ಮಳೆ ಅನಾಹುತ | ಅಂಕೋಲ ಬಳಿ ಗುಡ್ಡ ಕುಸಿತ: ಹತ್ತು ಮಂದಿ ಸಜೀವ ಸಮಾಧಿ ಶಂಕೆ
x
ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತಗೊಂಡು 7 ಜನರು ಸಾವನ್ನಪ್ಪಿದ್ದಾರೆ.

ಮಳೆ ಅನಾಹುತ | ಅಂಕೋಲ ಬಳಿ ಗುಡ್ಡ ಕುಸಿತ: ಹತ್ತು ಮಂದಿ ಸಜೀವ ಸಮಾಧಿ ಶಂಕೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಹತ್ತಕ್ಕೂ ಹೆಚ್ಚು ಮಂದಿ ಸಜೀವ ಸಮಾಧಿಯಾಗಿದ್ದಾರೆ ಎನ್ನಲಾಗಿದೆ. ಮೃತ ದೇಹಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.


Click the Play button to hear this message in audio format

ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದ್ದು, ಒಂದೇ ಕುಟುಂಬದ ಐವರು ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿ ಸಜೀವ ಸಮಾಧಿಯಾಗಿರುವ ಶಂಕೆ ಇದೆ.

ಮಂಗಳವಾರ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಹೂತು ಹೋಗಿದ್ದಾರೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿನಲ್ಲಿ ಮೇಲೆಯೇ ಗುಡ್ಡು ಕುಸಿದಿರುವುದರಿಂದ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಕೂಡ ಮಣ್ಣಿನಡಿ ಸಿಲುಕಿದ್ದಾರೆ.

ಇದೇ ವೇಳೆ ಹೆದ್ದಾರಿ 66 ರ ಪಕ್ಕದಲ್ಲಿ ಕ್ಯಾಂಟೀನ್ ವೊಂದರ ಪಕ್ಕ ಎರಡು ಟ್ಯಾಂಕರ್‌ ನಿಲ್ಲಿಸಿ ಚಾಲಕರು ಹಾಗೂ ಕ್ಲೀನರ್‌ ಟೀ ಕುಡಿಯುತ್ತಿದ್ದರು.ಅವರೂ ಸೇರಿದಂತೆ ಕ್ಯಾಂಟೀನಿನ ಮಾಲೀಕ ದಂಪತಿ ಕೂಡ ನೆಲದಡಿಯಾಗಿದ್ದಾರೆ. ಜೊತೆಗೆ ಎರಡು ಟ್ಯಾಂಕರ್‌ ಕೂಡ ಪಕ್ಕದ ಗಂಗಾವಳಿ ನದಿಗೆ ಉರುಳಿ ಕೊಚ್ಚಿಕೊಂಡು ಹೋಗಿವೆ.

ಒಟ್ಟಾರೆ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದ್ದು, ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳಕ್ಕೆ ಅಗ್ನಿಶಾಮಕ, ಎನ್​ಡಿಆರ್​ಎಫ್ ಸಿಬ್ಬಂದಿ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ‌ ವಾಹನ ಸಂಚಾರ ಸ್ಥಗಿತಗೊಂಡಿದೆ. ಈವರೆಗೆ ಏಳು ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮಹಿಳೆಯೊಬ್ಬರ ಶವ ಮಾತ್ರ ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ.

ಮಣ್ಣಿನಡಿ ಸಿಲುಕಿ ವೃದ್ಧ ಸಾವು

ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಭಾರೀ ಮಳೆಗೆ ಗೋಡೆಯೊಂದು ಕುಸಿದು ವೃದ್ದರೊಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟ ಪ್ರತ್ಯೇಕ ಘಟನೆ ನಡೆದಿದೆ. ಮನೆಯ ಮೇಲೆ ಏಕಾಏಕಿ ಗುಡ್ಡ ಕುಸಿದ ಪರಿಣಾಮ ಗೋಡೆಯಡಿ ಸಿಲುಕಿದ ವೃದ್ಧನ ತಲೆಗೆ ಗಂಭೀರ ಏಟು ಬಿದ್ದು, ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.



Read More
Next Story