ಕಸ್ತೂರಿ ರಂಗನ್ ವರದಿ | ಸಿಎಂ, ಸಂಪುಟ, ಸರ್ವಪಕ್ಷ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ: ಈಶ್ವರ ಖಂಡ್ರೆ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗ ಮತ್ತೊಂದು ಅಧಿಸೂಚನೆ ಹೊರಡಿಸಿದ್ದು, ಆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಂಪುಟ ಸಭೆ ಹಾಗೂ ಸರ್ವಪಕ್ಷ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ ಶಿಫಾರಸಿನಂತೆ ಕೇಂದ್ರ ಸರ್ಕಾರ, ರಾಜ್ಯದ 20,668 ಚದರ ಕಿಲೋ ಮೀಟರ್ ಗೂ ಹೆಚ್ಚು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೇಳಿದೆ. ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ ಮತ್ತು ಬೆಳಗಾವಿ ಸೇರಿದಂತೆ ಒಟ್ಟು ಹತ್ತು ಜಿಲ್ಲೆಗಳ 33 (ತಾಲ್ಲೂಕು ಪುನರ್ ವಿಂಗಡಣೆಯ ನಂತರ 39) ತಾಲ್ಲೂಕುಗಳ 1,533 ಗ್ರಾಮಗಳನ್ನು ಈ ವ್ಯಾಪ್ತಿಗೆ ಸೇರಿಸಲಾಗಿದೆ. ಇತ್ತೀಚಿನ ಗುಡ್ಡುಕುಸಿತ ಘಟನೆಗಳು ಮತ್ತು ಅತಿವೃಷ್ಟಿಯಂತಹ ಪ್ರಕೃತಿ ವಿಕೋಪಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಹಾಗಾಗಿ ಮತ್ತೊಮ್ಮೆ ಎಲ್ಲ ಶಾಸಕರು, ಸಚಿವರ ಅಭಿಪ್ರಾಯ ಪಡೆದು ಹೊಸ ಅಧಿಸೂಚನೆಯ ವಿಷಯದಲ್ಲಿ ಮುಂದಿನ ನಡೆ ಏನು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಈ ವರದಿ ತಿರಸ್ಕರಿಸುವ ತೀರ್ಮಾನ ಕೈಗೊಂಡಿದ್ದು, ಈಗ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಚಿವ ಸಂಪುಟದಲ್ಲಿ ಸಮಾಲೋಚಿಸಿ, ಸರ್ವ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಸಂಜಯ್ ಕುಮಾರ್ ಸಮಿತಿ
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತಂತೆ ಎಲ್ಲ ಬಾಧ್ಯಸ್ಥರೊಂದಿಗೆ ಅಂದರೆ 1533 ಗ್ರಾಮಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ನಿವಾಸಿಗಳೊಂದಿಗೆ ಚರ್ಚಿಸಿ, ಸಾಧಕ- ಬಾಧಕ ಅರಿತು ವರದಿ ನೀಡಲು ನಿವೃತ್ತ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿತ್ತು. ಆ ಸಮಿತಿ ಸದಸ್ಯರು ತಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದ್ದರು. ಆದರೆ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಜನರೊಂದಿಗೆ ಈವರೆಗೆ ಮಾತುಕತೆ ನಡೆಸಲಿಲ್ಲ ಎಂದೂ ಸಚಿವರು ಸಮಿತಿಯ ಕಾರ್ಯವಿಧಾನವನ್ನು ಬಿಚ್ಚಿಟ್ಟರು.
2015ರ ನಂತರದ ಒತ್ತುವರಿ ಮಾತ್ರ ತೆರವು
ರಾಜ್ಯ ಸರ್ಕಾರ 2015ರಲ್ಲಿ ಒಂದು ಆದೇಶ ಮಾಡಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪಟ್ಟಾಭೂಮಿ ಮತ್ತು ಒತ್ತುವರಿ ಭೂಮಿ ಎರಡೂ ಸೇರಿ 3 ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ. ಸರ್ಕಾರ ಈಗಲೂ ಅದಕ್ಕೆ ಬದ್ಧವಾಗಿದೆ. ಅದೇ ರೀತಿ ಅರಣ್ಯ ಹಕ್ಕು ಕಾಯಿದೆ ಅಡಿ ಈಗಾಗಲೇ ಅರ್ಜಿ ಸಲ್ಲಿಸಿರುವವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ. ಆದರೆ 2015ರ ನಂತರದ ಹೊಸ ಒತ್ತುವರಿ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಆ.12 ರಂದು ವಿಶ್ವ ಆನೆ ದಿನ
ಅರಣ್ಯ ಇಲಾಖೆ ಆ.12ರ - ವಿಶ್ವ ಆನೆಯ ದಿನದಂದು ಮಾನವ- ಆನೆ ಸಂಘರ್ಷ ಕುರಿತಂತೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧೀ ಕೃಷಿ ವಿಜ್ಞಾನ ಕೇಂದ್ರ-ಜಿಕೆವಿಕೆ ಆವರಣದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ಒಂದು ದಿನದ ಸಮ್ಮೇಳನದಲ್ಲಿ ಅಮೆರಿಕಾ, ಜರ್ಮನಿ, ಜಪಾನ್, ಯುಕೆ ಸೇರಿದಂತೆ 11 ರಾಷ್ಟ್ರಗಳ ಸುಮಾರು 17ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ರಾಜ್ಯಗಳ 660 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆನೆಗಳು ಮತ್ತು ಇತರ ವನ್ಯಜೀವಿಗಳು ನಾಡಿಗೆ ಬಾರದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವ ತಂತ್ರಗಾರಿಕೆ, ಪದ್ಧತಿ ಅನುಸರಿಸಲಾಗುತ್ತಿದೆ. ಯಾವ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳಲು ಈ ಸಮ್ಮೇಳನ ಸಹಕಾರಿ ಎಂದು ತಿಳಿಸಿದರು.
ಆನೆ ಸಮ್ಮೇಳನ ಏಕೆ?
ಕರ್ನಾಟಕ ಸರ್ಕಾರ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ 6395 ಆನೆಗಳಿದ್ದು, ರಾಜ್ಯ ದೇಶದಲ್ಲೇ ಗಜ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿ ಎಂಬ ಉದ್ದೇಶದಿಂದ ಆಯೋಜನೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಈವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಜನವರಿಯಲ್ಲಿ 3, ಫೆಬ್ರವರಿಯಲ್ಲಿ 4, ಮಾರ್ಚ್ ನಲ್ಲಿ 7, ಏಪ್ರಿಲ್ ನಲ್ಲಿ 7, ಮೇ ತಿಂಗಳಲ್ಲಿ1, (ಜೂನ್ ನಲ್ಲಿ 0), ಜುಲೈನಲ್ಲಿ 03 ಜನರು ಆನೆಯ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದರು.