CET Exam Malpractice | ಸಿಇಟಿ ಅಕ್ರಮ ತಡೆಯಲು ʻಎಐʼ ತಂತ್ರಜ್ಞಾನದ ಮೊರೆಹೋದ ಕೆಇಎ
x

CET Exam Malpractice | ಸಿಇಟಿ ಅಕ್ರಮ ತಡೆಯಲು ʻಎಐʼ ತಂತ್ರಜ್ಞಾನದ ಮೊರೆಹೋದ ಕೆಇಎ


ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (NEET) ಅಕ್ರಮದ ಆರೋಪ ಕೇಳಿಬಂದ ಬೆನ್ನಲ್ಲೆ, ರಾಜ್ಯದಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿ ಅಕ್ರಮ ತಡೆಯಲು 'ಕೃತಕ ಬುದ್ದಿಮತ್ತೆ (ಎಐ)' ತಂತ್ರಜ್ಞಾನ ಅಳವಡಿಸಲು ಅನುಮತಿಗಾಗಿ ಸರ್ಕಾರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸ್ತಾವ ಸಲ್ಲಿಸಿದೆ.

ರಾಜ್ಯ ಸರ್ಕಾರದ ನಾನಾ ಇಲಾಖೆ, ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಹಿಂದೆ ಸಾಕಷ್ಟು ಅಕ್ರಮ ನಡೆದ ಬಗ್ಗೆ ಆಗಾಗ್ಗೆ ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಸಾಮೂಹಿಕ ನಕಲು, ಬ್ಲೂಟೂತ್ ಬಳಕೆ, ಅಸಲಿ ವ್ಯಕ್ತಿಯ ಬದಲು ನಕಲಿ ವ್ಯಕ್ತಿ ಪರೀಕ್ಷೆ ಬರೆಯಲು ಹಾಜರಾಗುವುದು ಇಂತಹ ಅಕ್ರಮಗಳನ್ನು ತಡೆಯಬೇಕಿದೆ. ಹಾಗಾಗಿ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಳ್ಳಮಾರ್ಗ ಅನುಸರಿಸುವ ಅಭ್ಯರ್ಥಿಗಳ ಮೇಲೆ ಕಣ್ಣಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ತೀರ್ಮಾನಿಸಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಹಗರಣ ನಡೆದಿತ್ತು. ಸರ್ಕಾರಿ ಉದ್ಯೋಗ ಪಡೆಯಲು ಹಣ ನೀಡಲೇಬೇಕು ಎನ್ನುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸವಾಗುತ್ತಿತ್ತು. ಇದೀಗ ಎಐ ತಂತ್ರಜ್ಞಾನ ಅಳವಡಿಸಿ ಅಕ್ರಮ ತಡೆಯಲು ಕೆಇಎ ಮುಂದಾಗಿರುವುದು, ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

Read More
Next Story