ಸಂತ್ರಸ್ತೆಯರು, ಬಂಧಿತರ ಹೇಳಿಕೆಗಳಿಂದ ಎದುರಾದ ಕಂಟಕ | ಭವಾನಿ ರೇವಣ್ಣಗೆ ಬಂಧನ ಭೀತಿ?
ಭವಾನಿ ಹೆಸರನ್ನು ಆರೋಪಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸದ ಕಾರಣ ಅವರನ್ನು ಸಾಕ್ಷಯಾಗಿಯೂ ಪರಿಗಣಿಸಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಕಾನೂನು ತಜ್ಙರೊಂದಿಗೆ ಚರ್ಚಿಸುತ್ತಿದ್ದು ಒಂದೆರಡು ದಿನಗಳಲ್ಲಿ ಖಚಿತ ನಿರ್ಧಾರಕ್ಕೆ ಬರಲಾಗುವುದುನ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ರೇವಣ್ಣ ಪತ್ನಿ ಭವಾನಿ ಅವರಿಗೂ ಬಂಧನದ ಭೀತಿ ಎದುರಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಶನಿವಾರ ವಾಟ್ಸಪ್ ಮೂಲಕ ಎರಡನೇ ನೋಟಿಸ್ ಕಳುಹಿಸಲಾಗಿದ್ದು, 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮೊದಲ ನೋಟಿಸ್ ಗೆ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ಈ ನೋಟೀಸ್‌ಗೂ ಉತ್ತರ ನೀಡಿಲ್ಲ ಹಾಗಾಗಿ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಭವಾನಿ ಹೆಸರನ್ನು ಆರೋಪಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸದ ಕಾರಣ ಅವರನ್ನು ಸಾಕ್ಷಯಾಗಿಯೂ ಪರಿಗಣಿಸಬಹುದು ಎಂದು ಹೇಳಲಾಗಿದೆ.
ಈ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಕಾನೂನು ತಜ್ಙರೊಂದಿಗೆ ಚರ್ಚಿಸುತ್ತಿದ್ದು ಒಂದೆರಡು ದಿನಗಳಲ್ಲಿ ಖಚಿತ ನಿರ್ಧಾರಕ್ಕೆ ಬರಲಾಗುವುದು. ಬಂಧಿತ ಆರೋಪಿಗಳು ಮತ್ತು ಎಸ್‌ಐಟಿ ಬಳಿ ಹೇಳಿಕೆ ನೀಡಿರುವ ಸಂತ್ರಸ್ತರು ಭವಾನಿ ರೇವಣ್ಣ ಕುರಿತು ಉಲ್ಲೇಖಿಸಿರುವುದರಿಂದ ಆಕೆಯನ್ನು ಬಂಧಿಸಿ ತನಿಖೆಗೆ ಒಳಪಡಿಸುವುದು ಸೂಕ್ತ ಎಂದೂ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಭವಾನಿ ಮೇಲಿರುವ ಆರೋಪ ಏನು?
ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಸಂತ್ರಸ್ತೆಯ ಮಗನೊಬ್ಬ, ತನ್ನ ತಾಯಿಯನ್ನು ಅಪಹರಣ ಮಾಡಿದ್ದಾರೆ ಎಂದು ಎಚ್.ಡಿ.ರೇವಣ್ಣ ಅವರ ವಿರುದ್ಧ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಆ ದೂರಿನನ್ವಯ ರೇವಣ್ಣ ಹಾಗೂ ಅವರ ಆಪ್ತ ಸತೀಶ್ ಬಾಬಣ್ಣ ಅವರನ್ನು ಬಂಧಿಸಲಾಗಿದೆ. ಈ ಅಪಹರಣಕ್ಕೆ ಭವಾಣಿ ರೇವಣ್ಣ ಅವರು ಕುಮ್ಮಕ್ಕು ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಸಂತ್ರಸ್ತೆಯನ್ನು ಅಪಹರಣ ಮಾಡಲು ಭವಾಣಿ ರೇವಣ್ಣ ಅವರು ಕುಮ್ಮಕ್ಕು ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ಸತೀಶ್ ಬಾಬು ಅವರನ್ನು ಎಸ್‌ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ಆತನ ಮೊಬೈಲ್ ನಲ್ಲಿನ ಕಾಲ್ ಡೀಟೆಲ್ಸ್ ಸಹ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಭವಾನಿ ರೇವಣ್ಣ ಮತ್ತು ಸತೀಶ್ ಬಾಬು ಕರೆ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಭವಾನಿ ರೇವಣ್ಣ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ತಂಡ ಸಿದ್ಧವಾಗಿದೆ. ಆದರೆ, ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ತಂಡ ಬಂಧನ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.