
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಹೆಚ್ಚುತ್ತಿದೆ ಚಳಿ; ನಾಳೆಯಿಂದ ಮಳೆ ಸಾಧ್ಯತೆ
ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಜನವರಿ 9 (ಶುಕ್ರವಾರ) ರಿಂದ ಜನವರಿ 12ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾದರೆ ಮತ್ತೊಂದೆಡೆ ಅಕಾಲಿಕ ಮಳೆಯ ಆತಂಕವೂ ಎದುರಾಗಿದೆ. ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ಚಳಿಯ ಅಬ್ಬರ ಮುಂದುವರಿಯಲಿದ್ದು, ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ನಾಳೆಯಿಂದ (ಜ. 9) ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಗುರುವಾರ ಎಚ್ಚರಿಕೆ ನೀಡಿದೆ.
ಉತ್ತರ ಕರ್ನಾಟಕದಲ್ಲಿ 'ಶೀತಗಾಳಿ' ಅಬ್ಬರ
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಬೀದರ್, ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತಾಪಮಾನ ಈಗಾಗಲೇ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.
ಬೀದರ್: ಗುರುವಾರ ಬೆಳಿಗ್ಗೆ ರಾಜ್ಯದಲ್ಲೇ ಅತಿ ಕಡಿಮೆ, ಅಂದರೆ 6.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 7.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ, ತುಮಕೂರಿನಲ್ಲಿ 7.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ರಾಜಧಾನಿಯಲ್ಲೂ ಚಳಿಯ ತೀವ್ರತೆ ಹೆಚ್ಚಿದ್ದು, ಹೊರವಲಯದಲ್ಲಿ 9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ನಾಳೆಯಿಂದ ಮಳೆ
ಕೇವಲ ಚಳಿ ಮಾತ್ರವಲ್ಲದೆ, ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಜನವರಿ 9 (ಶುಕ್ರವಾರ) ರಿಂದ ಜನವರಿ 12ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ಅಕಾಲಿಕ ಮಳೆಯ ಮುನ್ಸೂಚನೆ ಇರುವುದರಿಂದ, ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ತಂಪಾದ ಗಾಳಿಯ ತೀವ್ರತೆ ಹೆಚ್ಚಾಗಿದೆ. ರೈತರು ಕಟಾವಿಗೆ ಬಂದಿರುವ ಬೆಳೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

