
ದ್ವೇಷ ಭಾಷಣ ತಡೆ ಮಸೂದೆ ಇಂದು ಅಂಗೀಕಾರ? ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷ ಸಜ್ಜು
ಚಳಿಗಾಲದ ಅಧಿವೇಶನದ್ವೇಷ ಭಾಷಣ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಸರ್ಕಾರದ ವಿರುದ್ಧ ಇಂದು ಮುಗಿಬೀಳುವ ಸಾಧ್ಯತೆ ಇದೆ.
ಇಂದು ವಿಧಾನಸಭಾ ಅಧಿವೇಶನ ಕಲಾಪ ಏಳನೇ ದಿನಕ್ಕೆ ಕಾಲಿಟ್ಟಿದೆ. ವಿಧಾನಸಭೆಯಲ್ಲಿಂದು ಮಹತ್ವದ ಮಸೂದೆಗಳ ಪರ್ಯಾಲೋಚನೆ, ಅಂಗೀಕಾರಗೊಳ್ಳಲಿವೆ. ಬಹುಚರ್ಚಿತ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ ಮೇಲೆ ಸರ್ಕಾರ ಚರ್ಚೆ ನಡೆಸಿ ಅಂಗೀಕಾರ ಪಡೆದುಕೊಳ್ಳಬೇಕಿದೆ. ಆದರೆ ದ್ವೇಷ ಭಾಷಣ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ.
ಇನ್ನು ಈ ಮಸೂದೆ ವಿಚಾರವಾಗಿ ಸಂಸತ್‌ನಲ್ಲಿ ಭಾರೀ ಕೋಲಾಹಲವೇ ಸೃಷ್ಟಿಯಾಗುವ ಸಾಧ್ಯತೆ ಇದೆ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ವಾಕ್ಸಮರ ನಡೆಯಲಿದೆ.
ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಬುಧವಾರ ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಅಪರಾಧಗಳ (ಪ್ರತಿಬಂಧಕ) ಅಧಿನಿಯಮ ಮಂಡನೆ ಮಾಡಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿಧೇಯಕ ಮಂಡನೆ ಮಾಡಿದರು.
ಬಿಜೆಪಿ ಸದಸ್ಯರು ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಹಗೆತನ, ದ್ವೇಷ, ಕೆಡುಕಿನ ಭಾವನೆ ಮೂಡಿಸಲು ಯತ್ನಿಸಿದರೆ ಕನಿಷ್ಠ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧವು ಪುನರಾವರ್ತನೆಯಾದರೆ ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ ಹತ್ತು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ನೀಡಲಿದೆ.
ಮಸೂದೆ ಹೇಳೋದೇನು?
ಯಾವುದೇ ಮಾಧ್ಯಮದ ಮೂಲಕ ದ್ವೇಷ ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದಕ್ಕೆ ಮಸೂದೆಯಡಿ ನಿರ್ಬಂಧ ಹೇರಲಾಗಿದೆ. ದ್ವೇಷ ಅಪರಾಧದಿಂದ ಸಂತ್ರಸ್ತರಿಗೆ ಉಂಟಾದ ಹಾನಿಯನ್ನು ಮೌಲ್ಯೀಕರಿಸಿ ನ್ಯಾಯಾಲಯವು ಪರಿಹಾರಕ್ಕೆ ಸೂಚಿಸಲಿದೆ. ಈ ಅಧಿನಿಯಮದಡಿ ದ್ವೇಷ ಅಪರಾಧವು ಜಾಮೀನು ರಹಿತವಾಗಿರಲಿದೆ. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ವಿಚಾರಣೆಗೆ ಒಳಪಡಿಸಬಹುದಾಗಿದೆ.
ಸಾಮಾಜಿಕ ಬಹಿಷ್ಕಾರ ವಿರುದ್ಧ ಮಸೂದೆ
ಇನ್ನು ಇಂದೇ ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಮಸೂದೆಯೂ ಇಂದೇ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ. ಸಮಾಜದಲ್ಲಿ ಅನಿಷ್ಠ ಪದ್ಧತಿಯಾಗಿರುವ ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ಕಾಯ್ದೆ ಮೂಲಕ ಕಡಿವಾಣ ಹಾಕಲು ಸಿದ್ಧರಾಮಯ್ಯ ಸರ್ಕಾರ ಮುಂದಾಗಿದೆ.
ಈ ಮಧ್ಯೆ, ಕಾನೂನು ಸುವ್ಯವಸ್ಥೆ ಕುರಿತು ಚರ್ಚೆಗೆ ಬಿಜೆಪಿ ನಿಲುವಳಿ ನೀಡಿದೆ. ಪರಪ್ಪನ ಅಗ್ರಹಾರ ಘಟನೆಗಳು, ಅತ್ಯಾಚಾರ, ಕೊಲೆ, ದರೋಡೆ, ಡ್ರಗ್ಸ್ ಹಾವಳಿ ಇತ್ಯಾದಿ ವಿಚಾರಗಳ ಮೇಲೆ ಬಿಜೆಪಿ ಚರ್ಚೆ ನಡೆಸಲು ನಿರ್ಧರಿಸಿದೆ. ಸರ್ಕಾರದ ಮೇಲೆ ಅಂಕಿ, ಅಂಶ ಸಮೇತ ಚಾಟಿ ಬೀಸಲು ವಿಪಕ್ಷಗಳು ಸಜ್ಜಾಗಿವೆ.

