ಮಲ್ಲಿಕಾರ್ಜುನ ಖರ್ಗೆ ಅಲ್ಲದಿದ್ದರೆ ಕಲಬುರಗಿ ಕಾಂಗ್ರೆಸ್‌ ಅಭ್ಯರ್ಥಿ ಯಾರು? ಚರ್ಚೆ ಶುರು!
x

ಮಲ್ಲಿಕಾರ್ಜುನ ಖರ್ಗೆ ಅಲ್ಲದಿದ್ದರೆ ಕಲಬುರಗಿ ಕಾಂಗ್ರೆಸ್‌ ಅಭ್ಯರ್ಥಿ ಯಾರು? ಚರ್ಚೆ ಶುರು!

ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ರಾಜಕೀಯ ವಲಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಯಕ್ಷಪ್ರಶ್ನೆಯಾಗಿದೆ. ಕಾರಣ ಇಷ್ಟೇ. ಕರ್ನಾಟಕ ಕಾಂಗ್ರೆಸ್ ಈ ಪ್ರತಿಷ್ಠಿತ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದೆ.


ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ರಾಜಕೀಯ ವಲಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಯಕ್ಷಪ್ರಶ್ನೆಯಾಗಿದೆ. ಕಾರಣ ಇಷ್ಟೇ. ಕರ್ನಾಟಕ ಕಾಂಗ್ರೆಸ್ ಈ ಪ್ರತಿಷ್ಠಿತ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದೆ.

ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. ಈ ವರದಿಗಳು ಕರ್ನಾಟಕದ ಕಾಂಗ್ರೆಸ್ ನಾಯಕರಲ್ಲಿ ಒಂದು ರೀತಿಯ ಆತಂಕವನ್ನು ಉಂಟುಮಾಡಿದೆ. ಕಾಂಗ್ರೆಸ್ ನಾಯಕರು ಈ ಬೆಳವಣಿಗೆಯನ್ನು ನಿರೀಕ್ಷಿಸಿದ್ದರೂ, ಕೆಪಿಸಿಸಿ, ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಿರುವುದು ಅನೇಕ ಊಹೆಗಳಿಗೆ ಕಾರಣವಾಗಿದೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡಲು ಕಲಬುರಗಿಗೆ ತೆರಳಿದ್ದ ಪಕ್ಷದ ಪದಾಧಿಕಾರಿಗಳ ತಂಡ ಮಲ್ಲಿಕಾರ್ಜುನ ಖರ್ಗೆ ಎಂಬ ಒಂದೇ ಹೆಸರಿನೊಂದಿಗೆ ಮರಳಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈ ಸ್ಥಾನಕ್ಕೆ ಸ್ಪರ್ಧಿಸುವಂತೆ ಎಐಸಿಸಿ ಅಧ್ಯಕ್ಷರ ಮೇಲೆ ಒತ್ತಡ ತರಲಾಗುತ್ತಿದೆ ಎಂಬುದು ಇದರಿಂದ ಅರ್ಥವಾಗುತ್ತದೆ.

ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿದರೆ, ರಾಷ್ಟ್ರದ ಇತರೆಡೆಗಳಲ್ಲಿ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದ ಬಿಜೆಪಿ ಅವರನ್ನು ಕಲಬುರಗಿಗೆ ಕಟ್ಟಿಹಾಕಿದರೆ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಕಾರ್ಯಕಾರಿ ಮಂಡಳಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸದಂತೆ ಕೋರಿದೆ. ಖರ್ಗೆ ಕೂಡ ಈ ಮನವಿಗೆ ಸ್ಪಂದಿಸಿರುವುದಾಗಿ ದ ಫೆಡರಲ್‌ ನ ದೆಹಲಿಯ ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷರು ಸ್ಪರ್ಧಿಸುವಂತೆ ಕರ್ನಾಟಕದ ಪಕ್ಷದ ಹಲವು ಹಿರಿಯ ಮುಖಂಡರು ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಆದರೆ, ಅಂತಿಮವಾಗಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ಸ್ಪರ್ಧಿಸದಿರುವ ನಿರ್ಧಾರವನ್ನು ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಡುವುದು ಉತ್ತಮ ಎಂದು ನಾಯಕರು ತೀರ್ಮಾನಿಸಿದ್ದಾರೆ.

ಇದಕ್ಕಾಗಿಯೇ ನಿಖರವಾಗಿ, ಕಾಂಗ್ರೆಸ್ ಚುನಾವಣಾ ಸಮಿತಿಯು (CEC) ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರಕಟಿಸಿ, ಉಳಿದ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿದೆ. ವಿಶೇಷವಾಗಿ ಕಲಬುರಗಿಯ ಅಭ್ಯರ್ಥಿಯ ಬಗ್ಗೆ ಯಾವುದೇ ಸುಳಿವು ನೀಡುತ್ತಿಲ್ಲ. ಒಂದು ಸಂಗತಿಯಂತೂ ಸ್ಪಷ್ಟ. ಮಲ್ಲಿಕಾರ್ಜುನ ಖರ್ಗೆ ಅವರು ದೇಶಾದ್ಯಂತ ವ್ಯಾಪಕ ಪ್ರಚಾರ ನಡೆಸಬೇಕಿರುವ ಕಾರಣ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

"ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ಖರ್ಗೆಯವರದಾಗಿದೆ. ಇದು ಅವರ ಪ್ರತಿಷ್ಠೆಯ ಪ್ರಶ್ನೆ ಕೂಡ. ಹಾಗಾಗಿ ಪ್ರತಿಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಅವರು ಅಳೆದು ತೂಗಿ ಮಾಡುತ್ತಿದ್ದಾರೆ. ಅದರಲ್ಲೂ ತಮ್ಮ ಸ್ವತ ಕ್ಷೇತ್ರವಾದ ಕಲಬುರಗಿ ಹಾಗೂ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿಯೂ ಅವರದಾಗಿದೆ” ಎಂದು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಈ ನಡುವೆಯೇ, ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಲಬುರಗಿ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ರಾಧಾಕೃಷ್ಣ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವುದರಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆ ಸ್ಥಾನವನ್ನು ಪಡೆದುಕೊಳ್ಳಲು ವೈಯಕ್ತಿಕ ಆಸಕ್ತಿ ವಹಿಸುವುದು ಸಹಜ ಎಂಬ ನಂಬಿಕೆ ಇದೆ.. 2019 ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯ ಉಮೇಶ್ ಯಾದವ್ ವಿರುದ್ಧ ಸೋತಿದ್ದರಿಂದ, ಕಲಬುರಗಿ ಕ್ಷೇತ್ರವನ್ನು ಮರಳಿ ಪಡೆಯುವುದು ಖರ್ಗೆಯವರಿಗೆ ಅತಿ ಮುಖ್ಯವಾಗಿದೆ.

ಒಂದು ವೇಳೆ ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣೆಗೆ ಸ್ಪರ್ಧಿಸುವಂತೆ ತಮ್ಮನ್ನು ಒತ್ತಾಯಿಸಿದರೆ, ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಮೂಲಕ ಕಲಬುರಗಿ ಕ್ಷೇತ್ರಕ್ಕೆ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರ ಹೆಸರನ್ನು ಮುಂದಿಡುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

2019ರಲ್ಲಿ ಬಿಜೆಪಿ ಆಕ್ರಮಿಸಿಕೊಂಡಿದ್ದ ತಮ್ಮ ಭದ್ರಕೋಟೆಯನ್ನು ಕಳೆದುಕೊಳ್ಳಲು ಖರ್ಗೆಯವರಿಗೆ ಇಷ್ಟವಿಲ್ಲ. ಬಿಜೆಪಿ ಸೇರುವ ಮುನ್ನ ಉಮೇಶ್ ಜಾಧವ್, ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದರು. ಬಿಜೆಪಿ ಗೆ ಸೇರುವ ಮುನ್ನ ಅಂದರೆ 2019ರ ಮಾರ್ಚ್‌ನಲ್ಲಿ ಉಮೇಶ್‌ ಜಾಧವ್‌ ಅವರು ಕಾಂಗ್ರೆಸ್‌ನ ವಿಧಾನ ಸಭಾ ಸದಸ್ಯತ್ವಕ್ಕೆ ರಾಜಿನಾಮಿ ನೀಡಿದ್ದರು. ಅವರು ರಾಜಿನಾಮೆ ನೀಡುವಂತೆ ಮಾಡಿದ್ದು ಬಿಜೆಪಿಯವರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಉಮೇಶ್ ಜಾಧವ್ ಒಂದು ಕಾಲದಲ್ಲಿ ಖರ್ಗೆ ಕುಟುಂಬಕ್ಕೆ ಆಪ್ತರಾಗಿದ್ದರು. ಕಾಂಗ್ರೆಸ್ ತೊರೆಯುವ ಅವರ ನಿರ್ಧಾರವು ಪ್ರಿಯಾಂಕ್ ಖರ್ಗೆಯವರ ನಿರಂಕುಶಾಧಿಕಾರದ ಶೈಲಿಯ ಕಾರ್ಯವೈಖರಿ ಎಂಬುದು ಜಾಧವ್‌ ಅವರ ಹೇಳಿಕೆ. ವೃತ್ತಿಯಲ್ಲಿ ವೈದ್ಯರಾಗಿರುವ ಜಾಧವ್ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದರು. ಸಮುದಾಯದ ಬೆಂಬಲ ಮತ್ತು ಬಿಜೆಪಿ ಅಲೆಯಿಂದ ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸೆಣೆಸಿ 95,452 ಮತಗಳ ಭಾರೀ ಅಂತರದಿಂದ ವಿಜಯಗಳಿಸಿದ್ದರು.

2024 ರ ಚುನಾವಣೆಯಲ್ಲಿ ಉಮೇಶ್ ಜಾಧವ್ ಅವರಿಗೆ ಎರಡನೇ ಅವಕಾಶ ನೀಡಲು ಪಕ್ಷವು ನಿರ್ಧರಿಸಿದೆ, ಅವರು ಕಲಬುರಗಿಯಲ್ಲಿ ಖರ್ಗೆ ಕುಟುಂಬದ ಯಾರೇ ನಿಂತರೂ ಅವರಿಗೆ ಕಠಿಣ ಸ್ಪರ್ಧೆ ನೀ ಡುತ್ತಾರೆ ಎಂಬುದು ಬಿಜೆಪಿ ನಾಯಕರ ಅನಿಸಿಕೆ.

ಮಲ್ಲಿಕಾರ್ಜುನ ಖರ್ಗೆ ಅವರನ್ನು “ಸೋಲಿಲ್ಲದ ಸರದಾರ” ಎಂದೇ ಪರಿಗಣಿಸಲಾಗಿದೆ, ಖರ್ಗೆ ಅವರು ಕಲಬುರಗಿ ಜಿಲ್ಲೆಯ ಗುರ್ಮಿಟ್ಕಲ್‌ ಕ್ಷೇತ್ರದಿಂದ ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2019 ರಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸೋಲುವ ಮೊದಲು ಲೋಕಸಭೆಯಲ್ಲಿ (2009 ಮತ್ತು 2014) ಎರಡು ಬಾರಿ ಕಲಬುರಗಿಯನ್ನು ಪ್ರತಿನಿಧಿಸಿದ್ದರು.

ಕಲಬುರಗಿ ಲೋಕಸಭಾ ಕ್ಷೇತ್ರವು ಒಂದರ್ಥದಲ್ಲಿ ಕಾಂಗ್ರೆಸ್ ನ ಭದ್ರ ಕೋಟೆ. ಈ ಕ್ಷೇತ್ರದ ವ್ಯಾಪ್ತಿಗೆ ಅಫಜಲಪುರ, ಜೇವರ್ಗಿ, ಗುರ್ಮಿಟ್ಕಲ್, ಚಿತ್ತಾಪುರ, ಸೇಡಂ, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಮತ್ತು ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಗುರ್ಮಿಟ್ಕಲ್ (ಜೆಡಿಎಸ್‌ನ ನಾಗನಗೌಡ ಕುಂದಕೂರ್) ಮತ್ತು ಕಲಬುರಗಿ ಗ್ರಾಮಾಂತರ (ಬಿಜೆಪಿಯ ಬಸವರಾಜ ಮಟ್ಟಿಮಡ್) ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಆರು ಶಾಸಕರು ಕಾಂಗ್ರೆಸ್‌ ಪಕ್ಷದವರು.

1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ 1996 ರವರೆಗೆ ಈ ಕ್ಷೇತ್ರ ಮೇಲೆ ಕಾಂಗ್ರೆಸ್‌ ತನ್ನ ಹಿಡಿತ ಸಾಧಿಸಿತ್ತು. 1999 ರಲ್ಲಿ ಕಾಂಗ್ರೆಸ್ ಮತ್ತೆ ಈ ಕ್ಷೇತ್ರವನ್ನು ಕಬ್ಜಾ ಮಾಡಿತಲ್ಲದೆ 2019 ರವರೆಗೂ ಪ್ರಾಬಲ್ಯವನ್ನು ಮುಂದುವರೆಸಿತು.

ಆದರೆ, ಮಲ್ಲಿಕಾರ್ಜುನ ಖರ್ಗೆ- ಕಲಬುರಗಿ ಮತ್ತು ಹೈದರಾಬಾದ್-ಕರ್ನಾಟಕ ಪ್ರದೇಶದ ಅವಿರೋಧ ನಾಯಕರಾಗಿ ಉಳಿದಿದ್ದಾರೆ. ಇದೀಗ ಕಲಬುರಗಿಯಲ್ಲಿ ಮತ್ತೆ ತನ್ನ ಹಿಡಿತ ಸಾಧಿಸುವುದು ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪರಂಪರೆಯನ್ನು ಮುಂದುವರಿಸುತ್ತಾರೆಯೇ? ಎಂಬುದು ಹೈದರಾಬಾದ್-ಕರ್ನಾಟಕ ಭಾಗದ ಮತದಾರರ ಪ್ರಶ್ನೆಯಾಗಿದೆ.

Read More
Next Story