
KSRTC-BMTC Bus Strike | ಸಾರಿಗೆ ನೌಕರರ ಮುಷ್ಕರ; ಕೆಎಸ್ಆರ್‌ಟಿಸಿ ಬಸ್‌ಗಳ ಮೇಲೆ ಹಲವೆಡೆ ಕಲ್ಲು ತೂರಾಟ
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ರಾಯಚೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಮುಂತಾದ ನಗರಗಳಲ್ಲಿ ಬಸ್ ಸೇವೆಗಳು ಭಾಗಶಃ ಸ್ಥಗಿತಗೊಂಡಿದ್ದು, ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ.
ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಹೊರತಾಗಿಯೂ ರಾಜ್ಯ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರದಿಂದಾಗಿ ಬಸ್ ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯದ ಕಾರಣ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರು ಪರದಾಡಿದರು.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ರಾಯಚೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಮುಂತಾದ ನಗರಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಭಾಗಶಃ ಸ್ಥಗಿತಗೊಂಡಿತ್ತು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರದ ಮಾಹಿತಿಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಿದೆ. ಆ ಪ್ರಕಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಶೇ 43.9 ರಷ್ಟಿದೆ. ಒಟ್ಟು 4670 ಬಸ್‌ಗಳ ಪೈಕಿ 2025 ಬಸ್‌ಗಳು ರಸ್ತೆಗಿಳಿದಿವೆ. ಬಿಎಂಟಿಸಿ ಬಸ್ ಪ್ರಯಾಣ ಪ್ರಮಾಣ ಶೇ 99.8 ರಷ್ಟಿದೆ. 3475 ಬಸ್‌ಗಳ ಪೈಕಿ 3468 ಬಸ್‌ಗಳು ಕಾರ್ಯಾಚರಣೆಗೆ ಇಳಿದಿವೆ.
ವಾಯವ್ಯ ಸಾರಿಗೆ ನಿಗಮದ 2949 ಬಸ್‌ಗಳ ಪೈಕಿ 1752 ಬಸ್‌ಗಳು ರಸ್ತೆಗೆ ಇಳಿದಿದ್ದು, 59.4 ರಷ್ಟಿದೆ. ಕಲ್ಯಾಣ ಕರ್ನಾಟಕದ ಸಾರಿಗೆ ನಿಗಮದಲ್ಲಿ 2691 ಬಸ್‌ಗಳ ಪೈಕಿ 801 ಬಸ್‌ಗಳು ರಸ್ತೆಗೆ ಇಳಿದಿದ್ದು, ಶೇ 29.8 ರಷ್ಟು ಬಸ್‌ಗಳು ಕಾರ್ಯಾಚರಣೆಗೆ ಇಳಿದಿವೆ ಎಂದು ನಿಗಮ ತಿಳಿಸಿದೆ.
ಹಲವೆಡೆ ಕಲ್ಲು ತೂರಾಟ
ರಾಜ್ಯದ ಕೊಪ್ಪಳ, ಗದಗ ಹಾಗೂ ಕೋಲಾರ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ. ಸಾರಿಗೆ ಸಂಘಟನೆಯ ಮುಷ್ಕರ ಕರೆಗೆ ಸ್ಪಂದಿಸದೇ ರಸ್ತೆಗಿಳಿದಿದ್ದ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಈ ಮಧ್ಯೆ, ಕೆಎಸ್‌ಆರ್‌ಟಿಸಿ ಬಸ್‌ಗಳ ಅಲಭ್ಯತೆಯಿಂದ ಪ್ರಯಾಣಿಕರ ಪರದಾಟ ಮನಗಂಡ ನಿಗಮದ ಅಧಿಕಾರಿಗಳು ಖಾಸಗಿ ಬಸ್ ಹಾಗೂ ಕ್ಯಾಬ್‌ಗಳ ಮೂಲಕ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ.
ಹೈಕೋರ್ಟ್ ಸೋಮವಾರ ಸಾರಿಗೆ ನೌಕರರ ಮುಷ್ಕರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರೂ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನೌಕರರ ಸಂಘವು ಮುಷ್ಕರ ಆರಂಭಿಸಿದೆ. ಕೆಲವು ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೆಲ ಬಸ್‌ಗಳು ಸಂಚರಿಸುತ್ತಿವೆ. ಪರಿಸ್ಥಿತಿ ನಿರ್ವಹಿಸಲು ಸಾರಿಗೆ ನಿಗಮಗಳು ತರಬೇತಿನಿರತ ಬಸ್ ಚಾಲಕರನ್ನು ಕರೆಸಿಕೊಂಡಿವೆ ಎನ್ನಲಾಗಿದೆ.
ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಮೈಸೂರಿನಂತಹ ನಗರಗಳಲ್ಲಿ ಮುಂಜಾನೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಬಹುತೇಕ ಪ್ರಯಾಣಿಕರು ನಿಗದಿತ ಸ್ಥಳಗಳಿಗೆ ತೆರಳಲು ಪರ್ಯಾಯ ಮಾರ್ಗ ಹುಡುಕಿಕೊಂಡರು.
ರಾಜ್ಯ ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರ ನಡುವೆ ಸೋಮವಾರ ಸಭೆ ನಡೆಸಲಾಗಿತ್ತು. ಆದರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಮಂಗಳವಾರದಿಂದ (ಆಗಸ್ಟ್ 5) ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘಟನೆಗಳು ಘೋಷಿಸಿದ್ದವು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ, ಕರ್ನಾಟಕ ಹೈಕೋರ್ಟ್ ಮುಷ್ಕರಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿತ್ತು.
ಹೈಕೋರ್ಟ್ ಸೂಚನೆಯನ್ನು ಎಲ್ಲರೂ ಪಾಲಿಸಬೇಕು. ನೌಕರರು ನ್ಯಾಯಾಲಯದ ಆದೇಶ ಉಲ್ಲಂಘಿಸಬಹುದೇ? ಅವರು ನ್ಯಾಯಾಲಯಕ್ಕಿಂತ ಮೇಲಿದ್ದಾರೆಯೇ? ರಾಜ್ಯ ಸರ್ಕಾರ ಇದನ್ನು ನ್ಯಾಯಾಲಯದ ಗಮನಕ್ಕೆ ತರುತ್ತದೆ' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು.
ಅಲ್ಲದೇ ನಿಗದಿತ ಪ್ರಕಾರ ಸೇವೆಗಳನ್ನು ನೀಡಲು ನಾಲ್ಕು ಆರ್‌ಟಿಸಿಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದರು.
ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ
ಕೆಎಸ್‌ಆರ್‌ಟಿಸಿ, ಈಶಾನ್ಯ ಮತ್ತು ವಾಯವ್ಯ ಶಾಖೆಗಳು ಮತ್ತು ಬಿಎಂಟಿಸಿ ಒಟ್ಟಾಗಿ ಪ್ರತಿದಿನ 1.1 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತವೆ. ಬಿಎಂಟಿಸಿಯಿಂದ ಮಾತ್ರ ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ.
Live Updates
- 5 Aug 2025 2:10 PM IST
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಸಂಚಾರ
ಸಾರಿಗೆ ಮುಷ್ಕರ ಹಿನ್ನೆಲೆ ಬಾಗಲಕೋಟೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಹಾಗೂ ಕ್ರೂಸರ್ ವಾಹನಗಳು ಬಂದು ಪ್ರಯಾಣಿಕರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ಯುತ್ತಿವೆ.
- 5 Aug 2025 1:46 PM IST
ಚಾಲಕ ಹಾಗೂ ನಿರ್ವಾಹಕರ ಮನವೊಲಿಸಿದ ಕೆಎಸ್‌ಆರ್‌ಟಿಸಿ ಡಿಸಿ, ವಿದ್ಯಾರ್ಥಿಗಳಿಗಾಗಿಯೆ ಬಸ್ ಸಂಚಾರ
ಚಾಮರಾಜನಗರದಲ್ಲಿ ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ಅಶೋಕ್ ಕುಮಾರ್ ಚಾಲಕರು ಹಾಗೂ ನಿರ್ವಾಹಕರನ್ನು ಮನವೊಲಿಸಿದ್ದು ವಿದ್ಯಾರ್ಥಿಗಳಿಗಾಗಿ ಬಸ್ ಸಂಚರಿಸುವಂತೆ ಮಾಡಿದ್ದಾರೆ. ಅಧಿಕಾರಿಯ ಕಾರ್ಯವೈಖರಿಗೆ ಜಿಲ್ಲಾದ್ಯಂತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
- 5 Aug 2025 12:15 PM IST
ಆಸ್ಪತ್ರೆಗೆ ತೆರಳಲು ಬಸ್ ಸಿಗದೆ ರೋಗಿಗಳ ಪರದಾಟ, ಆಟೋ ಚಾಲಕರಿಂದ ದುಬಾರಿ ಹಣ ವಸೂಲಿ
ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಜಯದೇವ, ನಿಮ್ಹಾನ್ಸ್ ಹಾಗೂ ಕಿದ್ವಾಯಿ ಆಸ್ಪತ್ರೆಗೆ ತೆರಳಲು ರೋಗಿಗಳು ಪರದಾಡುವಂತಾಗಿದೆ. ಇಂತಹ ತುರ್ತು ಸಂದರ್ಭದಲ್ಲಿಯೂ ರೋಗಿಗಳಿಂದ ಆಟೋ ಚಾಲಕರು ದುಬಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ.
- 5 Aug 2025 12:01 PM IST
ಬಸ್‌ಗೆ ಕಾದು, ಸುಸ್ತಾಗಿ ನಿಲ್ದಾಣದಲ್ಲಿಯೇ ನಿದ್ರೆಗೆ ಜಾರಿದ ಪ್ರಯಾಣಿಕರು
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ವಿವಿಧ ಊರುಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಬಸ್‌ಗೆ ಕಾದು ಸುಸ್ತಾಗಿ ಕೊಪ್ಪಳ ಬಸ್ ನಿಲ್ದಾಣದಲ್ಲಿಯೇ ನಿದ್ರೆಗೆ ಜಾರಿದ್ದಾರೆ. ಮುಷ್ಕರದ ಹಿನ್ನೆಲೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು ಸರ್ಕಾರ ಶೀಘ್ರವೇ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
- 5 Aug 2025 11:05 AM IST
ಕೋಲಾರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಾಟ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದಾದ್ಯಂತ ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸುತ್ತಿದ್ದು, ಕೋಲಾರ ನಗರದ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಮುಂಜಾನೆಯಿಂದ ಕೋಲಾರದಲ್ಲಿ ಬಸ್ ನಿಲ್ದಾಣ ಸ್ತಬ್ದವಾಗಿತ್ತು. 10 ಗಂಟೆ ವೇಳೆಗೆ ಅಧಿಕಾರಿಗಳು ಒಂದೆರಡು ಬಸ್ಸುಗಳನ್ನು ನಿಲ್ದಾಣಕ್ಕೆ ಕಳುಹಿಸಿದ್ದಾರೆ. ಈ ವೇಳೆ ಕಿಡಿಗೇಡಿಯಿಂದ ಕಲ್ಲು ತೂರಾಟ ನಡೆದಿದ್ದು, ಬಸ್ಸಿನ ಕಿಟಿಕಿ ಗಾಜು ಪುಡಿಯಾಗಿದೆ.
- 5 Aug 2025 10:11 AM IST
ಸಾರಿಗೆ ಮುಷ್ಕರ; ತುಮಕೂರಿ ವಿವಿಯಿಂದ ಪರೀಕ್ಷೆ ಮುಂದೂಡಿಕೆ
ಸಾರಿಗೆ ಮುಷ್ಕರದ ಪರಿಣಾಮ ಇಂದು ನಡೆಯಬೇಕಿದ್ದ ಬಿಎ ಪದವಿ ಪರೀಕ್ಷೆಗಳನ್ನು ತುಮಕೂರು ವಿವಿ ಮುಂದೂಡಿಕೆ ಮಾಡಿದೆ. ತುಮಕೂರು ವಿ.ವಿಯ ಅಡಿಯಲ್ಲಿ ಇಂದು ನಡೆಯಬೇಕಿದ್ದ ಎಲ್ಲಾ ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ. ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಲು ತೊಂದರೆಯಾಗಿದೆ ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಿಕೆ ಆಗಿದೆ. ಮರು ನಿಗದಿಯಾದ ದಿನಾಂಕಗಳ ಬಗ್ಗೆ ಶೀಘ್ರವೇ ಮಾಹಿತಿ ನೀಡುವುದಾಗಿ ತುಮಕೂರು ವಿವಿ ಪ್ರಕಟಣೆ ಹೊರಡಿಸಿದೆ.
- 5 Aug 2025 9:55 AM IST
ಕೊಪ್ಪಳದಲ್ಲಿ ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು
ಕೊಪ್ಪಳದಲ್ಲಿ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟಿದ್ದರೂ ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಆಕ್ರೋಶಗೊಂಡ ಕಿಡಿಗೇಡಿಗಳು ಕುಕನೂರು ಬಳಿ ಕೆಎಸ್ಆರ್ಟಿಸಿ ಬಸ್‌ಗೆ ಕಲ್ಲು ತೂರಿದ್ದಾರೆ.
ಸೋಮವಾರ ರಾತ್ರಿ ಯಲಬುರ್ಗಾ ಡಿಪೊದ ಬಸ್ ಯಲಬುರ್ಗಾದಿಂದ ಬೆಂಗಳೂರಿಗೆ ತೆರಳುವಾಗ ಈ ಘಟನೆ ನಡೆದಿದೆ. ಕಲ್ಲು ತೂರಿದ್ದರಿಂದ ಬಸ್‌ನ ಮುಂಭಾಗದ ಗಾಜಿಗೆ ಹಾನಿಯಾಗಿದೆ.
- 5 Aug 2025 9:54 AM IST
ಮೈಸೂರಿನಲ್ಲಿ ಬಸ್ ಇಲ್ಲದೆ ಜನರ ಪರದಾಟ
ಮೈಸೂರಿನಲ್ಲಿ ಸಾರಿಗೆ ಮುಷ್ಕರದಿಂದಾಗಿ ಕೆಲಸ-ಕಾರ್ಯಕ್ಕೆ ಹೋಗುವವರು ಕಾದು ನಿಂತಿದ್ದಾರೆ. ತುಮಕೂರು, ನಾಗಮಂಗಲ ಕಡೆ ಹೋಗಲು ಜನರು ಪರದಾಡಿದ್ದಾರೆ. ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕಾದು ಕುಳಿತಿರುವ ದೃಶ್ಯ ಕಂಡು ಬಂದಿದೆ. ಬೆಂಗಳೂರು, ಗುಂಡ್ಲುಪೇಟೆ ಸೇರಿ ಕೆಲವೆಡೆ ಮಾತ್ರ ಕೆಲವೇ ಬಸ್ ಗಳ ಸಂಚಾರ ಇದೆ. ಊರುಗಳಿಗೆ ತೆರಳಲು ಬಸ್ ಗಳಲ್ಲಿದೆ ಜನರು ಪರದಾಡಿದ್ದಾರೆ.
- 5 Aug 2025 9:51 AM IST
ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿದ ಕೆಎಸ್‌ಆರ್‌ಟಿಸಿ ಚಾಲಕ
ಸಾರಿಗೆ ಮುಷ್ಕರದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋದ ಪರಿಣಾಮ ಮಹಿಳಾ ಪ್ರಯಾಣಿಕರು ‘ಫ್ರೀಂ ಸ್ಕೀಂ ಬೇಡವಾಗಿತ್ತು’ ಎಂದು ಗೊಣಗಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಶ್ರೀನಿವಾಸಪುರ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಎಂದು ಪ್ರಯಾಣಿಕರನ್ನ ಅರ್ಧ ದಾರಿಯಲ್ಲೇ ಬಿಟ್ಟು ಹೋಗಿದ್ದಾರೆ.