋನಿಕ್ಸ್ ವೆಂಡರ್ಸ್ ಪತ್ರ!
ಈ ಕಡೆ ಕಲಸವೂ ಇಲ್ಲದೆ, ನಾವು ಸಾಲ ಮಾಡಿ ಕೆಲಸಕ್ಕೆ ಹಾಕಿರುವ ನಮ್ಮ ಹಣ ನಮಗೆ ಕೊಡದೆ ನಮಗೆ ನರಕ ತೋರಿಸುತ್ತಿದ್ದಾರೆ ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಹೇಳಿದೆ
"ಬಾಕಿ ಬಿಲ್ ಪಾವತಿ ಮಾಡದೆ ನಿತ್ಯ ಕಿರುಕುಳ ನೀಡಿ, ಕಿಯೋನಿಕ್ಸ್ ವೆಂಡರುಗಳ ಕುಟುಂಬ ಸರ್ವನಾಶ ಮಾಡಿದ್ದಾರೆ. ನಿತ್ಯ ಕಿರುಕುಳ ನೀಡಿ, ಕಿಯೋನಿಕ್ಸ್ ವೆಂಡರುಗಳ ಬದುಕು ಕಿತ್ತುಕೊಂಡಿದ್ದಾರೆ. 450 ರಿಂದ 500 ಜನ ವೆಂಡರುಗಳು, ಜೊತೆಗೆ ನಮ್ಮಲ್ಲಿ ಕೆಲಸ ಮಾಡುವ 6 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸರ್ವಾನಾಶ ಮಾಡಿರುವ ಕಾರಣ ನಾವು ಬೇಸತ್ತಿದ್ದೇವೆ. ಹೀಗಾಗಿ, ನಮ್ಮೆಲ್ಲರಿಗೂ ಒಂದೇ ಬಾರಿಗೆ ಸಾಯಲು ದಯಾಮರಣ ನೀಡಿ” ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ಬಗೇರ ಹಾಗೂ ಸದಸ್ಯರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
“ಕಿಯೋನಿಕ್ಸ್ ರಾಜ್ಯದಲ್ಲಿ ಸುಮಾರು 48 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 450 ರಿಂದ 500ಕ್ಕೂ ಹೆಚ್ಚು ಸಣ್ಣ ಉದ್ಯಮಿದಾರರನ್ನು ನಿಗಮದಲ್ಲಿ ವೆಂಡರ್ದಾರರನ್ನಾಗಿ ನೋಂದಾಯಿಸಿಕೊಂಡು ಕಾರ್ಯಾ ನಿರ್ವಹಿಸುತ್ತಿದೆ. ವಿದ್ಯುನ್ಮಾನ ಸೇವೆಗಳನ್ನು ಒದಗಿಸುವುದರ ಜೊತೆಗೆ ನಿಗಮವು ಮಾನವ ಸಂಪನ್ಮೂಲ ಸೇವೆಯನ್ನು ಒದಗಿಸುವುದು ಮತ್ತು ಇತರೆ ಖರೀದಿಗೂ ವೆಂಡರ್ದಾರರು ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಕೊಂಡಿಯಂತೆ ಕೆಲಸ ಮಾಡುತ್ತಿದೆ. ದಶಕಗಳ ಕಾಲದಿಂದಲೂ ಕಿಯೋನಿಕ್ಸ್ ಸಂಸ್ಥೆಯು ವಂಡರ್ದಾರರ ಜೊತೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿದೆ. ಆದರೆ ದಿಢೀರನೆ 2023ರಲ್ಲಿ ಸರ್ಕಾರ ಬದಲಾದ ತಕ್ಷಣ ವಂಡೆರ್ದಾರರ ಬಿಲ್ಲನ್ನು ತಡೆ ಹಿಡಿದು ನಾನಾ ರೀತಿಯಾಗಿ ಕಿರುಕುಳ ಕೊಡಲು ಪ್ರಾರಂಭಿಸಲಾಗಿದೆ.
3 ರಿಂದ 4 ತಿಂಗಳುಗಳ ಕಾಲ ಅಧಿಕಾರಗಳು ಹಾಗೂ ಸಚಿವರಲ್ಲಿ ನಾವು ಸಂಯಮದಿಂದ ಎಷ್ಟೇ ಕೇಳಿಕೊಂಡರು. ಮನವಿ ಮಾಡಿಕೊಂಡರೂ ಬಿಲ್ ಪಾವತಿ ಮಾಡಿಲ್ಲ. ಈ ಹಿಂದೆ ಮುಖ್ಯ ನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತಿದ್ದ ಸಂಗಪ್ಪರವರು ಕಮಿಷನ್ ರೂಪದಲ್ಲಿ ಶೇ 12 ರಷ್ಟು ಲಂಚ ಕೇಳಿ ಕಿರುಕುಳ ಕೊಟ್ಟು, ನಾವು ಲಂಚ ಕೊಡಲು ಒಪ್ಪದೇ ಇದ್ದಾಗ ನಮ್ಮ ಬಿಲ್ ಪಾವತಿ ಮಾಡದೆ ತಡೆಹಿಡಿದಿದ್ದರು. ನಾವುಗಳು ನಮ್ಮ ಅಸೋಸಿಯೇಷನ್ ಕಡೆಯಿಂದ ಅಸೋಸಿಯೇಷನ್ ಅಧ್ಯಕ್ಷ ವಸಂತ ಬಂಗೇರ ಹತ್ತಿರ ಎಲ್ಲರೂ ಚರ್ಚಿಸಿ ಆ ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರತಿಭಟನೆ ಮಾಡಿದೆವು. ಆದರೂ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ.
ದ್ವೇಷ ಸಾಧಿಸುತ್ತಿರುವ ಸಚಿವರು
ನಾವು ಪ್ರತಿಭಟನೆ ಮಾಡಿದ್ದರಿಂದ ಪ್ರಿಯಾಂಕ್ ಖರ್ಗೆ ಕೋಪಗೊಂಡು ಮತ್ತು ಅಧಿಕಾರಿಗಳು ಸೇರಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ವೈಯಕ್ತಿಕ ದ್ವೇಷ ಸಾದಿಸಲು ಆರಂಭಿಸಿದ್ದಾರೆ. ನಿಗಮದಲ್ಲಿ ಯಾರೋ ನಾಲ್ಕು ಜನ ವಂಡರ್ಗಳು ಮಾಡಿದ ತಪ್ಪನ್ನೇ ಮುಂದೆ ಇಟ್ಟುಕೊಂಡು ನಮ್ಮ ಎಲ್ಲ ವೆಂಡರ್ದಾರರು ಇಲಾಖೆಗಳ ಕೆಲಸ ಪೂರ್ಣಗೊಳಿಸಿ ಆಯಾ ಇಲಾಖೆಯಿಂದ ಕಿಯೋನಿಕ್ಸ್ ಸಂಸ್ಥೆಗೆ ಹಣ ಬಿಡುಗಡೆಯಾದರೂ, ನಮಗೆ ಪಾವತಿ ಮಾಡಬೇಕಾದ ಬಿಲ್ ಸಂಬಂಧಿತ ಫೈಲ್ಸ್ ಎಲ್ಲವನ್ನು ಬಾಕಿ ಇಟ್ಟುಕೊಂಡು. ಕುಂಟು ನೆಪ ಹೇಳಿ ತನಿಖೆಗೆ ಸೂಚಿಸಿದ್ದಾರೆ. ಈಗ ಒಂದೂವರೆ ವರ್ಷ ಕಳೆದರೂ ತನಿಖೆಯ ಹೆಸರಲ್ಲಿ ನಮ್ಮ ಹಣ ಬಾಕಿ ಉಳಿಸಿಕೊಂಡು, ಪ್ರತಿದಿನ ಒಂದಲ್ಲಾ ಒಂದು ಕಾರಣ ಹೇಳುತ್ತಾ ನಾಳೆ, ನಾಡಿದ್ದು ನಿಮ್ಮ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾ ಒಂದೂವರೆ ವರ್ಷ ಕಳೆದರು ನಮ್ಮ ಬಿಲ್ ಪಾವತಿ ಮಾಡದೆ. ನಮ್ಮ ಬದುಕನ್ನೇ ಸರ್ವನಾಶ ಮಾಡಿದ್ದಾರೆ.
ಈ ಕಡೆ ಕಲಸವೂ ಇಲ್ಲದೆ, ನಾವು ಸಾಲ ಮಾಡಿ ಕೆಲಸಕ್ಕೆ ಹಾಕಿರುವ ನಮ್ಮ ಹಣ ನಮಗೆ ಕೊಡದೆ ನಮ್ಮೆಲ್ಲರ ಬದುಕನ್ನೇ ಕಿತ್ತುಕೊಂಡು ನಾವೆಲ್ಲರೂ ನರಕ ಅನುಭವಿಸುವಹಾಗೆ ನರಕ ತೋರಿಸುತ್ತಿದ್ದಾರೆ. ಇವರ ಹಿಂಸೆಯಿಂದ ನಮ್ಮ ವಂಡರ್ಗಳು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ, ಅಂತ ಸಂದರ್ಭಭದಲ್ಲಿ ನಾವು ಅವರಿಗೆ ಧೈರ್ಯ ಹೇಳಿ ಸಮಾಧಾನ ಮಾಡಿ ನಮ್ಮಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಹೇಗೋ ಇಲ್ಲಿಯವರೆಗೂ ದಿನ ಕಳೆಯುತ್ತಾ ಬದುಕಿ ಬಂದಿದ್ದೇವೆ. ಆದರೆ, ಈಗ ನಮಗೆ ತಾಳ್ಮೆ ಮೀರಿ ಹೋಗಿದೆ. ನಮ್ಮೆಲ್ಲರ ಪಾಲಿಗೆ ಉಳಿದಿರುವುದು ಇನ್ನು ಸಾಯುವ ಮಾರ್ಗ ಒಂದೇ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ನಿಗಮದ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ ನಿರ್ದೇಶಕರಾದ (ಹಣಕಾಸು) ನಿಶ್ಚಿತ್ ಅವರುಗಳಿಗೆ ನಮ್ಮ ಕಷ್ಟ ಹೇಳಿಕೊಂಡರೂ ಉಪಯೋಗವಾಗಿಲ್ಲ. ಎಲ್ಲ ಸಮಸ್ಯೆಗಳ ಬಗ್ಗೆ ಒಂದೂವರೆ ವರ್ಷದಿಂದ ಹಲವಾರು ಬಾರಿ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ರಾಜಪಾಲಾರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ನಮ್ಮ ಬದುಕನ್ನು ಸರ್ವನಾಶ ಮಾಡಲೆಂದೇ ನಮ್ಮ ಬಿಲ್ ಬಾಕಿ ಇರಿಸಿಕೊಂಡು ಹಣ ಪಾವತಿ ಮಾಡದೆ ನಮ್ಮ ಕಷ್ಟ ನೋಡಿ ಆನಂದಿಸುತ್ತಿದ್ದಾರೆ.
ಈಗ ಬದಲಾವಣೆಯ ಹೆಸರಿನಲ್ಲಿ ಕಿಯೋನಿಕ್ಸ್ ಸಂಸ್ಥೆಯಲ್ಲಿ ಹೊಸದಾಗಿ ನಿಬಂಧನೆಗಳನ್ನು ರೂಪಿಸಿ ಈ ಹಿಂದೆ ವಂಡೆರ್ದಾರರಾಗಿದ್ದ 450 ರಿಂದ 500 ಜನರಲ್ಲಿ ಒಬ್ಬರು ಕೂಡ ಅರ್ಹರಾಗದ ರೀತಿ ನಿಯಮಗಳನ್ನು ರೋಪಿಸಿ ತಮಗೆ ಬೇಕಾದ ದೊಡ್ಡ ದೊಡ್ಡ ಕಂಪನಿಗಳು ಮಾತ್ರ ಅರ್ಹರಾಗುವ ಹಾಗೆ ನಿಯಮಗಳನ್ನು (Rules) ಮಾಡಿ ನಾವು 450 ರಿಂದ 500 ಜನ ವೆಂಡರ್ದಾರರನ್ನು ಬೀದಿಗೆ ತಂದಿದ್ದಾರೆ. ಅಲ್ಲದೇ, ನಮ್ಮನ್ನೇ ನಂಬಿಕೊಂಡು ನಮಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 6 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ.
48 ವರ್ಷಗಳಿಂದ ಕರ್ನಾಟಕ ಸರ್ಕಾರ ಸಣ್ಣ ಉದ್ಯಮಿಗಳು, ಹಾಗೂ ಓದು ಮುಗಿಸಿದ ಇಂಜಿನಿಯರ್ಸ್ ಹಾಗೂ ಇತರ ಪದವಿ ಪಡೆದ ವಿದ್ಯಾರ್ಥಿಗಳು start up ಉದ್ಯಮವನ್ನು ಪ್ರಾರಂಭಿಸಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮದಲ್ಲಿ ವೆಂಡರ್ದಾರರನ್ನಾಗಿ ನೋಂದಾಯಿಸಿಕೊಂಡು ಅವರ ಜೀವನ ಉಪಾಯಕ್ಕಾಗಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಉತ್ತೇಜನ ನೀಡುತ್ತಾ ಬಂದಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮ ಸ್ಥಾಪಿಸಿರುವುದೇ ಸಣ್ಣ ಉದ್ಯಮಿಗಳು ಹಾಗೂ ಓದು ಮುಗಿಸಿದ ವಿದ್ಯಾರ್ಥಿಗಳ ಜೀವನ ರೂಪಿಸಿಕೊಳ್ಳಲು ಬದುಕು ಕಟ್ಟಿಕೊಳ್ಳಲು.
ಆದರೆ, ಈ ಸರ್ಕಾರ ಬಂದ ಮೇಲೆ ಇದ್ದಕ್ಕೆ ಇದ್ದ ಹಾಗೆ ನೇಮಗಳನ್ನು ಗಾಳಿಗೆ ತೂರಿ ಸಂವಿದಾನಕ್ಕೂ ಬೆಲೆ ಕೊಡದೆ. ಈ ಹಿಂದೆ ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮದಲ್ಲಿ ನೋಂದಣಿಗೊಂಡಿದ್ದ 450 ರಿಂದ 500ಕ್ಕೂ ಹೆಚ್ಚು ವೆಂಡರ್ದಾರರನ್ನು ವಜಾಗೊಳಿಸಿರುತ್ತಾರೆ. ನಮ್ಮನ್ನು ಕಿಯೋನಿಕ್ಸ್ ಸಂಸ್ಥೆಯಿಂದ ಹೊರಹಕಾಲೆಂದೇ ಅವರಿಗೆ ಬೇಕಾದ ಹಾಗೆ ನೇಮಗಳನ್ನು ರೂಪಿಸಿ ನಾವುಗಳು ಯಾರು ಅರ್ಹರಾಗದ ಹಾಗೆ ನಮ್ಮನ್ನು ಬೀದಿಗೆ ತಂದಿದ್ದು ಅಲ್ಲದೇ, ನಮ್ಮ ಹಣವನ್ನು ಬಾಕಿ ಇರಿಸಿಕೊಂಡು ನಮಗೆ ಕಿರುಕುಳ ಕೊಡುತ್ತಿದ್ದಾರೆ.
ಕಿಯೋನಿಕ್ಸ್ ಅವರ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಬಳಲುತ್ತಿರುವ ನಾವುಗಳು. ಯೋಚಿಸಿ ತೀರ್ಮಾನಿಸಿದ್ದೇವೆ. ಇವರಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಅರಿತು ತಮ್ಮ ಬಳಿ ನ್ಯಾಯ ಸಿಗುವ ಭರವಸೆ ಇಟ್ಟುಕೊಂಡು ಈ ಪತ್ರದ ಮೂಲಕ ತಮ್ಮಲ್ಲಿ ನ್ಯಾಯ ಕೊಡಿಸಲು ಕೇಳಿಕೊಳ್ಳುತ್ತಿದ್ದೇವೆ.
ದೀನ ದಯಳುಗಳಾದ ತಾವು ಈ ಪತ್ರ ನೋಡಿದ ತಕ್ಷಣವೇ. ನಮಗೆ ನಮ್ಮ ಹಣ ಬಿಡುಗಡೆ ಮಾಡಲು ಇವರಿಗೆ ಮಾರ್ಗದರ್ಶನ ನೀಡಿ. ಒಂದು ವಾರದಲ್ಲಿ ನಮ್ಮ ಬಿಲ್ ಪಾವತಿ ಮಾಡಿಸಿ ನಮ್ಮ ಬದುಕನ್ನು ಉಳಿಸಿ ನಮ್ಮ ಪ್ರಾಣ ಕಾಪಾಡಬೇಕು. ನಮಗೆ ನ್ಯಾಯ ಕೊಡಿಸಬೇಕು. ಹಾಗೂ ಕಿಯೋನಿಕ್ಸ್ನಲ್ಲಿ ಈ ಹಿಂದೆ ವೆಂಡರ್ದಾರರಾಗಿ ಜೀವನ ಸಾಗಿಸಿಕೊಂಡು ಬಂದ ಹಾಗೆ, ಮುಂದೆ ಕೂಡ ನಾವುಗಳು ಜೀವನ ಸಾಗಿಸಲು ಅವಕಾಶ ಮಾಡಿ ಕೊಡಬೇಕು ಎಂದು ತಮ್ಮಲಿ ವಿನಂತಿಸಿಕೊಳ್ಳುತ್ತೇವೆ.
ಈಗಾಗಲೇ ಅತಿಯಾದ ಕಷ್ಟ ನೋವು ಅನುಭೋವಿಸಿರುವ ನಾವು ಸಾಕಷ್ಟು ತೊಂದರೆಗಳಿಗೆ ಸಿಲುಕಿ ಹೋರಾಡಿ ಜೀವ ಉಳಿಸಿಕೊಂಡಿದ್ದೇವೆ. ಹೀಗೆ ಜೀವನ್ ಮರಣದ ನಡುವೆ ಹೋರಾಡುತ್ತಿರುವ ನಮ್ಮ ಬಿಲ್ ಪಾವತಿ ಮಾಡಲು ವಿಳಂಬ ಮಾಡಿದಲ್ಲಿ ಇನ್ನು ಒಂದು ವಾರದಲ್ಲಿ ನಮ್ಮ ಹಣ ನಮಗೆ ಬಿಡುಗಡೆ ಮಾಡದೇ ಇದ್ದಲ್ಲಿ, ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಉಳಿದಿರುವುದಿಲ್ಲ. ಇಲ್ಲಿಯವರೆಗೂ ಒಬ್ಬರಿಗೊಬ್ಬರು ಸಹಾಯ ಸಮಾಧಾನ ಮಾಡಿಕೊಂಡು ಹೇಗೋ ಬದುಕಿದ್ದೇವೆ. ಇನ್ನು ಮೇಲೆ ಬದುಕುವ ಶಕ್ತಿ ನಮ್ಮಲ್ಲಿ ಉಳಿದಿರುವುದಿಲ್ಲ. ಹಾಗಾಗಿ ನಮ್ಮ ಹಣ ಪಾವತಿ ಮಾಡಲು ಇನ್ನು ವಿಳಂಬ ನೀತಿ ಅನುಸರಿಸಿ ನಮಗೆ ತೊಂದರೆ ಕೊಟ್ಟಲ್ಲಿ, ನಮ್ಮ 450 ರಿಂದ 500 ಜನ ವೆಂಡರ್ದಾರರಲ್ಲಿ ಯಾರಾದರೂ ಆತ್ಮಹತ್ಯೆ ದಾರಿ ಹಿಡಿದು ಯಾರದಾದರೂ ಜೀವ ಕಳೆದುಕೊಂಡರೆ ಅದಕ್ಕೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ನಿಗಮದ ಅಧ್ಯಕ್ಷ ಶರತ್ ಬಚ್ಚೆಗೌಡ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳದ ಪವನ್ ಕುಮಾರ ಮಲ್ಲಪಟ್ಟಿ ಮತ್ತು ನಿರ್ದೇಶಕರಾದ (ಹಣಕಾಸು) ನಿಶ್ನಿಸ್ ನೇರ ಹೊಣೆ.
ನಮ್ಮಲ್ಲಿ ಯಾರೇ ಜೀವ ಕಳೆದುಕೊಂಡರೂ ಅದಕ್ಕೆ ಈ ನಾಲ್ಕು ಜನ ನೇರ ಕಾರಣರಾಗಿರುತ್ತಾರೆ. ಇವರೆಲ್ಲರ ಕಿರುಕುಳದಿಂದ ಬೇಸತ್ತ ನಾವುಗಳು ಸೋತು ಹೋಗಿದ್ದೇವೆ ದಾರಿಕಾಣದಂತೆ ಆಗಿದ್ದೇವೆ. ಬದುಕಲ್ಲಿ ಜಿಗುಪ್ಪೆ ಹೊಂದಿದ್ದೇವೆ. ಜೀವವೇ ಬೇಡ ಅನ್ನುವಷ್ಟು ರೂಸಿ ಹೋಗಿದ್ದೇವೆ. ಆದಕಾರಣ ಮುಂದೆ ನಮ್ಮ ವೆಂಡರ್ದಾರರು ಏನು ಬೇಕಾದರೂ ನಿರ್ಧಾದರ ಮಾಡಬಹು ಅದಕ್ಕೆ ಕಾರಣ ನೇರ ಹೊಣೆ ಇವರುಗಳೇ ಆಗಿರುತ್ತಾರೆ. ದಯವಿಟ್ಟು ಇವರುಗಳಿಂದ ನಮಗೆ ನ್ಯಾಯ ಸಿಗುವ ಹಾಗೆ ಮಾಡಬೇಕೆಂದು ತಮ್ಮಲ್ಲಿ ಕೈ ಮುಗಿದು ವಿನಂತಿಸಿಕೊಳ್ಳುತ್ತೇವೆ. ಒಂದು ವಾರದೊಳಗೆ ನಮ್ಮ ಹಣ ಬಿಡುಗಡೆ ಮಾಡದೇ ಇದ್ದಲ್ಲಿ ನಾವು 450 ರಿಂದ 500 ನೂರು ಜನ ವೆಂಡರ್ದಾರರು ಒಟ್ಟಾಗಿ ಸಾಯಲು ತಯಾರಿದ್ದೇವೆ. ನಮಗೆಲ್ಲರಿಗೂ ದಯಾಮರಣ ಕೋಡಬೇಕೆಂದು ವಿನಂತಿಸಿಕೊಳ್ಳುತ್ತೇವೆ” ಎಂದು ವಂಡರ್ದಾರರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.