KIADB SCAM | ಮಲ್ಲಿಕಾರ್ಜುನ ಖರ್ಗೆ ಪುತ್ರಗೆ ಕೆಐಎಡಿಬಿ ಭೂಮಿ ಮಂಜೂರು; ಬಿಜೆಪಿ ಆರೋಪ, ಸಚಿವ ಸಮರ್ಥನೆ
x

KIADB SCAM | ಮಲ್ಲಿಕಾರ್ಜುನ ಖರ್ಗೆ ಪುತ್ರಗೆ ಕೆಐಎಡಿಬಿ ಭೂಮಿ ಮಂಜೂರು; ಬಿಜೆಪಿ ಆರೋಪ, ಸಚಿವ ಸಮರ್ಥನೆ

ನಾಗರಿಕ ಸೌಲಭ್ಯಗಳಿಗೆ (ಸಿಎ) ಮೀಸಲಾದ 45.94 ಎಕರೆಯಲ್ಲಿ ಖರ್ಗೆ ಅವರ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಐದು ಎಕರೆ ಮಂಜೂರು ಮಾಡಲಾಗಿದೆ ಎಂದು ಲಹರ್‌ ಸಿಂಗ್‌ ಹೇಳಿದ್ದಾರೆ.


ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದ ಬಳಿಕ ಈಗ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಹೊಸ ಭೂ ವಿವಾದವೊಂದರಲ್ಲಿ ಸಿಲುಕಿದೆ. ಇದು ಬಿಜೆಪಿಯ ಆರೋಪ ಮತ್ತು ಕಾಂಗ್ರೆಸ್‌ನ ಸಮರ್ಥನೆಗಳ ಹೊಸ ವಾಗ್ವಾದಕ್ಕೆ ಕಾರಣವಾಗಿದೆ.

ಬೆಂಗಳೂರು ಸಮೀಪದ ‘ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌’ನಲ್ಲಿ ಭೂಮಿ ಹಂಚಿಕೆ ಮಾಡಿಸಲು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಇದೇ ಮಾರ್ಚ್‌ನಲ್ಲಿ ಒಪ್ಪಿಗೆ ನೀಡಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿ ಪಡೆಯಲು ಖರ್ಗೆ ಕುಟುಂಬ ಯಾವಾಗ ‘ಏರೋಸ್ಪೇಸ್‌ ಉದ್ಯಮಿಗಳಾದರು? ಸ್ವಹಿತಾಸಕ್ತಿ ಸಂಘರ್ಷಕ್ಕೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಅವಕಾಶ ಮಾಡಿಕೊಟ್ಟಿದೆ’ ಎಂದು ಬಿಜೆಪಿ ಟೀಕಾಸ್ತ್ರ ಎಸೆದಿದೆ. ಜತೆಗೆ "ಕುಟುಂಬದ ಟ್ರಸ್ಟಿನಲ್ಲಿ ಖರ್ಗೆ, ಅವರ ಪತ್ನಿ ರಾಧಾಬಾಯಿ ಖರ್ಗೆ, ಅವರ ಅಳಿಯನೂ ಆಗಿರುವ ಗುಲ್ಬರ್ಗ ಸಂಸದ ರಾಧಾಕೃಷ್ಣ, ಪುತ್ರ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಮತ್ತೊಬ್ಬ ಮಗ ರಾಹುಲ್ ಖರ್ಗೆ ಟ್ರಸ್ಟಿಗಳಾಗಿದ್ದಾರೆ," ಎಂಬ ಮಾಹಿತಿಯನ್ನೂ ಬಿಜೆಪಿ ನಾಯಕ ಲೆಹರ್‌ ಸಿಂಗ್‌ ಬಹಿರಂಗಗೊಳಿಸಿದ್ದಾರೆ.

ಆದರೆ, ಈ ಬಗ್ಗೆ ಸಮರ್ಥನೆ ನೀಡಿರುವ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ, "ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕ್ ನಲ್ಲಿ ಸಿ.ಎ. ನಿವೇಶನವನ್ನು ಕಾನೂನಿನ ಪ್ರಕಾರವೇ ನಿಗದಿತ ಬೆಲೆಗೆ ಕೊಡಲಾಗಿದೆ. ಅವರು ಅಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಬಿಜೆಪಿ ನಾಯಕ ಲೆಹರ್ ಸಿಂಗ್ ಆರೋಪಿಸಿರುವಂತೆ ಯಾವ ನಿಯಮವೂ ಉಲ್ಲಂಘನೆ ಆಗಿಲ್ಲ" ಎಂದು ಹೇಳಿದ್ದಾರೆ.

ಸೋಮವಾರ ಮಾತನಾಡಿದ ಸಚಿವರು, `ರಾಹುಲ್ ಖರ್ಗೆ ಅವರು ಐಐಟಿ ಪದವೀಧರರಾಗಿದ್ದಾರೆ. ಅವರ ಕುಟುಂಬವು ನಾನಾ ಬಗೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಕೆಐಎಡಿಬಿ ನಿಯಮಗಳ ಪ್ರಕಾರ ಸಿ.ಎ ನಿವೇಶನಗಳಲ್ಲಿ ಆರ್ ಅಂಡ್‌ ಡಿ ಕೇಂದ್ರಗಳು, ಉತ್ಕೃಷ್ಟತಾ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಬ್ಯಾಂಕು, ಆಸ್ಪತ್ರೆ, ಹೋಟೆಲ್, ಪೆಟ್ರೋಲ್ ಬಂಕ್, ಕ್ಯಾಂಟೀನ್, ವಸತಿ ಸೌಲಭ್ಯ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶವಿದೆ. ಆಸಕ್ತರು ಯಾರು ಬೇಕಾದರೂ ಇದಕ್ಕೆ ಪ್ರಯತ್ನಿಸಬಹುದು. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಶಿಫಾರಸಿನ ನಂತರವಷ್ಟೇ ಇವುಗಳ ಹಂಚಿಕೆಯಾಗುತ್ತದೆ. ಏರೋಸ್ಪೇಸ್ ಪಾರ್ಕಿನಲ್ಲಿ ರಾಹುಲ್ ಅವರಿಗೆ ಕೈಗಾರಿಕಾ ನಿವೇಶನವನ್ನೇನೂ ಕೊಟ್ಟಿಲ್ಲ. ಬದಲಿಗೆ, ಸಿ.ಎ.ನಿವೇಶನವನ್ನು ಆರ್ ಆ್ಯಂಡ್ ಡಿ ಕೇಂದ್ರ ಸ್ಥಾಪನೆಗಾಗಿ ನಿಗದಿತ ಬೆಲೆಗೇ ಕೊಡಲಾಗಿದೆ. ಇದರಲ್ಲಿ ಅವರಿಗೆ ಯಾವ ರಿಯಾಯಿತಿಯನ್ನೂ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

"ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೈಗಾರಿಕಾ ಪ್ರದೇಶದಲ್ಲೇ 116 ಎಕರೆಯನ್ನು ಬರೀ 50 ಕೋಟಿ ರೂ.ಗೆ ಕೊಡಲಾಗಿದೆ. ಅದರಿಂದ 137 ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗಿದೆ. ಲೆಹರ್ ಸಿಂಗ್ ಅವರು ಈ ಬಗ್ಗೆಯೂ ಚಕಾರ ಎತ್ತಬಹುದಲ್ಲವೇ" ಎಂದು ಅವರು ಪ್ರಶ್ನಿಸಿದ್ದಾರೆ.

ಹಿಂದೆಲ್ಲ ಕೆಐಎಡಿಬಿ ಮಂಡಳಿಯೇ ಸಿ.ಎ. ನಿವೇಶನಗಳನ್ನು ಹಂಚುತ್ತಿತ್ತು. ಆದರೆ, ನಾನು ಸಚಿವನಾದ ಮೇಲೆ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಅನುಮೋದನೆ ನೀಡುವ ಹಾಗೆ ಪಾರದರ್ಶಕ ವ್ಯವಸ್ಥೆ ಜಾರಿ‌ ಮಾಡಲಾಗಿದೆ. ಅಲ್ಲದೆ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟರಿಗೆ ಶೇ 24.10ರಷ್ಟು ಮೀಸಲಾತಿ‌ ಕಲ್ಪಿಸಲಾಗಿದೆ. ಲೆಹರ್ ಸಿಂಗ್ ಈ ಸತ್ಯವನ್ನು ಅರಿತು ಮಾತನಾಡುವುದು ಒಳ್ಳೆಯದು ಎಂದೂ ಅವರು ಹೇಳಿದ್ದಾರೆ.

ಲೆಹರ್‌ ಸಿಂಗ್‌ ಆರೋಪ

"ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಭೂಮಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಹಂಚಿಕೆ ಮಾಡಿರುವುದು ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಅಲ್ಲವೇ" ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ಲೆಹರ್ ಸಿಂಗ್‌ ಸಿರೋಯಾ ಪ್ರಶ್ನಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಲಹರ್‌ ಸಿಂಗ್‌, "‘ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌’ನಲ್ಲಿ ಭೂಮಿ ಹಂಚಿಕೆ ಮಾಡಲು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾರ್ಚ್‌ ತಿಂಗಳಲ್ಲಿ ಒಪ್ಪಿಗೆ ನೀಡಿದ್ದಾರೆ. ನಾಗರಿಕ ಸೌಲಭ್ಯಗಳಿಗೆ (ಸಿಎ) ಮೀಸಲಾದ 45.94 ಎಕರೆಯಲ್ಲಿ ಖರ್ಗೆ ಅವರ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಐದು ಎಕರೆ ಮಂಜೂರು ಮಾಡಲಾಗಿದೆ. ಖರ್ಗೆ, ಅವರ ಪತ್ನಿ ರಾಧಾಬಾಯಿ ಖರ್ಗೆ, ಅವರ ಅಳಿಯನೂ ಆಗಿರುವ ಗುಲ್ಬರ್ಗ ಸಂಸದ ರಾಧಾಕೃಷ್ಣ, ಪುತ್ರ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಮತ್ತೊಬ್ಬ ಮಗ ರಾಹುಲ್ ಖರ್ಗೆ ಟ್ರಸ್ಟಿಗಳಾಗಿದ್ದಾರೆ’ ಎಂದು ಲಹರ್‌ ಸಿಂಗ್‌ ಹೇಳಿದ್ದಾರೆ.

‘ಅಕ್ರಮ ಹಂಚಿಕೆಯ ವಿಷಯ ಆರ್‌ಟಿಐ ಕಾರ್ಯಕರ್ತನ ಮೂಲಕ ಗೌರವಾನ್ವಿತ ರಾಜ್ಯಪಾಲರ ಕಚೇರಿಗೂ ತಲುಪಿದೆ. ಮೈಸೂರಿನ ವಿವಾದಿತ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟು ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ, ಖರ್ಗೆ ಕುಟುಂಬವೂ ಅಕ್ರಮವಾಗಿ ಪಡೆದ ಭೂಮಿ ಬಿಟ್ಟು ಕೊಡಬೇಕಾಗುತ್ತದೆ’ ಎಂದಿದ್ದಾರೆ.

Read More
Next Story