
KPSC Controversy | ಗೆಜೆಟೆಡ್ ಪ್ರೊಬೇಷನರಿ ಹುದ್ದೆ; ಪೂರ್ವಭಾವಿ ಮರು ಪರೀಕ್ಷೆಗೆ ಕೆಎಟಿ ನಕಾರ
ಕೆಪಿಎಸ್‌ಸಿ ಈಗಾಗಲೇ ಒಮ್ಮೆ ಪರೀಕ್ಷೆ ರದ್ದುಗೊಳಿಸಿ, ಮರು ಪೂರ್ವಭಾವಿ ಪರೀಕ್ಷೆ ನಡೆಸಿದೆ. ಈ ಹಂತದಲ್ಲಿ ಮತ್ತೊಂದು ಮರು ಪೂರ್ವಭಾವಿ ಪರೀಕ್ಷೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಕೆಎಟಿ ಹೇಳಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ 384 ಗ್ರೂಪ್ ‘ಎ' ಮತ್ತು ‘ಬಿ' ಹುದ್ದೆಗಳ ನೇಮಕಕ್ಕೆ ಸಂಬಂಧಿಸಿ ಮತ್ತೊಮ್ಮೆ ಪೂರ್ವಭಾವಿ ಪರೀಕ್ಷೆ ನಡೆಸಲು ಆದೇಶಿಸಲು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧೀಕರಣ ಶುಕ್ರವಾರ ನಿರಾಕರಿಸಿದೆ.
ಕೋಲಾರದ ಡಿ ಪವಿತ್ರಾ ಹಾಗೂ ಚಳ್ಳಕೆರೆಯ ಎಸ್ ರಮೇಶ್ ಸೇರಿ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಂಗ ಸದಸ್ಯ ಎಸ್ ವೈ ವಟವಟಿ ಅವರ ನೇತೃತ್ವದ ದ್ವಿಸದಸ್ಯ ಪೀಠ ಪ್ರಕಟಿಸಿದೆ.
“ಕೆಪಿಎಸ್‌ಸಿ ಸಲ್ಲಿಸಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಈಗಾಗಲೇ ಒಮ್ಮೆ ಪರೀಕ್ಷೆ ರದ್ದುಗೊಳಿಸಿ, ಮರು ಪೂರ್ವಭಾವಿ ಪರೀಕ್ಷೆ ನಡೆಸಲಾಗಿದೆ. ಈ ಹಂತದಲ್ಲಿ ಮರು ಪೂರ್ವಭಾವಿ ಪರೀಕ್ಷೆಗೆ ಆದೇಶಿಸಲು ಸಾಧ್ಯವಿಲ್ಲ. ಪ್ರಶ್ನೆ ಪತ್ರಿಕೆಯ ಅನುವಾದದಲ್ಲಿ ಆಗಿರುವ ಲೋಪಗಳ ಬಗ್ಗೆ ತಜ್ಞರ ಸಮಿತಿ ಮರು ಪರಿಶೀಲನೆ ನಡೆಸಿ ನಿರ್ಧರಿಸಬಹುದು” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ. ಇದರಿಂದ ಕೆಪಿಎಸ್‌ಸಿ ನಿಗದಿಪಡಿಸಿರುವಂತೆ ಮುಖ್ಯ ಪರೀಕ್ಷೆಗಳು ಮಾರ್ಚ್ 28ರಿಂದ ನಿರಾತಂಕವಾಗಿ ಆರಂಭವಾಗಲಿದೆ.
ಪ್ರಕರಣದ ಹಿನ್ನೆಲೆ
ಕರ್ನಾಟಕ ಲೋಕಸೇವಾ ಆಯೋಗ ಮೊದಲು 2024ರ ಆಗಸ್ಟ್ 27ಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆಗ ಪ್ರಶ್ನೆಪತ್ರಿಕೆಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡುವಾಗ ಭಾರಿ ಲೋಪಗಳಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಆ ನಂತರ ಕೆಪಿಎಸ್‌ಸಿ 2024ರ ಡಿಸೆಂಬರ್ 29ಕ್ಕೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 553 ಪರೀಕ್ಷಾ ಕೇಂದ್ರಗಳಲ್ಲಿ ಮರು ಪೂರ್ವಭಾವಿ ಮರು ಪರೀಕ್ಷೆ ನಡೆಸಿತ್ತು. 2.10 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 1.05 ಲಕ್ಷ (ಶೇ.47.7) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪರೀಕ್ಷೆಯಲ್ಲೂ ಸುಮಾರು 59 ಪ್ರಶ್ನೆಗಳ ಅನುವಾದದಲ್ಲಿ ದೋಷಗಳಾಗಿದ್ದವು.
ಹೀಗಾಗಿ, ಮತ್ತೊಮ್ಮೆ ಪರೀಕ್ಷೆ ರದ್ದುಗೊಳಿಸಬೇಕು ಎಂದು ಅಭ್ಯರ್ಥಿಗಳು ಕೆಎಸ್‌ಎಟಿ ಮೊರೆ ಹೋಗಿದ್ದರು. ಆಯೋಗವು ಫೆಬ್ರವರಿ 10ರಂದು ಪೂರ್ವಭಾವಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿ 1:15ರ ಅನುಪಾತದಲ್ಲಿಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿದೆ.