ಕೆಎಫ್‌ ಡಿ ನಿರ್ವಹಣೆ ಲೋಪ | ಶಿವಮೊಗ್ಗ ಡಿಎಚ್‌ ಒ ಕೊನೆಗೂ ಎತ್ತಂಗಡಿ
x

ಕೆಎಫ್‌ ಡಿ ನಿರ್ವಹಣೆ ಲೋಪ | ಶಿವಮೊಗ್ಗ ಡಿಎಚ್‌ ಒ ಕೊನೆಗೂ ಎತ್ತಂಗಡಿ


ಮಲೆನಾಡು ಭಾಗದಲ್ಲಿ ಆತಂಕಕ್ಕೆ ಕಾರಣವಾಗಿರುವ ಮಂಗನಕಾಯಿಲೆ (ಕೆಎಫ್ಡಿ) ನಿರ್ವಹಣೆಯ ವಿಷಯದಲ್ಲಿ ಗಂಭೀರ ಲೋಪಗಳನ್ನು ಎಸಗಿ ವಿವಾದಕ್ಕೇ ಈಡಾಗಿದ್ದ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ(ಡಿಎಚ್ ಒ) ಡಾ ರಾಜೇಶ್ ಸುರಗಿಹಳ್ಳಿ ಅವರನ್ನು ಸರ್ಕಾರ ಸ್ಥಳ ತೋರಿಸದೆ ವರ್ಗಾವಣೆ ಮಾಡಿದೆ.

ಪ್ರತಿ ವರ್ಷದಂತೆ ಈ ಬಾರಿ ಕೂಡ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡದಲ್ಲಿ ಕೆಎಫ್ ಡಿ ಪ್ರಕರಣಗಳು ಕಳೆದ ನವೆಂಬರಿನಿಂದಲೇ ವರದಿಯಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಒಂಭತ್ತಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಬಲಿಯಾಗಿದ್ದು, 200ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಆದರೆ, ಶಿವಮೊಗ್ಗದಲ್ಲಿರುವ ಪರಿಮಾಣು ಪರೀಕ್ಷೆ ಪ್ರಯೋಗಾಲಯದ ಮೇಲೆ ತಮ್ಮ ಪ್ರಭಾವ ಬೀರಿ ಡಾ ಸುರಗಿಹಳ್ಳಿ ಅವರು ಕೆಎಫ್‌ ಡಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ತೋರಿಸಿ, ಸಾರ್ವಜನಿಕ ಒತ್ತಡ ಉಂಟಾಗದಂತೆ ನೋಡಿಕೊಳ್ಳಲು ರಕ್ತದ ಮಾದರಿಗಳ ಪರೀಕ್ಷೆಯ ಫಲಿತಾಂಶವನ್ನೇ ತಿರುಚಿತ ಗಂಭೀರ ಆರೋಪ ಕೇಳಿಬಂದಿತ್ತು. ಹೀಗೆ ವರದಿ ತಿರುಚಿ ಪಾಸಿಟಿವ್‌ ಬಂದಿದ್ದ ಪ್ರಕರಣವನ್ನು ನೆಗೆಟಿವ್‌ ಎಂದು ವರದಿ ನೀಡಿದ ಪರಿಣಾಮವಾಗಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಹದಿನೆಂಟು ವರ್ಷದ ಯುವತಿಯೊಬ್ಬರು ಕಳೆದ ಜನವರಿಯಲ್ಲಿ ಸಾವು ಕಂಡಿದ್ದರು. ಆ ಹಿನ್ನೆಲೆಯಲ್ಲಿ ಡಿಎಚ್ ಒ ಸುರಗಿಹಳ್ಳಿ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಕೆಎಫ್‌ ಡಿ ಜನಜಾಗೃತಿ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿತ್ತು.

ಕೆಎಫ್ ಡಿ ನಿರ್ವಹಣೆಯ ವಿಷಯದಲ್ಲಿ ಡಿಎಚ್ ಒ ಎಸಗಿದ ಲೋಪಗಳು ಮತ್ತು ಅಕ್ರಮಗಳ ಕುರಿತು ʼದ ಫೆಡರಲ್ ಕರ್ನಾಟಕʼ, ಸರಣಿ ವರದಿಗಳನ್ನು ಮಾಡಿತ್ತು.

ಲ್ಯಾಬ್ ಪರೀಕ್ಷಾ ವರದಿಯನ್ನು ತಿದ್ದಿರುವುದು ಮತ್ತು ತಪ್ಪು ವರದಿ ನೀಡಿ ಯುವತಿಯ ಸಾವಿಗೆ ಪರೋಕ್ಷವಾಗಿ ಕಾರಣವಾಗಿರುವುದು ದಾಖಲೆಗಳ ಮೂಲಕ ಸಾಬೀತಾಗಿರುವುದರಿಂದ ಸುರಗಿಹಳ್ಳಿ ವಿರುದ್ಧ ಗಂಭೀರ ಪ್ರಕರಣ ದಾಖಲಿಸಬೇಕು ಎಂದೂ ಒಕ್ಕೂಟ ಒತ್ತಾಯಿಸಿತ್ತು. ಬಳಿಕ ರಾಜ್ಯ ಆರೋಗ್ಯ ಇಲಾಖೆ ಪ್ರಕರಣದ ಕುರಿತು ಇಲಾಖಾ ತನಿಖೆ ನಡೆಸಿತ್ತು. ಇದೀಗ ಎರಡು ತಿಂಗಳ ಬಳಿಕ ಡಾ ಸುರಗಿಹಳ್ಳಿ ಅವರಿಗೆ ಹುದ್ದೆ ಮತ್ತು ಸ್ಥಳ ತೋರಿಸದೆ ಶಿವಮೊಗ್ಗದಿಂದ ಎತ್ತಂಗಡಿ ಮಾಡಲಾಗಿದೆ. ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಸುರಗಿಹಳ್ಳಿ ಶಿವಮೊಗ್ಗದ ಡಿಎಚ್ ಒ ಆಗಿದ್ದರು. ಈ ನಡುವೆ ಹಲವು ಅಕ್ರಮ, ಭ್ರಷ್ಟಾಚಾರ ಆರೋಪದ ಮೇಲೆ ನಡುವೆ ಕೆಲವೊಮ್ಮೆ ಅಲ್ಪಾವಧಿಗೆ ಬೇರೆಡೆ ವರ್ಗಾವಣೆ ಆದರೂ ಮತ್ತೆ ಶಿವಮೊಗ್ಗಕ್ಕೇ ವರ್ಗಾವಣೆಯಾಗಿ ಬಂದು ಅಧಿಕಾರ ಹಿಡಿದಿದ್ದರು.

ಕಳೆದ ವರ್ಷ ಕೂಡ ಅವರಿಗೆ ಬೆಂಗಳೂರಿಗೆ ವರ್ಗಾವಣೆ ಆಗಿತ್ತು. ಆದರೆ, ಪ್ರಭಾವ ಬಳಸಿ ತವರು ಜಿಲ್ಲೆಯಲ್ಲಿಯೇ ಉಳಿದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ, ಕೆಎಫ್ಡಿ ವಿಷಯದಲ್ಲಿ ನಡೆಸಿದ ಅಕ್ರಮಗಳು ಮತ್ತು ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿದೆ.

Read More
Next Story