
ಇನ್ಮುಂದೆ ಕನ್ನಡದಲ್ಲಿಯೇ ಕೆಎಎಸ್ ಪ್ರಶ್ನೆ ಪತ್ರಿಕೆ; ಸರ್ಕಾರವನ್ನು ಅಭಿನಂದಿಸಿದ ಡಾ. ಪುರುಷೋತ್ತಮ ಬಿಳಿಮಲೆ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಕಾರ್ಯಶೈಲಿಯಲ್ಲಿ ಸುಧಾರಣೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಕಾರ್ಯಶೈಲಿಯಲ್ಲಿ ಸುಧಾರಣೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರಂತರ ಆಗ್ರಹ ಮಾಡಿಕೊಂಡಿದ್ದನ್ನು ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿದ್ದನ್ನು ನೆನಪಿಸಿದ್ದಾರೆ. ಸರ್ಕಾರದ ಈ ಕ್ರಮ ಅಸಂಖ್ಯಾತ ಕನ್ನಡಿಗ ಅಭ್ಯರ್ಥಿಗಳ ಉದ್ಯೋಗಾಕಾಂಕ್ಷೆಯನ್ನು ಸಾಕಾರವಾಗಿಸುವಲ್ಲಿ ಉತ್ತಮ ನಡೆಯಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರದ ಭಾಷಾಂತರ ಇಲಾಖೆ, ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ಪ್ರತಿಭಾನ್ವಿತ ಶಿಕ್ಷಣ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಬಳಸಿಕೊಂಡಲ್ಲಿ ಲೋಕಸೇವಾ ಆಯೋಗವು ಉತ್ತಮ ಹೆಸರನ್ನು ಪಡೆಯಬಹುದೆಂದು ಈ ಹಿಂದೆಯೇ ಹೇಳಿದ್ದೇನೆ. ಸರ್ಕಾರವು ಈಗ ಕನ್ನಡದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ನಿರ್ದೇಶನವನ್ನು ನೀಡಲು ಮುಂದಾಗಿದೆ. ಇದು ಕನ್ನಡಿಗ ಉದ್ಯೋಗಾರ್ಥಿಗಳಿಗೆ ವಿಶ್ವಾಸ ತುಂಬುವ ಪ್ರಯತ್ನವಾಗಿದೆ ಎಂದಿದ್ದಾರೆ.
ಸ್ವಾಯತ್ತ ಸಂಸ್ಥೆಯ ಹಣೆಪಟ್ಟಿಯೇ ಕನ್ನಡಕ್ಕೆ ವಿರೋಧಿಯಾಗಿರುವುದು ವಿಷಾದನೀಯ. ಸರ್ಕಾರದ ಶುದ್ಧೀಕರಣ ತೀರ್ಮಾನವು ಸಂಸ್ಥೆಯ ವೃತ್ತಿಪರತೆಯನ್ನು ಹೆಚ್ಚಿಸುವಂತಾದರೆ ಅದು ಕನ್ನಡದ ನಿಜವಾದ ಸೇವೆ ಎನ್ನಬಹುದಾಗಿದೆ. ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷ ನಡೆಸುವ ಪರೀಕ್ಷೆಗಳಲ್ಲಿ ಒಮ್ಮೆಯೂ ಪ್ರಮಾದ ಉಂಟಾಗದೆ ಇರಲು ಸಾಧ್ಯವಾದರೆ ಕೆಪಿಎಸ್ಯಲ್ಲಿ ಇದು ಏಕೆ ಸಾಧ್ಯವಿಲ್ಲ? ಸರ್ಕಾರದ ತೀರ್ಮಾನವು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭವಾಗುವಂತಿರಲಿ ಎಂದು ಡಾ. ಬಿಳಿಮಲೆ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರ ಅವಾಂತರ ಸೃಷ್ಟಿಷಿಸತ್ತು. ಇಂಗ್ಲೀಷ್ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ನಂತರ ಅದನ್ನು ಗೂಗಲ್ ಭಾಷಾಂತರದ ಮೂಲಕ ಕನ್ನಡಕ್ಕೆ ಅನುವಾದಿಸಲಾಗಿತ್ತು. ಅದರಿಂದ ಕನ್ನಡ ಭಾಷೆಯಲ್ಲಿ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳಿಗೆ ಬಹಳಷ್ಟು ತೊಂದರೆ ಆಗಿತ್ತು.
ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆಯಲ್ಲಿಯೇ ಪ್ರಶ್ನೆ ಪತ್ರಿಕೆ ತಯಾರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದವು. ಕನ್ನಡ ಭಾಷೆಯಲ್ಲಿಯೇ ಪ್ರಶ್ನೆ ಪತ್ರಿಕೆ ತಯಾರಿಸುವುದೂ ಸೇರಿದಂತೆ ಪರೀಕ್ಷಾ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಅಭಿನಂದನೀಯ ನಿಲುವು
ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಡಾ. ಬಿಳಿಮಲೆ ಅಭಿನಂದಿಸಿದ್ದಾರೆ.
ಆರೋಗ್ಯ ಇಲಾಖೆಯ ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಜಾರಿಗೆ ತರಲು ವೈಯಕ್ತಿಕ ಗಮನಹರಿಸಿ ರಾಜ್ಯ ಸರ್ಕಾರದ ಎಲ್ಲ ಪತ್ರ ವ್ಯವಹಾರಗಳನ್ನು, ಆದೇಶಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಪ್ರಾಧಿಕಾರಕ್ಕೆ ಭರವಸೆ ನೀಡಿದ್ದಾರೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಾಧಿಕಾರಕ್ಕೆ ವರದಿ ಕೊಟ್ಟಿರುವುದು ಸ್ವಾಗತಾರ್ಹ ಎಂದು ಆರೋಗ್ಯ ಇಲಾಖೆಯ ನಿಲುವನ್ನು ಡಾ. ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿದ್ದಾರೆ.
ಆರೋಗ್ಯ ಸಚಿವರ ಈ ಕನ್ನಡಪರ ನಿಲುವು ಬೇರೆ ಇಲಾಖೆಗಳಿಗೆ ಮಾದರಿಯಾಗಬೇಕು. ಸರ್ಕಾರದ ಎಲ್ಲ ಇಲಾಖೆಗಳ ಆಡಳಿತದಲ್ಲಿ ಕನ್ನಡದ ಅನುಷ್ಠಾನ ಸಂಪೂರ್ಣವಾದರೆ ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಸಹಜವಾಗಿ ಭರವಸೆ ಮೂಡುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಂಗ್ಲ ಭಾಷೆಯ ಸರ್ಕಾರದ ಆದೇಶಗಳನ್ನು ಹೊರಡಿಸುವುದನ್ನು ಉಲ್ಲೇಖಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಅದಕ್ಕೆ ಸ್ಪಂದಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕನ್ನಡ ಭಾಷೆಯಲ್ಲಿ ಆದೇಶ ಹಾಗೂ ಸುತ್ತೋಲೆಗಳನ್ನು ಹೊರಡಿಸಬೇಕು ಎಂದು ಆದೇಶ ಮಾಡಿದ್ದಾರೆ.