
ಬೆಂಗಳೂರು ಪೊಲೀಸ್ ಇಲಾಖೆಗೆ ಅಂಟಿದ 'ಖಾಕಿ' ಕಳಂಕ: 10 ತಿಂಗಳಲ್ಲಿ 124 ಸಿಬ್ಬಂದಿ ಅಮಾನತು..!
ಕಳೆದ 10 ತಿಂಗಳ ಅವಧಿಯಲ್ಲಿ ಬರೋಬ್ಬರಿ 124 ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿರುವುದು ಇಲಾಖೆಯಲ್ಲಿನ ಶಿಸ್ತು, ನೈತಿಕತೆ ಮತ್ತು ಕರ್ತವ್ಯ ಪ್ರಜ್ಞೆಯ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.
ದೇಶದ ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಎಂದೇ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಇಲಾಖೆಯು ಇತ್ತೀಚೆಗಿನ ಕೆಲವು ಘಟನೆಗಳಿಂದ ತೀವ್ರ ಮುಜುಗರಕ್ಕೀಡಾಗಿದೆ. ನಾಗರಿಕರ ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯೇ ಈಗ ಅಲುಗಾಡುವಂತಾಗಿದೆ. "ಜನಸ್ನೇಹಿ ಪೊಲೀಸ್" ಎಂಬ ಬೋರ್ಡ್‌ಗಳನ್ನು ಠಾಣೆಯ ಮುಂದೆ ಹಾಕಿಕೊಂಡರೂ, ಒಳಗೆ ನಡೆಯುತ್ತಿರುವ ವ್ಯವಹಾರಗಳು ಮಾತ್ರ ಬೆಚ್ಚಿಬೀಳಿಸುವಂತಿವೆ. ಕಳೆದ 10 ತಿಂಗಳ ಅವಧಿಯಲ್ಲಿ ಬರೋಬ್ಬರಿ 124 ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿರುವುದು ಇಲಾಖೆಯಲ್ಲಿನ ಶಿಸ್ತು, ನೈತಿಕತೆ ಮತ್ತು ಕರ್ತವ್ಯ ಪ್ರಜ್ಞೆಯ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ. ಅಲ್ಲದೇ, ಇಲಾಖೆಯಲ್ಲಿನ ಶಿಸ್ತು ಮತ್ತು ಪ್ರಾಮಾಣಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಅಮಾನತು ಪರ್ವವು ಕೇವಲ ಕೆಳಹಂತದ ಸಿಬ್ಬಂದಿಗೆ ಸೀಮಿತವಾಗಿಲ್ಲ. ಬದಲಿಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಇನ್ಸ್‌ಪೆಕ್ಟರ್‌ಗಳು ಮತ್ತು ಸಬ್ ಇನ್ಸ್‌ಪೆಕ್ಟರ್‌ಗಳೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಕಳೆದ 10 ತಿಂಗಳಲ್ಲಿ ಭ್ರಷ್ಟಾಚಾರ, ಕರ್ತವ್ಯಲೋಪ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ಒಟ್ಟು 124 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 10 ಇನ್ಸ್‌ಪೆಕ್ಟರ್‌ಗಳು, 16 ಸಬ್ ಇನ್ಸ್‌ಪೆಕ್ಟರ್‌ಗಳು, 16 ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳು ಮತ್ತು 82 ಕಾನ್ಸ್‌ಟೇಬಲ್‌ಗಳು ಅಮಾನತುಗೊಂಡಿದ್ದಾರೆ. ಈ ಅಂಕಿಅಂಶಗಳು ಇಲಾಖೆಯ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ಅಥವಾ ಅಶಿಸ್ತು ಹೇಗೆ ವ್ಯಾಪಿಸಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ. 82 ಕಾನ್ಸ್‌ಟೇಬಲ್ ಹಂತದ ಸಿಬ್ಬಂದಿ ಹಾಗೂ 42 ಅಧಿಕಾರಿ ಹಂತದ ಸಿಬ್ಬಂದಿ ಶಿಸ್ತು ಕ್ರಮಕ್ಕೆ ಗುರಿಯಾಗಿದ್ದಾರೆ. ಇವರಲ್ಲಿ ಶೇ.90 ರಷ್ಟು ಪ್ರಕರಣಗಳು ಕರ್ತವ್ಯಲೋಪಕ್ಕೆ ಸಂಬಂಧಿಸಿದ್ದರೆ, ಉಳಿದವು ನೇರವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಗಂಭೀರ ಪ್ರಕರಣಗಳಾಗಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪೊಲೀಸ್ ಇಲಾಖೆಗೆ ಮುಜುಗರ ತಂದ ಇತ್ತೀಚೆಗಿನ ಪ್ರಮುಖ ಪ್ರಕರಣಗಳು
1. ಜೆ.ಜೆ. ನಗರ ಡ್ರಗ್ಸ್ ಮಾಫಿಯಾ ಲಿಂಕ್
ಡ್ರಗ್ಸ್ ಮುಕ್ತ ಬೆಂಗಳೂರು ನಿರ್ಮಾಣದ ಗುರಿ ಹೊಂದಿರುವ ಇಲಾಖೆಗೆ ಜೆ.ಜೆ. ನಗರ ಪೊಲೀಸ್ ಠಾಣೆಯ ಘಟನೆ ದೊಡ್ಡ ಪೆಟ್ಟು ನೀಡಿದೆ. ಡ್ರಗ್ಸ್ ಪೆಡ್ಲರ್‌ಗಳಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಇನ್ಸ್‌ಪೆಕ್ಟರ್ ಸೇರಿದಂತೆ ಆ ಠಾಣೆಯ ಬರೋಬ್ಬರಿ 11 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ರಕ್ಷಣೆ ನೀಡಬೇಕಾದವರೇ ಮಾಫಿಯಾದ ಏಜೆಂಟರಂತೆ ವರ್ತಿಸಿದ್ದು ವ್ಯವಸ್ಥೆಯ ಅಣಕವಾಗಿದೆ.
2. 7.11 ಕೋಟಿ ರೂ. ದರೋಡೆ ಪ್ರಕರಣ
ರಾಜಧಾನಿಯನ್ನೇ ಬೆಚ್ಚಿಬೀಳಿಸಿದ್ದ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಸ್ವತಃ ಪೊಲೀಸ್ ಕಾನ್ಸ್‌ಟೇಬಲ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಎಂಬುವವರು ಈ ಕೃತ್ಯದಲ್ಲಿ ಶಾಮೀಲಾಗಿದ್ದು, ಕಳ್ಳರನ್ನು ಹಿಡಿಯಬೇಕಾದವರೇ ಕಳ್ಳರ ಜೊತೆ ಸೇರಿ ದರೋಡೆಗೆ ಇಳಿದಿದ್ದು ಇಲಾಖೆಗೆ ತೀವ್ರ ಮುಜುಗರ ತಂದೊಡ್ಡಿತ್ತು. ಹಗಲು ದರೋಡೆ ಯೊಂದರ ಆರೋಪಿಗಳಿಗೆ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಟ್ರೈನಿಂಗ್ ನೀಡಿದ್ದರು! 7.11 ಕೋಟಿ ರೂ. ದರೋಡೆ ಮಾಡಿದ ಆರೋಪಿಗಳಿಗೆ ಈ ಪೊಲೀಸ್ ಸಿಬ್ಬಂದಿಯೇ ಮಾರ್ಗದರ್ಶಕನಾಗಿದ್ದ ವಿಷಯ ಬಯಲಿಗೆ ಬಂದ ನಂತರ ಆತನನ್ನು ಅಮಾನತುಗೊಳಿಸಲಾಗಿದೆ.
3. ಪೋಕ್ಸೋ ಪ್ರಕರಣದಲ್ಲಿ ಲಂಚ
ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಪೊಲೀಸರ ಆದ್ಯ ಕರ್ತವ್ಯ. ಆದರೆ, ದೇವನಹಳ್ಳಿಯ ಮಹಿಳಾ ಪಿಎಸ್ಐ ಜಗದೇವಿ ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಟ್ರ್ಯಾಪ್‌ನಿಂದ ತಪ್ಪಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ. ರಕ್ಷಣೆ ನೀಡಬೇಕಾದ ಮಹಿಳಾ ಅಧಿಕಾರಿಯೇ ಹೀಗೆ ನಡೆದುಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
4. ಮನುಷ್ಯತ್ವಕ್ಕೆ ಮಸಿ
ಬೆಳ್ಳಂದೂರು ಠಾಣೆಯ ಮೂವರು ಪೊಲೀಸರು ನಡೆದುಕೊಂಡ ರೀತಿ ಅಮಾನವೀಯತೆಯ ಪರಮಾವಧಿ. ಮೃತಪಟ್ಟ ಮಗಳ ಶವವನ್ನು ಪಡೆಯಲು ಬಂದ ನೊಂದ ತಂದೆಯ ಬಳಿಯೇ ಈ ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದುಃಖದಲ್ಲಿದ್ದ ಕುಟುಂಬವನ್ನು ಸುಲಿಗೆ ಮಾಡಲು ಮುಂದಾದ ಈ ಮೂವರನ್ನು ಅಮಾನತು ಮಾಡಲಾಗಿದೆ.
5. ಇಂದಿರಾನಗರದ 'ವಸೂಲಿ' ದಂಧೆ
ಇಂದಿರಾನಗರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ, ಅಂಗವಿಕಲ ವ್ಯಕ್ತಿಯೊಬ್ಬರ ಬಳಿ ಹಣ ಸುಲಿಗೆ ಮಾಡಲು ಯತ್ನಿಸಿದ್ದರು. ಹಣ ಕೊಡದಿದ್ದರೆ ಸುಳ್ಳು ಡ್ರಗ್ಸ್ ಕೇಸ್ ಹಾಕಿ ಒಳಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಈ ಘಟನೆ ಪೊಲೀಸರ ಮೇಲಿನ ನಂಬಿಕೆಯನ್ನು ಬುಡಮೇಲು ಮಾಡುವಂತಿದೆ.
6. ವರ್ತೂರು ಠಾಣೆಯಲ್ಲಿ ಹಲ್ಲೆ
ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗೆಂದು ಕರೆತಂದ ಮಹಿಳೆಯ ಮೇಲೆ ವರ್ತೂರು ಠಾಣೆಯ ಮೂವರು ಸಿಬ್ಬಂದಿ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಕಾನೂನು ಪಾಲಕರೇ ಕಾನೂನನ್ನು ಕೈಗೆತ್ತಿಕೊಂಡ ಈ ಪ್ರಕರಣದಲ್ಲಿ ಮೂವರನ್ನು ಅಮಾನತುಗೊಳಿಸಲಾಗಿದೆ.
7. ದರೋಡೆ ಕೇಸ್ನಲ್ಲಿ ಇಬ್ಬರು ಪಿಎಸ್ಐಗಳು ಬಂಧನ
ಬಂಗಾರ ವ್ಯಾಪಾರಿಯನ್ನು ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಲಪಟಾಯಿಸಿದ್ದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ. ಮಾಳಪ್ಪ ಚಿಪ್ಪಲಕಟ್ಟಿ ಹಾಗೂ ಪ್ರವೀಣ್ ಕುಮಾರ್ ಬಂಧಿತ ಪಿಎಸ್ಐಗಳಾಗಿದ್ದಾರೆ. ಕಾರವಾರ ಮೂಲದ ಚಿನ್ನದ ವ್ಯಾಪಾರಿ ವಿಶ್ವನಾಥ್ ಎಂಬವರು ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ನೀಡುತ್ತಿದ್ದರು. ಪೊಲೀಸ ಅಧಿಕಾರಿಗಳು ನಕಲಿ ಗನ್ ತೋರಿಸಿ ವಿಶ್ವನಾಥ್ ಬಳಿ ಇದ್ದ ಸುಮಾರು 80ಗ್ರಾಂ ಚಿನ್ನವನ್ನು ಕಸಿದುಕೊಂಡಿದ್ದರು.
8. ಐಪಿಎಸ್ ಅಧಿಕಾರಿ ಸುಲಿಗೆ ಪ್ರಕರಣದಲ್ಲಿ ಭಾಗಿ
ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ.ಜೋಶಿ ಭಾಗಿಯಾಗಿದ್ದರು. ಸುಲಿಗೆ ಕೃತ್ಯದಲ್ಲಿ ಮಾಜಿ ಹೆಡ್‌ಕಾನ್ಸ್‌ಟೆಬಲ್ ಜಿ ನಿಂಗಪ್ಪ ಮೊಬೈಲ್ ಪರಿಶೀಲನೆ ವೇಳೆ ಲೋಕಾಯುಕ್ತ ಎಸ್‌ಪಿಯಾಗಿದ್ದ ಶ್ರೀನಾಥ್ ಜೋಶಿ ಸಂಪರ್ಕ ಇರುವುದು ಪತ್ತೆಯಾಗಿತ್ತು.
'ಕಾಸಿಗಾಗಿ ಪೋಸ್ಟಿಂಗ್' ಪರಿಣಾಮ
ಪೊಲೀಸ್ ಇಲಾಖೆಯಲ್ಲಿ ಅಪರಾಧ ಮತ್ತು ಭ್ರಷ್ಟಾಚಾರ ಹೆಚ್ಚಾಗಲು ಪ್ರಮುಖ ಕಾರಣ "ವರ್ಗಾವಣೆ ದಂಧೆ" ಅಥವಾ "ಕಾಸಿಗಾಗಿ ಪೋಸ್ಟಿಂಗ್" ದಂಧೆ ಎಂಬ ಬಲವಾದ ಆರೋಪಗಳು ಕೇಳಿಬರುತ್ತಿದೆ. ಯಾವುದೇ ಒಂದು ಆಯಕಟ್ಟಿನ ಸ್ಥಾನಕ್ಕೆ ಅಥವಾ ಪ್ರಮುಖ ಪೊಲೀಸ್ ಠಾಣೆಗೆ ವರ್ಗಾವಣೆ ಬೇಕಾದರೆ ಲಕ್ಷಾಂತರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ರಾಜಕಾರಣಿಗಳಿಗೆ ಅಥವಾ ಹಿರಿಯ ಅಧಿಕಾರಿಗಳಿಗೆ ಭಾರಿ ಮೊತ್ತದ ಹಣ ನೀಡಿ ಪೋಸ್ಟಿಂಗ್ ಪಡೆದುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.
ಒಮ್ಮೆ ಪೋಸ್ಟಿಂಗ್ ಪಡೆಯಲು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ನಂತರ, ಆ ಹಣವನ್ನು ಮರಳಿ ಗಳಿಸಲು ಅಧಿಕಾರಿಗಳು ಅಕ್ರಮ ಮಾರ್ಗಗಳನ್ನು ತುಳಿಯುತ್ತಾರೆ. ಮಧ್ಯವರ್ತಿಗಳ ಮೂಲಕ ದಂಧೆ ನಡೆಸುವುದು, ಸಂತ್ರಸ್ತರಿಂದ ಲಂಚ ವಸೂಲಿ ಮಾಡುವುದು, ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗುವುದು ಅನಿವಾರ್ಯವಾಗುತ್ತದೆ. ಈ ಕೊಂಡು-ಕೊಳ್ಳುವಿಕೆ ವ್ಯವಹಾರವು ಇಲಾಖೆಯ ನೈತಿಕತೆಯನ್ನು ಕುಸಿಯುವಂತೆ ಮಾಡಿದೆ. ಹಣವನ್ನು ಮರಳಿ ಪಡೆಯುವ ಒತ್ತಡವೇ ಅವರನ್ನು ಗಾಂಜಾ ಮಾಫಿಯಾ, ಮರಳು ದಂಧೆ, ಮತ್ತು ಸುಲಿಗೆಕೋರರ ಜೊತೆ ಕೈಜೋಡಿಸುವಂತೆ ಮಾಡುತ್ತಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ದುರ್ಬಲ ಮೇಲ್ವಿಚಾರಣೆ ಮತ್ತು ಆರ್ಥಿಕ ಒತ್ತಡಗಳು ಪೊಲೀಸರನ್ನು ಅಪರಾಧಿಗಳನ್ನಾಗಿ ಮಾಡುತ್ತಿವೆ ಎಂಬುದು ಅವರ ವಾದವಾಗಿದೆ.
ಅಕ್ರಮಗಳ ಸ್ವರೂಪ
ಅಮಾನತುಗೊಂಡ ಪೊಲೀಸರ ಮೇಲಿರುವ ಆರೋಪಗಳು ವೈವಿಧ್ಯಮಯವಾಗಿವೆ ಮತ್ತು ಗಂಭೀರವಾಗಿವೆ. ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಗಾಂಜಾ ಮಾರಾಟಗಾರರನ್ನು ಬಂಧಿಸುವ ಬದಲು, ಅವರಿಂದಲೇ ಮಾಮೂಲಿ ಪಡೆದು ಅವರಿಗೆ ರಕ್ಷಣೆ ನೀಡಲು ಮುಂದಾಗುತ್ತಿದ್ದಾರೆ. ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಬದಲು, ಆರೋಪಿಗಳಿಂದ ಹಣ ಪಡೆದು ಕೇಸ್ ಮುಚ್ಚಿಹಾಕಲು ಯತ್ನಿಸುವುದು ಮತ್ತು ಅಮಾಯಕರನ್ನು ಠಾಣೆಗೆ ಕರೆತಂದು, ಅಕ್ರಮವಾಗಿ ಬಂಧನದಲ್ಲಿಟ್ಟು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಡುವ ಮೂಲಕ ಪೊಲೀಸರು ಹಣ ಗಳಿಕೆಗೆ ಮುಂದಾಗುತ್ತಾರೆ ಎನ್ನಲಾಗಿದೆ.
ಡಿಸಿಪಿಗಳಿಗೆ ನಿಗಾವಹಿಸುವಂತೆ ತಾಕೀತು
ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರಿಗಿರುವ ನಂಬಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಗರದ ಕಾನೂನು ಮತ್ತು ಸುವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಆಯಾ ವಿಭಾಗದ ಡಿಸಿಪಿಗಳಿಗೆ ತಮ್ಮ ಕೆಳಗಿನ ಸಿಬ್ಬಂದಿಯ ಮೇಲೆ ನಿಗಾ ಇಡುವಂತೆ ತಾಕೀತು ಮಾಡಿದ್ದಾರೆ. ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ಅಕ್ರಮ ನಡೆದರೆ ಅದಕ್ಕೆ ಆಯಾ ಇನ್ಸ್‌ಪೆಕ್ಟರ್ ಮತ್ತು ಉನ್ನತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವ ಎಂಬ ಸಂದೇಶ ರವಾನಿಸಿದ್ದಾರೆ.
ಪ್ರತಿ ವಾರಕ್ಕೊಮ್ಮೆ ನಗರ ವ್ಯಾಪ್ತಿಯಲ್ಲಿ ಕನಿಷ್ಠ ಒಬ್ಬರು ಅಥವಾ ಇಬ್ಬರು ಪೊಲೀಸರ ವಿರುದ್ಧ ಕರ್ತವ್ಯಲೋಪದ ಆರೋಪಗಳು ಕೇಳಿಬರುತ್ತಲೇ ಇವೆ. ಹಿರಿಯ ಅಧಿಕಾರಿಗಳ ಬಳಿ ಸಂತ್ರಸ್ತರು ನೇರವಾಗಿ ದೂರು ನೀಡುತ್ತಿದ್ದಾರೆ. ಹೀಗಾಗಿ, ಇಲಾಖೆಯ ಗೌರವಕ್ಕೆ ಮುಕ್ಕಾಗದಂತೆ ತಡೆಯಲು ಶತಪ್ರಯತ್ನ ನಡೆಸಲಾಗುತ್ತಿದೆ. ಇಲಾಖೆಯು ಇಂತಹ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದೆ. ಕೇವಲ ಕರ್ತವ್ಯ ಲೋಪವಾದರೆ ಇಲಾಖಾ ತನಿಖೆ ನಡೆಸಲಾಗುತ್ತದೆ. ಪೊಲೀಸ್ ಸಿಬ್ಬಂದಿಯೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಜತೆಗೆ ಇಲಾಖಾ ತನಿಖೆಯನ್ನೂ ನಡೆಸಲಾಗುತ್ತದೆ. ಪೊಲೀಸರ ವಿರುದ್ಧ ಆರೋಪ ಸಾಬೀತಾದರೆ ಸೇವೆಯಿಂದ ವಜಾಗೊಳಿಸುವುದು , ಕಡ್ಡಾಯ ನಿವೃತ್ತಿ, ಅಥವಾ ವೇತನ ಬಡ್ತಿ ತಡೆಹಿಡಿಯುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಹೇಳಿದ್ದಾರೆ.
ಗೃಹ ಸಚಿವರ ಎಚ್ಚರಿಕೆ:
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಗೌರವ ಉಳಿಸಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕೇವಲ ಅಮಾನತು ಮಾಡಿದರೆ ಸಾಲದು, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಥವಾ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗುವ ಪೊಲೀಸರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ, ಡಿಸಿಪಿ ಮತ್ತು ಜಂಟಿ ಆಯುಕ್ತರು ತಮ್ಮ ಕೆಳಗಿನ ಸಿಬ್ಬಂದಿಯ ನಡವಳಿಕೆಯ ಮೇಲೆ ಕಣ್ಣಿಡಬೇಕು, ತಪ್ಪಿದ್ದಲ್ಲಿ ಮೇಲಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ದಕ್ಷತೆಗೆ ಹೆಸರಾಗಿದ್ದ ಬೆಂಗಳೂರು ಪೊಲೀಸ್ ಇಲಾಖೆಗೆ, ಕಳೆದ 10 ತಿಂಗಳಲ್ಲಿ ನಡೆದಿರುವ 124 ಅಮಾನತು ಪ್ರಕರಣಗಳು ಕಪ್ಪು ಚುಕ್ಕೆಯಾಗಿವೆ. ಭ್ರಷ್ಟಾಚಾರದ ಮೂಲವನ್ನು ಕಿತ್ತುಹಾಕದಿದ್ದರೆ, ಠಾಣೆಗಳು ವಸೂಲಿ ಕೇಂದ್ರಗಳಾಗಿ ಮತ್ತು ಪೊಲೀಸರು ಯೂನಿಫಾರ್ಮ್ ಧರಿಸಿದ ಅಪರಾಧಿಗಳಾಗಿ ಉಳಿಯುವ ಆತಂಕವಿದೆ. ಸಿಬ್ಬಂದಿಯನ್ನು ಅಮಾನತು ಮಾಡುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಕಾಸಿಗಾಗಿ ಪೋಸ್ಟಿಂಗ್ ಎಂಬ ಮೂಲ ಸಮಸ್ಯೆಯನ್ನು ನಿವಾರಿಸಿ, ಇಲಾಖೆಯಲ್ಲಿ ಪಾರದರ್ಶಕತೆ ತಂದಾಗ ಮಾತ್ರ "ಜನಸ್ನೇಹಿ ಪೊಲೀಸ್" ಎಂಬ ಕನಸು ನನಸಾಗಲು ಸಾಧ್ಯ. ಇಲ್ಲದಿದ್ದರೆ, ಸಾರ್ವಜನಿಕರು ಪೊಲೀಸ್ ಠಾಣೆಯ ಮೆಟ್ಟಿಲೇರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಸರ್ಕಾರ ಮತ್ತು ಹಿರಿಯ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಇಲಾಖೆಯನ್ನು ಶುದ್ಧೀಕರಿಸಬೇಕಿದೆ ಎಂಬ ಒತ್ತಾಯಗಳು ಕೇಳಿಬಂದಿವೆ.

