
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿಐ 2ನೇ ಹಂತದ ಮಾನ್ಯತೆ
ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಪ್ರಯಾಣಿಕರು ಸುಲಭವಾಗಿ ಸಂಚರಿಸಲು ಬೇಕಾದ ಅಗತ್ಯ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಈ ಮಾನ್ಯತೆ ನೀಡಲಾಗಿದೆ.
ಪ್ರಯಾಣಿಕ ಸ್ನೇಹಿ ಸೌಲಭ್ಯ, ತಂತ್ರಜ್ಞಾನ ಬಳಕೆ ಮತ್ತು ಸುಲಭ ಪ್ರವೇಶ ವ್ಯವಸ್ಥೆಗಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಎಲ್) ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯ (ಎಸಿಐ) 2ನೇ ಹಂತದ ಪ್ರವೇಶ ವರ್ಧಕ ಮಾನ್ಯತೆ ಪಡೆದಿದೆ.
ಆ ಮೂಲಕ ಎಸಿಐ ಎರಡನೇ ಪ್ರಮಾಣ ಪತ್ರ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎಎಲ್ ಪಾತ್ರವಾಗಿದೆ. ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಪ್ರಯಾಣಿಕರು ಸುಲಭವಾಗಿ ಸಂಚರಿಸಲು ಬೇಕಾದ ಅಗತ್ಯ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಈ ಮಾನ್ಯತೆ ನೀಡಲಾಗಿದೆ.
ಎಸಿಐ ಮಾನ್ಯತೆಯು ಕೇವಲ ಮೂಲಸೌಕರ್ಯವನ್ನು ಮಾತ್ರ ಪರಿಗಣಿಸುವುದಿಲ್ಲ,ಪ್ರಯಾಣಿಕರ ಅನುಭವವನ್ನು ಒಳಗೊಂಡಿರುತ್ತದೆ. ಈ ಮಾನ್ಯತೆ ನಮ್ಮ ತಂಡದ ಪರಿಶ್ರಮ ಮತ್ತು ಪ್ರಯಾಣಿಕರ ವಿಶ್ವಾಸದ ಫಲವಾಗಿದೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಹೇಳಿದ್ದಾರೆ.
ಎಸಿಐ ಮಾನ್ಯತೆಯ ಪ್ರಾಮುಖ್ಯತೆ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ಎಸಿಐ) ಪ್ರವೇಶ ವರ್ಧಕ ಮಾನ್ಯತೆ ಕಾರ್ಯಕ್ರಮದಡಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಭವ, ತಂತ್ರಜ್ಞಾನ ಬಳಕೆ, ಮತ್ತು ಸುಲಭ ಪ್ರವೇಶ ಸೌಲಭ್ಯಗಳನ್ನು ಮೌಲ್ಯಮಾಪನ ಮಾಡಿ ಮಾನ್ಯತೆ ನೀಡುತ್ತದೆ. ಪ್ರಸ್ತುತ 170 ದೇಶಗಳ 2,181 ವಿಮಾನ ನಿಲ್ದಾಣಗಳು ಮತ್ತು 830 ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸಿಐ ಸಂಸ್ಥೆಯು ಜಾಗತಿಕ ವಿಮಾನಯಾನ ಸುರಕ್ಷತೆ, ಭದ್ರತೆ ಮತ್ತು ದೀರ್ಘಕಾಲಿಕತೆಯನ್ನು ಉತ್ತೇಜಿಸಲಿದೆ.
ಎಸಿಐ ಕಾರ್ಯವೇನು?
ಎಸಿಐ ವಿಶ್ವವು ಜಾಗತಿಕ ವಿಮಾನಯಾನ ಉದ್ಯಮದ ಭದ್ರತೆ, ಸುರಕ್ಷತೆ ಹಾಗೂ ಸ್ಥಿರತೆ ಉತ್ತೇಜಿಸಲು ನೀತಿ ರೂಪಿಸುವ ಹಂತಗಳಲ್ಲಿ ವಿಮಾನ ನಿಲ್ದಾಣಗಳ ಹಿತಾಸಕ್ತಿ ಪ್ರತಿನಿಧಿಸಲಿದೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮತ್ತು ನಿಯಂತ್ರಣ ಸಂಸ್ಥೆಗಳಾದ ಐಸಿಎಒ (ICAO) ಮುಂತಾದವರೊಂದಿಗೆ ಸೇರಿ ಜಾಗತಿಕ ಮಟ್ಟದ ನೀತಿಗಳು, ಕಾರ್ಯಕ್ರಮಗಳು ಮತ್ತು ಉತ್ತಮ ಅಭ್ಯಾಸಗಳನ್ನು ರೂಪಿಸಲಿದೆ.