ಕೆತ್ತಿಕಲ್‌ ಗುಡ್ಡ ಕುಸಿತ; ಅಕ್ರಮವಾಗಿ ಮಣ್ಣು ಸಾಗಣೆ ಮಾಡಿದ ಭೂ ಮಾಲೀಕರು ಹಾಗೂ ಕಂಪನಿ ವಿರುದ್ಧ ಎಫ್ ಐಆರ್ ದಾಖಲು
x
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಕೆತ್ತಿಕಲ್‌ ಗುಡ್ಡ ಕುಸಿತ; ಅಕ್ರಮವಾಗಿ ಮಣ್ಣು ಸಾಗಣೆ ಮಾಡಿದ ಭೂ ಮಾಲೀಕರು ಹಾಗೂ ಕಂಪನಿ ವಿರುದ್ಧ ಎಫ್ ಐಆರ್ ದಾಖಲು

ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ 2018ರಿಂದ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿರುವುದೇ ಈ ಅವಘಡಕ್ಕೆ ಕಾರಣ.


Click the Play button to hear this message in audio format

ಮಂಗಳೂರು: ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ 2018ರಿಂದ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿರುವುದೇ ಈ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದಕಂಡುಬಂದಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ (ಜಿಎಸ್‌ಐ) ತಾಂತ್ರಿಕ ಸಮಿತಿಯು ಪರಿಶೀಲನೆ ನಡೆಸಿ ಬಳಿಕ ತನ್ನ ಸಲಹೆಗಳನ್ನು ಜಿಲ್ಲಾಡಳಿತಕ್ಕೆ ನೀಡಿದೆ. ಅವುಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಮೂಲಕ ಮಂಗಳೂರು ಮಹಾನಗರ ಪಾಲಿಕೆಯು ಸಮೀಕ್ಷೆಯನ್ನು ಪ್ರಾರಂಭಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕೋರಿಕೆಯಂತೆ ಐಐಟಿ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದು ಈ ಅವಘಡಕ್ಕೆ ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ಭೂ ಮಾಲೀಕರು ಮತ್ತು ಕಾಮಗಾರಿ ನಡೆಸಿದ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಎಂಪಿ ತಿಳಿಸಿದ್ದಾರೆ. ವೆಟ್‌ವೆಲ್‌ಗೆ ( ನೀರು ಶುದ್ದೀಕರಣ ಘಟಕ) ಹಾನಿ ಮಾಡಿದ್ದಕ್ಕಾಗಿ ಎಂಸಿಸಿ ಕೂಡ ಎಫ್‌ಐಆರ್ ದಾಖಲಿಸಿದೆ ಎಂದು ಅವರು ಹೇಳಿದರು.

ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ

ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು. ಆದರೂ ಯೋಜನೆಯು ಅರ್ಹರನ್ನು ತಲುಪುತ್ತಿದೆಯೇ ಎಂದು ಖಚಿತಪಡೆದುಕೊಳ್ಳಲಾಗುತ್ತಿದೆ. ಸರಕಾರದ ಯಾವುದೇ ಯೋಜನೆ ದುರ್ಬಳಕೆ ಆಗಬಾರದು. ಇದರಿಂದ ಸರ್ಕಾರದ ಹಣ ಸೋರಿಕೆಯಾಗುತ್ತದೆ ಎಂದರು.

ಹಳೆಯ ಸೇತುವೆಯ ದುರಸ್ತಿ

ಜಿಲ್ಲೆಯ ಹಳೆಯ ಸೇತುವೆಗಳ ಸ್ಥಿರತೆ ಸಮಸ್ಯೆ ಕುರಿತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇತುವೆಗಳ ಸ್ಥಿತಿಗತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು. ಏಳು ಸೇತುವೆಗಳನ್ನು ಹೊರತುಪಡಿಸಿ, ಇತರವುಗಳು ಸಮರ್ಥವಾಗಿ ಎಂದು PWD ಯಿಂದ ಪ್ರಮಾಣೀಕರಿಸಲಾಗಿದೆ. ಆಗಸ್ಟ್ 19 ರೊಳಗೆ ಕೂಳೂರು ಹಳೆಯ ಸೇತುವೆಯ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ NHAI ಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಭಾರಿ ವಾಹನಗಳ ಸಂಚಾರವನ್ನು ನಿಷೇಧ

ಹಳೆ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಆಗಸ್ಟ್ 19, 20 ಮತ್ತು 21 ರಂದು ಲಘು ವಾಹನಗಳ ಟ್ರಯಲ್ ರನ್ ಮಾಡಲಾಗುವುದು. ಈ ಸಮಯದಲ್ಲಿ ಹೊಸ ಸೇತುವೆಯ ಮೇಲೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮತ್ತು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಭಾರಿ ವಾಹನಗಳು ಸಂಚರಿಸಲು ಅವಕಾಶ ನೀಡಲಾಗುವುದು. ಉಡುಪಿ ಮೂಲಕ ಕೇರಳಕ್ಕೆ ಹೋಗುವ ವಾಹನಗಳು ಮೂಲ್ಕಿ-ಸುರತ್ಕಲ್-ಎಂಪಿಆರ್ಎಲ್-ಬಜ್ಪೆ-ಕೆಪಿಟಿ-ನಾಥೋರ್ ಮೂಲಕ ಮತ್ತು ಉಡುಪಿ, ಸುರತ್ಕಲ್, ಬೆಂಗಳೂರು ಕಡೆಗೆ ಹೋಗುವ ವಾಹನಗಳು ಉಡುಪಿ-ಮುಲ್ಕಿ-ಮೂಡಬಿದ್ರಿ-ಬಂಟ್ವಾಳ ಮೂಲಕ ಹಾದು ಹೋಗಬೇಕು. ಹೊಸ ಸೇತುವೆಯನ್ನು ಇತರ ಭಾರೀ ವಾಹನಗಳ ದ್ವಿಮುಖ ಸಂಚಾರಕ್ಕೆ ಬಳಸಲಾಗುವುದು. ಕೂಳೂರು ಹಳೆ ಸೇತುವೆ ಮೇಲೆ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಟ್ರಯಲ್ ರನ್ ನಂತರ ಅಗತ್ಯ ಬದಲಾವಣೆಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

Read More
Next Story