ಅಪಹರಣ ಪ್ರಕರಣ|  ನ್ಯಾಯಾಧೀಶರ ಮುಂದೆ ಇಂದು ರೇವಣ್ಣ ಹಾಜರು ಸಾಧ್ಯತೆ
x

ಅಪಹರಣ ಪ್ರಕರಣ| ನ್ಯಾಯಾಧೀಶರ ಮುಂದೆ ಇಂದು ರೇವಣ್ಣ ಹಾಜರು ಸಾಧ್ಯತೆ


ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ನಿನ್ನೆ ಸಂಜೆ ಬಂಧಿತರಾಗಿರುವ ಮಾಜಿ ಸಚಿವ, ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ವಿಶೇಷ ತನಿಖಾ ತಂಡದ(ಎಸ್‌ಐಟಿ) ಅಧಿಕಾರಿಗಳು ಭಾನುವಾರ ಸಂಜೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ʻʻಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಹೆಚ್‌ಡಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು, ಇದರ ಬೆನ್ನಲ್ಲೇ ಎಸ್‌ಐಟಿ ಅಧಿಖಾರಿಗಳು ಸಿಐಡಿ ಕಚೇರಿಗೆ ಕರೆದೊಯ್ದ ವಿಚಾರಣೆ ನಡೆಸಿದ್ದರು. ಈ ವೇಳೆ ರೇವಣ್ಣ ಸರಿಯಾಗಿ ಉತ್ತರ ನೀಡಿಲ್ಲ ಎನ್ನಲಾಗುತ್ತಿದೆ. ಮಹಿಳೆಯ ಅಪಹರಣಕ್ಕೂ ನನಗೂ ಸಂಬಂಧವಿಲ್ಲ. ತಾನು ಯಾರನ್ನು ಅಪಹರಿಸಲು ಹೇಳಿಲ್ಲ ಎನ್ನುತ್ತಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.

ʻʻಎಸ್‌ಐಟಿ ಎಡಿಜಿಪಿ ಬಿ.ಕೆ.ಸಿಂಗ್ ಮತ್ತವರ ತಂಡ ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದಾಗ ತಮ್ಮ ಮೇಲಿನ ಆರೋಪಗಳನ್ನು ರೇವಣ್ಣ ನಿರಾಕರಿಸಿದ್ದಾರೆ. ನಾವು ಆಕೆಯನ್ನು ಅಪಹರಣ ಮಾಡಿಲ್ಲ. ಚುನಾವಣೆ ಇರುವ ಇರುವ ಕಾರಣ ಆಕೆ ನಮ್ಮ ಮನೆಗೆ ಬಂದಿದ್ದರು. ಅವರು ಕೆಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅದಷ್ಟೆ ಗೊತ್ತು. ಅದನ್ನು ಹೊರತುಪಡಿಸಿ ಆಕೆಯ ಬಗ್ಗೆಯಾಗಲಿ, ಅಪರಹರಣದ ಬಗ್ಗೆಯಾಗಲೀ ಯಾವುದೂ ಗೊತ್ತಿಲ್ಲʼʼ ಎಂದು ರೇವಣ್ಣ ತಿಳಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೂರು ನೀಡಬಾರದು ಎಂದು ಆಕೆಯನ್ನು ಅಪಹರಣ ಮಾಡಿದ ಗಂಭೀರ ಆರೋಪ ಈಗ ಹೆಚ್‌ಡಿ ರೇವಣ್ಣ ಮೇಲಿದೆ. ಅತ್ಯಾಚಾರ ವಿಚಾರ ರೇವಣ್ಣರಿಗೆ ಗೊತ್ತಿತ್ತಾ ಅಥವಾ ವಿಚಾರ ಗೊತ್ತಿದ್ದೂ ಅತ್ಯಾಚಾರ ಮಾಡಿದ್ದ ಆರೋಪಿ ಪ್ರಜ್ವಲ್ ರೇವಣ್ಣರಿಗೆ ಸಹಾಯ ಮಾಡುವ ಉದ್ದೇಶದಿಂದ ಅಪಹರಣ ಮಾಡಿಸಿದರಾ ದೂರು ಕೊಟ್ಟಲ್ಲಿ ನಿನಗೆ ಏನಾದರೂ ಮಾಡುತ್ತೇವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆಯೇ ಹೀಗೆ ಹಲವಾರು ಆಯಾಮದಲ್ಲಿ ಎಸ್‌ಐಟಿ ವಿಚಾರಣೆ ನಡೆಸಲಿದೆ. ಈಗಾಗಲೇ ಬಂಧಿತನಾಗಿರುವ ಸಹ ಆರೋಪಿ ಸತೀಶ್‌ ಬಾಬಣ್ಣ ಹೇಳಿಕೆ ಮತ್ತು ಅಪರಹಣಕ್ಕೆ ಒಳಗಾಗಿ ಪೊಲೀಸರ ಸಹಾಯದಿಂದ ಬಿಡುಗಡೆಯಾಗಿರುವ ಸಂತ್ಸಸ್ತೆಯ ಹೇಳಿಕೆಗಳ ಮೇಲೆ ರೇವಣ್ಣ ಅವರ ಕಾನೂನು ಹೋರಾಟದ ಭವಿಷ್ಯ ನಿಂತಿದೆ ಎನ್ನಲಾಗಿದೆ.


Read More
Next Story