
ಕೆಎಎಸ್ಎಸ್ ಯೋಜನೆಯಡಿ ಅನುಮೋದನೆ ವಿಳಂಬ, ತಕ್ಷಣ ಸ್ಪಂದಿಸಲು ಸರ್ಕಾರಿ ನೌಕರರ ಸಂಘ ಆಗ್ರಹ
ಈ ಅನುಮೋದನೆಗೆ ಕನಿಷ್ಠ 24 ರಿಂದ 48 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದ್ದು, ಇದರಿಂದ ತುರ್ತು ಚಿಕಿತ್ಸೆ ಅಗತ್ಯವಿರುವ ನೌಕರರು ಅನಗತ್ಯವಾಗಿ ಕಾಯುವಂತಾಗಿದೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ಜಾರಿಗೆ ತರಲಾಗಿರುವ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ" (KASS) ಅಡಿಯಲ್ಲಿ ಆಸ್ಪತ್ರೆಗಳಿಂದ ಚಿಕಿತ್ಸೆಗೆ ಅನುಮೋದನೆ ಪಡೆಯುವುದು ವಿಳಂಬವಾಗುತ್ತಿದ್ದು, ಇದರಿಂದ ತುರ್ತು ಸಂದರ್ಭಗಳಲ್ಲಿ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಪ್ರಸ್ತಾವನೆ ಸಲ್ಲಿಸಿದ ಒಂದು ಗಂಟೆಯೊಳಗೆ ಚಿಕಿತ್ಸೆಗೆ ಅನುಮೋದನೆ ನೀಡುವಂತೆ ವ್ಯವಸ್ಥೆ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.
ಪತ್ರದಲ್ಲಿನ ಪ್ರಮುಖಾಂಶಗಳೇನು?
ಕೆಎಎಸ್ಎಸ್ ಯೋಜನೆಗೆ ನೋಂದಾಯಿತವಾದ ಆಸ್ಪತ್ರೆಗೆ ನೌಕರರು ದಾಖಲಾದ ನಂತರ, ಚಿಕಿತ್ಸೆ ಆರಂಭಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈ ಅನುಮೋದನೆಗೆ ಕನಿಷ್ಠ 24 ರಿಂದ 48 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದ್ದು, ಇದರಿಂದ ತುರ್ತು ಚಿಕಿತ್ಸೆ ಅಗತ್ಯವಿರುವ ನೌಕರರು ಅನಗತ್ಯವಾಗಿ ಕಾಯುವಂತಾಗಿದೆ.
ಹಲವು ನೌಕರರು ತಾಂತ್ರಿಕ ಕಾರಣಗಳಿಂದಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ನೌಕರರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.
ಆಸ್ಪತ್ರೆಗೆ ದಾಖಲಾದ ಸರ್ಕಾರಿ ನೌಕರರ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳಿಂದ ಪ್ರಸ್ತಾವನೆ ಬಂದ ಒಂದು ಗಂಟೆಯೊಳಗೆ ಕೆಎಎಸ್ಎಸ್ ನಿಂದ ಅನುಮೋದನೆ ನೀಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಸಂಘ ಸರ್ಕಾರವನ್ನು ಕೋರಿದೆ.
ಸರ್ಕಾರವು ನೌಕರರ ಹಿತದೃಷ್ಟಿಯಿಂದ ಅಕ್ಟೋಬರ್ 1, 2025 ರಿಂದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದರೂ, ಅನುಷ್ಠಾನದಲ್ಲಿನ ಈ ರೀತಿಯ ವಿಳಂಬ ನೀತಿಯು ಯೋಜನೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ ಎಂದು ಸಂಘವು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದೆ.

