
ನೆಲ, ಜಲ ಬಳಸುವ ಕೈಗಾರಿಕೆಗಳಿಗೆ ಕನ್ನಡದ ಗೌರವ ಅನಿವಾರ್ಯ ಎಂದು ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡ ಸ್ನೇಹಿ ವಾತಾವರಣ ನಿರ್ಮಿಸಿ : ಡಾ. ಪುರುಷೋತ್ತಮ ಬಿಳಿಮಲೆ ಪತ್ರ
ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಮತ್ತು ಅಲ್ಲಿನ ಕೈಗಾರಿಕೆಗಳಲ್ಲಿ ಕನ್ನಡ ಪೂರಕ ವಾತಾವರಣ ಇರಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ವ್ಯಾಪಿಸಿರುವ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಕೈಗಾರಿಕಾ ವಲಯಗಳಲ್ಲಿ ಕನ್ನಡ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯ ತುರ್ತುವಾಗಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ ಡಾ. ಬಿಳಿಮಲೆ, “ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಕೈಗಾರಿಕೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ತಕ್ಕ ಪ್ರಾಧಾನ್ಯತೆ ನೀಡುತ್ತಿಲ್ಲ, ಆಡಳಿತ ವ್ಯವಸ್ಥೆಯಲ್ಲೂ ಕನ್ನಡ ಭಾಷೆಗೆ ಅನ್ಯಾಯ ಆಗುತ್ತಿದೆ” ಎಂದು ಟೀಕಿಸಿದ್ದಾರೆ. ರಾಜ್ಯಾದ್ಯಂತ ಕೈಗೊಂಡ ಪ್ರವಾಸದ ವೇಳೆ ಈ ಉಲ್ಲಂಘನೆಗಳು ಸ್ಪಷ್ಟವಾಗಿ ಕಂಡುಬಂದಿದ್ದವು ಎಂದು ಅವರು ತಿಳಿಸಿದ್ದಾರೆ.
ಕನ್ನಡಕ್ಕೆ ಗೌರವ ನೀಡುವುದು ಕೈಗಾರಿಕೆಗಳ ಜವಾಬ್ದಾರಿ
ನಮ್ಮ ನಾಡಿನ ನೆಲ, ಜಲ, ವಿದ್ಯುತ್ ಹಾಗೂ ಆರ್ಥಿಕ ರಿಯಾಯಿತಿಗಳಂತಹ ಮೂಲ ಸೌಕರ್ಯಗಳನ್ನು ಉಪಯೋಗಿಸುವ ಕೈಗಾರಿಕೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ತಮ್ಮ ಮೂಲ ಜವಾಬ್ದಾರಿ ಎಂದು ಬಿಳಿಮಲೆ ಉಲ್ಲೇಖಿಸಿದ್ದಾರೆ. 2022 ರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಲ್ಲಿ ನೀಡಿರುವ ಅಧಿಕಾರಗಳನ್ನು ಸರ್ಕಾರ ಬಳಸಿಕೊಂಡು, ಕನ್ನಡಕ್ಕೆ ಪ್ರಾಶಸ್ತ್ಯ ನೀಡದ ಕೈಗಾರಿಕೆಗಳಿಗೆ ದಂಡ ವಿಧಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ.
ರಸ್ತೆ-ನಿಲ್ದಾಣಗಳಿಗೆ ಕನ್ನಡಿಗರ ಹೆಸರು ನೀಡುವಂತೆ ಸಲಹೆ
ಕೈಗಾರಿಕಾ ಪ್ರದೇಶಗಳಲ್ಲಿ ಸರ್ಕಾರ ನಿರ್ಮಿಸಿರುವ ರಸ್ತೆ, ನಿಲ್ದಾಣ ಹಾಗೂ ಇತರೆ ಸೌಲಭ್ಯಗಳಿಗೆ ಸಾಧಕ ಕನ್ನಡಿಗರ ಹೆಸರು ನೀಡಬೇಕು ಎಂದು ಬಿಳಿಮಲೆ ಹೇಳಿದ್ದಾರೆ. ಜೊತೆಗೆ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಪ್ರಾಧಾನ್ಯತೆ ಹೊಂದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಈ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಕನ್ನಡಿಗರಿಗೆ “ತಾವು ಪರಕೀಯರೆ” ಎಂಬ ಭಾವನೆ ಮೂಡದಂತೆ ಮಾಡಲು ಸರ್ಕಾರವು ಬೃಹತ್ ಮಟ್ಟದಲ್ಲಿ ಯೋಜಿತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಡಾ. ಬಿಳಿಮಲೆ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

