ಬಿಗ್‌ಬಾಸ್ ಕನ್ನಡ ಸೀಸನ್‌-12ರ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್‌
x

ಬಿಗ್‌ಬಾಸ್ ಕನ್ನಡ ಸೀಸನ್‌-12ರ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್‌

“ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ, ಆಶೀರ್ವಾದ ಮಾಡಿ" ಎಂದು ಹೇಳುವ ಮೂಲಕ ಬಿಗ್‌ ಬಾಸ್‌ 12 ನೇ ಆವೃತ್ತಿ ಆರಂಭದ ದಿನಾಂಕವನ್ನು ಕಿಚ್ಚ ಸುದೀಪ್‌ ಪ್ರಕಟಿಸಿದರು.


ಬಹು ನಿರೀಕ್ಷಿತ 'ಬಿಗ್ ಬಾಸ್ ಕನ್ನಡ ಸೀಸನ್-12’ ರ ಆರಂಭದ ದಿನಾಂಕವನ್ನು ನಟ, ಬಿಗ್‌ಬಾಸ್‌ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಅಧಿಕೃತವಾಗಿ ಘೋಷಿಸಿದರು.

ಭಾನುವಾರ ಮೈಸೂರಿನಲ್ಲಿ ನಡೆದ ನಿರ್ಮಾಪಕ ಹಾಗೂ ಉದ್ಯಮಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುದೀಪ್‌, “ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ, ಆಶೀರ್ವಾದ ಮಾಡಿ" ಎಂದು ಹೇಳುವ ಮೂಲಕ ಬಿಗ್‌ ಬಾಸ್‌ 12 ನೇ ಆವೃತ್ತಿಯ ಆರಂಭದ ದಿನಾಂಕ ಪ್ರಕಟಿಸಿದರು.

ಕಳೆದ ಬಾರಿ ಬಿಗ್ ಬಾಸ್ ಕನ್ನಡ ಸೀಸನ್‌- 11 ಸೆ.29ರಂದು ಆರಂಭವಾಗಿತ್ತು. ಈ ಬಾರಿ ಒಂದು ದಿನ ಮುಂಚೆಯೇ ಹೊಸ ಆವೃತ್ತಿ ಆರಂಭವಾಗಲಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪೂರ್ಣಗೊಂಡಿದ್ದು, ಕೆಲವರ ಆಯ್ಕೆ ಬಾಕಿಯಿದೆ ಎಂದು ತಿಳಿದುಬಂದಿದೆ.

ಈ ಹಿಂದಿನ ಸೀಸನ್‌ನಲ್ಲಿ ಸುದೀಪ್ ಅವರು “ಇದೇ ನನ್ನ ಕೊನೆಯ ಬಿಗ್ ಬಾಸ್ ಕಾರ್ಯಕ್ರಮ” ಎಂದು ಘೋಷಿಸಿದ್ದರು. ಕೊನೆಗೆ ಆಯೋಜಕರ ಮನವೊಲಿಕೆ ನಂತರ ಇದೀಗ ಮತ್ತೆ ನಿರೂಪಕರಾಗಿ ಬಿಗ್‌ಬಾಸ್‌ ವೇದಿಕೆ ಏರಲಿದ್ದಾರೆ. ಅಲ್ಲದೇ ಸೀಸನ್ -15ವರೆಗೂ ನಿರೂಪಣೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಗ್ ಬಾಸ್ ಕನ್ನಡ ಸೀಸನ್ -12 ಪ್ರಾರಂಭಕ್ಕೆ ಆ ಮೂಲಕ ದಿನಗಣನೆ ಶುರುವಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ, ಸೆಟ್‌ ಹೇಗಿರಲಿದೆ, ನಿಯಮಗಳು ಹೇಗಿರಲಿವೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

Read More
Next Story