ಸಾರಿಗೆ ಮುಷ್ಕರ: ಫ್ರೀಡಂ ಪಾರ್ಕ್‌ನಲ್ಲಿ ನೌಕರರಿಂದ ಸಾಂಕೇತಿಕ ಉಪವಾಸ ಸತ್ಯಾಗ್ರಹ
x

ಬೆಂಗಳೂರಿನ ಫ್ರೀಡಂಪಾರ್ಕ್ ಸಾರಿಗೆ ನೌಕರರಿಂದ ಪ್ರತಿಭಟನೆ

ಸಾರಿಗೆ ಮುಷ್ಕರ: ಫ್ರೀಡಂ ಪಾರ್ಕ್‌ನಲ್ಲಿ ನೌಕರರಿಂದ ಸಾಂಕೇತಿಕ ಉಪವಾಸ ಸತ್ಯಾಗ್ರಹ

ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರು, ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.


ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬುಧವಾರ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ.

ಪ್ರಮುಖವಾಗಿ 38 ತಿಂಗಳ ಭತ್ಯೆ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. 4 ನಿಗಮಗಳ ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಪಾವತಿಸದಿರುವುದು, ತಡೆಹಿಡಿಯಲಾಗಿರುವ ವೇತನ ಪರಿಷ್ಕರಣೆ ಜಾರಿಗೊಳಿಸದಿರುವುದು ಮುಷ್ಕರಕ್ಕೆ ಪ್ರಮುಖ ಕಾರಣ.

ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತ ಸುಬ್ಬರಾವ್ ಮಾತನಾಡಿ, "ಆಗಸ್ಟ್ 5 ರಂದು ನಮ್ಮ ಮುಷ್ಕರ ಶತಸಿದ್ಧ. ನಾವು ಈಗಾಗಲೇ 22 ದಿನಗಳ ಮುಂಚಿತವಾಗಿ ನೋಟಿಸ್ ನೀಡಿದ್ದೇವೆ. ಇದಕ್ಕಾಗಿ ನಮ್ಮ ಮೇಲೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ) ಜಾರಿ ಮಾಡಿದ್ದಾರೆ. ಜುಲೈ 1 ರಿಂದ ಡಿಸೆಂಬರ್ ತನಕ ಮುಷ್ಕರ ಮಾಡುವ ಹಾಗಿಲ್ಲ ಎಂದು ಎಸ್ಮಾ ಜಾರಿಗೊಳಿಸಿದ್ದರೂ, ನಾವು ಇದಕ್ಕೆ ಬಗ್ಗುವುದಿಲ್ಲ. ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಈ ಕುರಿತು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಇಂದು ರಾಜ್ಯದ ಮೂಲೆಮೂಲೆಗಳಿಂದ ಸಾರಿಗೆ ನೌಕರರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ಇದು ಸರ್ಕಾರಕ್ಕೆ ನೀಡಿದ ಅಂತಿಮ ಎಚ್ಚರಿಕೆಯಾಗಿದ್ದು, ಆಗಸ್ಟ್ 4 ಸರ್ಕಾರಕ್ಕೆ ಅಂತಿಮ ಗಡುವಾಗಿದೆ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.

ಬೇಡಿಕೆಗಳು ಈಡೇರದ ಪಕ್ಷದಲ್ಲಿ, ಆಗಸ್ಟ್ 5 ರಂದು ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದ್ದು, ಒಂದೇ ಒಂದು ಬಸ್ ಕೂಡ ರಸ್ತೆಗೆ ಇಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಈಗಲೂ ಸಮಯಾವಕಾಶವಿದೆ ಎಂದು ನೌಕರರು ತಿಳಿಸಿದ್ದಾರೆ.


Read More
Next Story