
ವಿಂಗ್ಸ್ ಇಂಡಿಯಾ-2026: ಕರ್ನಾಟಕಕ್ಕೆ ‘ನಾಗರಿಕ ವಿಮಾನಯಾನ ಶ್ರೇಷ್ಠ ರಾಜ್ಯ’ ಪ್ರಶಸ್ತಿ
ವಿಂಗ್ಸ್ ಇಂಡಿಯಾ ಎಂಬುದು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಫಿಕ್ಕಿ (FICCI) ಜಂಟಿಯಾಗಿ ಆಯೋಜಿಸುವ ಏಷ್ಯಾದ ಅತಿದೊಡ್ಡ ವಿಮಾನಯಾನ ಪ್ರದರ್ಶನವಾಗಿದೆ.
ನಾಗರಿಕ ವಿಮಾನಯಾನ ಕ್ಷೇತ್ರದ ಪ್ರತಿಷ್ಠಿತ ‘ವಿಂಗ್ಸ್ ಇಂಡಿಯಾ-2026’ರಲ್ಲಿ ಕರ್ನಾಟಕವು ‘ಸ್ಟೇಟ್ ಚಾಂಪಿಯನ್ ಇನ್ ಏವಿಯೇಷನ್’ ಪ್ರಶಸ್ತಿಗೆ ಆಯ್ಕೆಯಾಗಿದೆ. ದೇಶದ ವಿಮಾನಯಾನ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕ ನೀಡುತ್ತಿರುವ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನೀತಿ ನಿರೂಪಣೆ, ಮೂಲಸೌಕರ್ಯ ಅಭಿವೃದ್ಧಿ, ವಿಮಾನ ನಿಲ್ದಾಣ ಯೋಜನೆಗಳ ಸುಗಮಗೊಳಿಸುವಿಕೆ (ಹಸಿರು ವಲಯ ಮತ್ತು ಪ್ರಾದೇಶಿಕ ವಿಮಾನ ನಿಲ್ದಾಣ ಸೇರಿ), ಪ್ರಾದೇಶಿಕ ಸಂಪರ್ಕಕ್ಕೆ ನೀಡುತ್ತಿರುವ ಸಹಕಾರ ಒಳಗೊಂಡಂತೆ ಒಟ್ಟಾರೆ ವಿಮಾನಯಾನದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ.
ಕೇಂದ್ರ ಸರ್ಕಾರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವಾಯು ಸಂಪರ್ಕ, ಪ್ರಯಾಣಿಕರ ಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕರ್ನಾಟಕಕ್ಕೆ ಸಂದ ಈ ಗೌರವವು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ರಾಜ್ಯದ ನಾಯಕತ್ವವನ್ನು ಎತ್ತಿ ತೋರಿಸುತ್ತದೆ. ಅಲ್ಲದೇ, ಮೂಲಸೌಕರ್ಯ ಆಧಾರಿತ ಅಭಿವೃದ್ಧಿ ಮತ್ತು ಸಂಪರ್ಕ ಕೇಂದ್ರಿತ ಬೆಳವಣಿಗೆಯತ್ತ ಸಾಗುತ್ತಿರುವ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಲಿದೆ ಎಂದು ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರದ ಪರವಾಗಿ ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕರು ಹೈದರಾಬಾದ್‌ನಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
ವಿಂಗ್ಸ್ ಇಂಡಿಯಾ ಏನು, ಆಯ್ಕೆಗೆ ಕಾರಣವೇನು?
ವಿಂಗ್ಸ್ ಇಂಡಿಯಾ ಎಂಬುದು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಫಿಕ್ಕಿ (FICCI) ಜಂಟಿಯಾಗಿ ಆಯೋಜಿಸುವ ಏಷ್ಯಾದ ಅತಿದೊಡ್ಡ ವಿಮಾನಯಾನ ಪ್ರದರ್ಶನ. ಶಿವಮೊಗ್ಗ, ಕಲ್ಬುರ್ಗಿ ಮತ್ತು ವಿಜಯಪುರದಂತಹ ನಗರಗಳಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಮೂಲಕ ಕರ್ನಾಟಕವು 'ಉಡಾನ್' ಯೋಜನೆಯಲ್ಲಿ ಮುಂಚೂಣಿಯಲ್ಲಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ರಾಜ್ಯದ ವಿಮಾನಯಾನ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ವಾಯು ಸಂಪರ್ಕವು ಕೇವಲ ಪ್ರಯಾಣಕ್ಕೆ ಮಾತ್ರವಲ್ಲದೆ, ರಾಜ್ಯಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಗೂ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ‘ಸ್ಟೇಟ್ ಚಾಂಪಿಯನ್ ಇನ್ ಏವಿಯೇಷನ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ಸ್ಟೇಟ್ ಚಾಂಪಿಯನ್’ ಪ್ರಶಸ್ತಿ ಹಿನ್ನೆಲೆ
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಂಗ್ಸ್ ಇಂಡಿಯಾ ಕಾರ್ಯಕ್ರಮದಲ್ಲಿ ವಿಮಾನಯಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ರಾಜ್ಯಗಳಿಗೆ ʼಸ್ಟೇಟ್ ಚಾಂಪಿಯನ್ʼ ಪ್ರಶಸ್ತಿ ನೀಡಲಾಗುತ್ತದೆ. 2024 ರಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ತೋರಿದ ಅತ್ಯುತ್ತಮ ಪ್ರಗತಿಗಾಗಿ ಉತ್ತರ ಪ್ರದೇಶಕ್ಕೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿತ್ತು.
2022 ರಲ್ಲಿ ಯಾವುದೇ ಒಂದು ನಿರ್ದಿಷ್ಟ ರಾಜ್ಯಕ್ಕೆ 'ಚಾಂಪಿಯನ್' ಪ್ರಶಸ್ತಿ ನೀಡಿರಲಿಲ್ಲ. ಬದಲಾಗಿ, ವಿಮಾನಯಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾಗಿರುವ ರಾಜ್ಯಗಳೆಂದು ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನು ಗುರುತಿಸಲಾಗಿತ್ತು.
2018 ರಲ್ಲಿಉತ್ತರ ಪ್ರದೇಶವು ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ರಾಜ್ಯವಾಗಿ ಹೊರಹೊಮ್ಮಿತ್ತು.

